2022ರಲ್ಲಿ 15,000 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಕ್ಕೆ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿತ್ತು. 70,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 13,351 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಆದರೆ, ಇಲಾಖೆಯೇ ಸೃಷ್ಠಿಸಿದ ಕೆಲವು ಗೊಂದಲದ ಅಸ್ಪಷ್ಟ ನಿಯಮಗಳ ಕಾರಣಕ್ಕಾಗಿ 300-400 ಅಭ್ಯರ್ಥಿಗಳು ನ್ಯಾಯಲಯದ ಮೊರೆ ಹೋಗಿದ್ದಾರೆ. ರಿಟ್ ಅರ್ಜಿ (W/P 23752/2022, W/A 305/2023 ಮತ್ತು W/P 5009/2023) ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಕೋರ್ಟ್ ಹೊರಡಿಸಿರುವ ಮಧ್ಯಂತರ ಆದೇಶವು ಸುಮಾರು 13,000ಕ್ಕೂ ಹೆಚ್ಚು ಅಭ್ಯರ್ಥಿಗಳ ನೇಮಕಾತಿಯ ವಿಳಂಬಕ್ಕೆ ಕಾರಣವಾಗಿದೆ ಎಂದು ಶಿಕ್ಷಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಿ ಹುದ್ದೆಗೆ ಆಯ್ಕೆಯಾದ ಕಾಣರದಿಂದ ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದೇವೆ. ಈಗ ಜೀನವ ನಿರ್ವಹಣೆಯೇ ಕಷ್ಟವಾಗಿದೆ. ಹಲವರು ಅನಿವಾರ್ಯವಾಗಿ ಬಸ್ ಏಜೆಂಟರುಗಳಾಗಿ, ಮನರೇಗಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬೀಳುವ ಅತಂಕ ಎದುರಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈಗಾಗಲೇ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳಾಗಿದ್ದು, ಸುಮಾರು 56,000ಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದೆ ಎಂದು ವರದಿಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲದ ಕಾರಣ, ಹಲವೆಡೆ ವಿದ್ಯಾರ್ಥಿಗಳ ದಾಖಲಾತಿಯೂ ಕಡಿಮೆಯಾಗಿದೆ. ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಇದು ಗುಣಮಟ್ಟದ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದಕ್ಕೆ ಶಿಕ್ಷಕರ ಕೊರತೆಯೇ ಮುಖ್ಯ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ನೇಮಕಾತಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆಗ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಈಗಾಗಲೇ, ಶಿಕ್ಷಕರ ಕೊರತೆಯಿಂದ ಸಾಕಷ್ಟು ಶಾಲೆಗಳು ಮುಚ್ಚಿವೆ. ಆದರೂ, ಇಲಾಖೆ ಮತ್ತು ಸರ್ಕಾರ ನ್ಯಾಯಾಲಯದಲ್ಲಿರುವ ನೇಮಕಾತಿ ದಾವೆಯನ್ನು ಬೇಗ ಬಗೆಹರಿಸಿ ನೇಮಕಾತಿಯನ್ನು ಪೂರ್ಣಗೊಳಿಸುವ ಇರಾದೆ ಹೊಂದಿದಂತಿಲ್ಲ. ಇದು ಹೊಸ ಸಮಸ್ಯೆಯನ್ನು ಸೃಷ್ಟಿಸಿ ಅಭ್ಯರ್ಥಿಗಳನ್ನು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳ ನೈಜತೆ ಪರಿಶೀಲನೆ ಕಾರ್ಯ 2023ರ ಮೇ ತಿಂಗಳಿನಿಂದ ಆರಂಭವಾಗಿದೆ. ಈ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದೆ. ಜೊತೆಗೆ ಜಾತಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಮಾಡಿಸಲು ಸೂಚಿಸಲಾಗುತ್ತಿದೆ. ಇದು ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ‘2016, 2017 ಮತ್ತು 2019ರ ನೇಮಕಾತಿಗಳಲ್ಲಿ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲ್ಲದ ನಿಯಮ ಈಗೇಕೆ’ ಎಂಬ ಪ್ರೆಶ್ನೆ ಅಭ್ಯರ್ಥಿಗಳಲ್ಲಿ ಮೂಡಿದೆ.
ಈ ವರದಿ ಓದಿದ್ದೀರಾ?: ರಿಪಬ್ಲಿಕ್ ಆಫ್ ಮಹಾರಾಣಿ ಕ್ಲಷ್ಟರ್ ವಿಶ್ವವಿದ್ಯಾಲಯವೂ; ಕಾಲೇಜು ಶಿಕ್ಷಣ ಇಲಾಖೆಯ ವರ್ಗಾವಣೆಯ ಅವಾಂತರವೂ
ಅಲ್ಲದೆ, ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಯಾವುದೇ ಅಂಕ ಮತ್ತು ಅರ್ಜಿ ಸಲ್ಲಿಕೆಯ ‘ಫೀಸ್’ಗಳ ವಿನಾಯ್ತಿಯನ್ನು ಪಡೆದಿರುವುದಿಲ್ಲ. ಹಿಂದಿನ ಶಿಕ್ಷಣ ಆಯುಕ್ತ ಡಾ. ವಿಶಾಲ್ ರವರು ಕೂಡ, ‘ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಡತೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಹೊರತುಪಡಿಸಿ ಯಾವುದೇ ಸಿಂಧುತ್ವ ಇರುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಅನುಸೂಚಿ/ಕಾಯ್ದೆ 1990, 1992 ಮತ್ತು 1994ರಲ್ಲಿ ಕೂಡ ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಆಥವಾ ಹೆಚ್ಚು ಅಂಕಗಳೊಂದಿಗೆ ರ್‍ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ಹೇಳುತ್ತದೆ. ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಕೂಡ ಈ ಹಿಂದಿನ ಪ್ರಕರಣಗಳಲ್ಲಿ (1814/2020 ಮತ್ತು 4602/2017) ಸಾಮಾನ್ಯ ಅರ್ಹತೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾತಿ ಮತ್ತು ಆದಾಯ ಸಿಂಧುತ್ವ ಅಗತ್ಯವಿಲ್ಲವೆಂದು ತೀರ್ಪನ್ನು ನೀಡಿದ್ದರು. ಇಷ್ಟಲ್ಲ ನಿಯಮಗಳು, ಉದಾಹರಣೆಗಳು ಇದ್ದರೂ ಕೂಡ ಮತ್ತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕೇಳುತ್ತಿರುವುದು ನಿಯಮಬಾಹಿರವೆಂದು ಕಿಡಿಕಾರಿದ್ದಾರೆ.
ಅಭ್ಯರ್ಥಿಗಳು ಹಲವು ದಾಖಲೆಗಳನ್ನು ನೀಡಿ ಜಾತಿ ಪ್ರಮಾಣ ಪತ್ರ ಬೇಕೆನ್ನುವ ಯೋಚನೆಯನ್ನು ಕೈ ಬಿಡುವಂತೆ ಮನವಿ ಮಾಡಿಕೊಂಡರು ಇಲಾಖೆಯ ಅಧಿಕಾರಿಗಳು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಇದು ಅಭ್ಯರ್ಥಿಗಳಲ್ಲಿ ಬೇಸರವನ್ನು ಮೂಡಿಸಿದೆ. ಹೀಗಾಗಿಯೇ, ಕೆಲವು ಅಭ್ಯರ್ಥಿಗಳು ನ್ಯಾಯಾಂಗದ ಮೊರೆ ಹೋಗಲು ಸಿದ್ಧರಾಗಿದ್ದಾರೆ. ಇದರಿಂದ ಈಗಾಗಲೇ ಆಮೆಗತಿಯಲ್ಲಿರುವ ನೇಮಕಾತಿಗೆ ಮತ್ತೆ ಬ್ರೇಕ್ ಬೀಳುವ ಸಾಧ್ಯತೆಗಳಿವೆ. ಇಲಾಖೆಯು ಆದಷ್ಟು ಬೇಗ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಒಂದು ಸ್ಪಷ್ಟ ನಿರ್ಧಾರಕ್ಕೆ ಬರದದಿದ್ದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಷ್ಟೆ ಅಲ್ಲದೆ, ಈಗಾಗಲೇ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳಿಗೂ ನಷ್ಟವಾಗಲಿದೆ. ಇದು ಹೀಗೆ ಮುಂದುವರೆದರೆ, ಮತ್ತೊಮ್ಮೆ ದೊಡ್ಡಮಟ್ಟದ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದು ಅಭ್ಯರ್ಥಿಗಳು ಹೇಳಿದ್ದಾರೆ.