ಕೋಲಾರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘ (ಕೋಮುಲ್) ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಠಿಣ ಪೈಪೋಟಿಯ ನಡುವೆ 13 ಮಂದಿ ನೂತನ ನಿರ್ದೇಶಕರು ಆಯ್ಕೆಯಾಗಿದ್ದು, ಈ ಫಲಿತಾಂಶ ಕೋಮುಲ್ ಆಡಳಿತದಲ್ಲಿ ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸಲಿದೆ ಎನ್ನುವ ನಿರೀಕ್ಷೆ ಮೂಡಿದೆ.
13 ನಿರ್ದೇಶಕರ ಸ್ಥಾನಗಳ ಪೈಕಿ ಕಾಂಗ್ರೆಸ್ ಬೆಂಬಲಿತ 9 ಮಂದಿ ಅಭ್ಯರ್ಥಿಗಳ ಗೆಲುವು ಸಾಧಿಸಿದರೆ, ಎನ್‌ಡಿಎ (ಜೆಡಿಎಸ್-ಬಿಜೆಪಿ) ಬೆಂಬಲಿತ 4 ಮಂದಿ ಅಭ್ಯರ್ಥಿಗಳ ಗೆಲುವಾಗಿದೆ. ಈ ಪೈಕಿ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ಕೆ ವೈ ನಂಜೇಗೌಡ ಆಯ್ಕೆಯಾಗಿದ್ದಾರೆ. ಈ ಮಧ್ಯೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಾಸಕರ ಮಧ್ಯೆಯೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶಾಂತಿಯುತವಾಗಿ ಮತದಾನ ನಡೆದ ಬಳಿಕ, ಸಂಜೆ ವೇಳೆಗೆ ಮತ ಎಣಿಕೆ ಕಾರ್ಯ ಪೂರ್ಣಗೊಂಡಿತು. ಈ ಬಾರಿ ಚುನಾವಣೆ ಅತ್ಯಂತ ತೀವ್ರ ರಾಜಕೀಯ ಸ್ಪರ್ಧೆಯ ನಡುವೆಯೇ ನಡೆದಿದ್ದು, ಜೆಡಿಎಸ್-ಬಿಜೆಪಿ ಮೈತ್ರಿ, ಕಾಂಗ್ರೆಸ್ ಹಾಗೂ ಕೆ.ಎಚ್. ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣಗಳ ನಡುವೆ ಕಾದಾಟ ಜೋರಾಗಿತ್ತು.
ವೇಮಗಲ್ ಕ್ಷೇತ್ರದಿಂದ ಬಿ ರಮೇಶ್ (ಕಾಂಗ್ರೆಸ್), ಮಾಲೂರು ಕಸಬಾ ಕ್ಷೇತ್ರದಿಂದ ಎಂ ಎನ್ ಶ್ರೀನಿವಾಸ್ (ಕಾಂಗ್ರೆಸ್), ಶ್ರೀನಿವಾಸಪುರ ಅಡ್ಡಗಲ್ ಕ್ಷೇತ್ರದಿಂದ ಕೆ ಕೆ ಮಂಜುನಾಥ್ (ಕಾಂಗ್ರೆಸ್), ಶ್ರೀನಿವಾಸಪುರ ಯಲ್ದೂರು ಕ್ಷೇತ್ರದಿಂದ ಹನುಮೇಶ್ (ಕಾಂಗ್ರೆಸ್), ಬಂಗಾರಪೇಟೆ ಕ್ಷೇತ್ರದಿಂದ ಎಸ್ ಎನ್ ನಾರಾಯಣಸ್ವಾಮಿ (ಕಾಂಗ್ರೆಸ್), ಕೆಜಿಎಫ್ ಕ್ಷೇತ್ರದಿಂದ ಜಯಸಿಂಹಕೃಷ್ಣಪ್ಪ (ಕಾಂಗ್ರೆಸ್), ಕೋಲಾರ ಜಿಲ್ಲಾ ಮಹಿಳಾ ಉತ್ತರ ಕ್ಷೇತ್ರದಿಂದ ಮಹಾಲಕ್ಷ್ಮಿ (ಕಾಂಗ್ರೆಸ್), ಕೋಲಾರ ಜಿಲ್ಲಾ ಮಹಿಳಾ ದಕ್ಷಿಣ ಕ್ಷೇತ್ರದಿಂದ ಕಾಂತಮ್ಮ (ಕಾಂಗ್ರೆಸ್), ಚಂಜಿ ಮಲೆ ಕ್ಷೇತ್ರದಿಂದ ರಮೇಶ್ ನಾಗನಾಳ (ಕಾಂಗ್ರೆಸ್), ಮುಳಬಾಗಿಲು ಪೂರ್ವ ಕ್ಷೇತ್ರದಿಂದ ಕೆ ಎಸ್ ನಾಗರಾಜ್ (ಮೈತ್ರಿ), ಮುಳಬಾಗಿಲು ಪಶ್ಚಿಮ ಕ್ಷೇತ್ರದಿಂದ ಬಿ ವಿ ಶಾಮೇಗೌಡ (ಮೈತ್ರಿ), ವಡಗೂರು ಕ್ಷೇತ್ರದಿಂದ ಡಿ.ವಿ. ಹರೀಶ್ (ಮೈತ್ರಿ), ಕೋಲಾರ ನೈರುತ್ಯ ಕ್ಷೇತ್ರದಿಂದ ಡಿ ನಾಗರಾಜ್ (ಮೈತ್ರಿ) ಜಯಶಾಲಿಗಳು.
ಇದನ್ನೂ ಓದಿ: ಕೋಲಾರ | ವೇಮಗಲ್‌ನಲ್ಲಿ ಇಂದಿರಾ ಕ್ಯಾಂಟಿನ್ ಆರಂಭ
ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಹಾಗೂ ಎನ್‌ಡಿಎ ಬೆಂಬಲಿತ 4 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು ಮತ ಕೇಂದ್ರದ ಬಳಿಯೇ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ, ಹೈಕಮಾಂಡ್ ತೀರ್ಮಾನ ಮಾಡುವ ಅಭ್ಯರ್ಥಿ ಅಧ್ಯಕ್ಷರಾಗುತ್ತಾರೆ ಎಂದರು.