ರಸ್ತೆಗಾಗಿ ಜಮೀನು ಪಡೆದುಕೊಂಡ ಜೆಎಸ್‌ಡಬ್ಲ್ಯೂ ಕಂಪನಿಯು ಜಮೀನು ಕೊಟ್ಟವರಿಗೆ ಉದ್ಯೋಗ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಕುಡುತಿನಿ ಗ್ರಾಮದ ಭೂಸಂತ್ರಸ್ತ ರೈತರು ಕಂಪನಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
“ಯಾವುದೇ ಕೈಗಾರಿಕೆ ಅಥವಾ ಕಾರ್ಖಾನೆ ಸ್ಥಾಪನೆಯ ಸಂದರ್ಭದಲ್ಲಿ ಜಮೀನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಜಮೀನು ಮಾಲಿಕರಿಗೆ ಪರಿಹಾರ ಮತ್ತು ಉದ್ಯೋಗ ನೀಡಬೇಕೆಂಬ ನಿಯಮವಿದೆ. ಆದರೆ ಈ ಜೆಎಸ್‌ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ರಸ್ತೆಗಾಗಿ ವಶಪಡಿಸಿಕೊಂಡು ಇಂದಿಗೆ ಸುಮಾರು ಐದು ವರ್ಷಗಳಾಗಿವೆ. ನಮ್ಮ ಜಮೀನಿಗೆ ಕೇವಲ ಪರಿಹಾರವನ್ನು ಮಾತ್ರ ನೀಡಿರುವ ಕಂಪನಿಯು ನಮ್ಮ ಕುಟುಂಬಕ್ಕೆ ಉದ್ಯೋಗ ನೀಡದೇ ವಂಚನೆ ಮಾಡುತ್ತಾ ಬರುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂದು” ಒತ್ತಾಯಿಸಿ ಇಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು.
ದೂರು ಸಲ್ಲಿಸಿ ಮಾತನಾಡಿದ ಜಮೀನು ಕಳೆದುಕೊಂಡ ರೈತನ ಮಗ ಸಿ ಆನಂದ್ ಕುಮಾರ್, “ಜೆಎಸ್‌ಡಬ್ಲ್ಯೂ ಕಾರ್ಖಾನೆ ನಮ್ಮ ಜಮೀನನ್ನು ವಶಪಡಿಸಿಕೊಂಡಿದ್ದು, ನಮ್ಮ ಕುಟುಂಬಕ್ಕೆ ಕೈಗಾರಿಕಾ ಕಾನೂನು ಪ್ರಕಾರ ಒಂದು ಉದ್ಯೋಗವನ್ನು ನೀಡಬೇಕಾಗಿರುತ್ತದೆ. ಆ ಉದ್ಯೋಗಕ್ಕಾಗಿ ನಾವು ಅಲೆದು ಅಲೆದು ಸಾಕಾಗಿ ಹೋಗಿ ಮೇಲ್ಕಂಡ 10 ಕುಟುಂಬಗಳ ರೈತರ ಮನೆಗೆ ಒಂದರಂತೆ 10 ಉದ್ಯೋಗ ಕೊಡಿಸಬೇಕೆಂದು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೆವು. ದೂರಿನನ್ವಯ ಜಿಲ್ಲಾಧಿಕಾರಿಗಳು ಜಿಂದಾಲ್ ಕಾರ್ಖಾನೆಗೆ ಉದ್ಯೋಗ ನೀಡುವಂತೆ ಪತ್ರವನ್ನು ಸಹ ಬರೆದಿರುತ್ತಾರೆ. ಈ ಪತ್ರಕ್ಕೆ ಕ್ಯಾರೆ ಎನ್ನದ ಜೆಎಸ್‌ಡಬ್ಲ್ಯೂ ಅಧಿಕಾರಿಗಳು ಇಂದಿಗೂ ಉದ್ಯೋಗ ನೀಡದೆ, ಆಗ ಈಗ ಎಂದು ವಂಚಿಸುತ್ತಾ ಬರುತ್ತಿದ್ದಾರೆ. ಇದರಿಂದ ಕುಟುಂಬ ನಡೆಸುವುದು ಬಹಳ ದುಃಸ್ತರವಾಗಿದೆ” ಎಂದರು.
ಇದನ್ನೂ ಓದಿ: ಬಳ್ಳಾರಿ | ಜೆಎಸ್‌ಡಬ್ಲ್ಯೂ ಕಾರ್ಖಾನೆ ದುರಂತ; ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯ
ಇದಕ್ಕೂ ಮುನ್ನ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಜಿಂದಾಲ್ ಕಾರ್ಖಾನೆ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ. ಈ ದೂರಿನನ್ವಯ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಮಗೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿದ್ದು, ನ್ಯಾಯ ಕೊಡಿಸುವಂತೆ ಕುಡುತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತೇವೆ. ಆಗ ಎಫ್ಐರ್ ಕೂಡ ದಾಖಲಾಗಿರುತ್ತದೆ. ಇದಾಗಿ ಹಲವು ದಿನ ಕಳೆದರೂ ಇಲ್ಲಿಯವರೆಗೆ ಪೊಲೀಸರು ಜಿಂದಾಲ್ ಅಧಿಕಾರಿಗಳನ್ನು ಬಂಧಿಸಿರುವುದಿಲ್ಲ, ಮತ್ತು ಎಫ್ ಐ ಆರ್ ಆದ ಅಧಿಕಾರಿಗಳು ಬೇಲ್ ತೆಗೆದುಕೊಳ್ಳದೆ ರಾಜಾರೋಷವಾಗಿ ಸಮಾಜದಲ್ಲಿ ತಿರುಗಾಡುತ್ತಿದ್ದಾರೆ. ಅಲ್ಲದೆ ಒಂದು ತಿಂಗಳ ಒಳಗೆ ಎಫ್ ಐ ಆರ್ ದಾಖಲಾದ ವ್ಯಕ್ತಿಗಳಿಗೆ ಬಿ ರಿಪೋರ್ಟ್ ಹಾಕಿ ಮೊಕದ್ದಮೆಯನ್ನು ಮುಕ್ತಾಯಗೊಳಿಸಿರುತ್ತಾರೆ. ಇದು ದಲಿತರನ್ನು ಕಡೆಗಣಿಸುವ ಪೊಲೀಸರ ದೌರ್ಜನ್ಯವೇ ಸರಿ. ಆದ್ದರಿಂದ ಈ ವಿಷಯದ ಬಗ್ಗೆ ದೂರ ದಾಖಲಿಸಿಕೊಂಡು ನ್ಯಾಯ ಕೊಡಿಸಬೇಕೆಂದು ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರಿಗೆ ಮನವಿ ಸಲ್ಲಿಸಲಾಗಿದೆ.