ಟಿಬೇಟಿಯನ್ ಧರ್ಮಗುರು, ವಿಶ್ವ ಶಾಂತಿ ಮತ್ತು ಕರುಣೆಯ ಪ್ರತೀಕ ದಲೈಲಾಮಾ ಅವರ 90ನೇ ಜನ್ಮದಿನವನ್ನು ಉತ್ತರ ಕನ್ನಡ ಜಿಲ್ಲೆ ಮುಂಡಗೋಡದ ಟಿಬೇಟಿಯನ್ ಶರಣಾರ್ಥಿ ಶಿಬಿರ ಸಂಖ್ಯೆ-6 ರಲ್ಲಿರುವ ಡ್ರೆಪುಂಗ್ ಲೋಸೆಲಿಂಗ್ ಬೃಹತ್ ಬೌದ್ಧ ಮಠದಲ್ಲಿ ಭವ್ಯವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ದಲೈ ಲಾಮಾ ಅವರ ಧ್ಯಾನ, ತತ್ವ ಮತ್ತು ಮಾನವೀಯ ಸಂದೇಶಗಳನ್ನು ಚರ್ಚಿಸುವುದರ ಜೊತೆಗೆ, ಅವರ ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶಂಕರ್ ಗೌಡಿ ಮಾತನಾಡಿ, “ದಲೈ ಲಾಮಾ ಜಗತ್ತಿಗೆ ಶಾಂತಿ ಮತ್ತು ಕರುಣೆಯ ರಾಯಭಾರಿಯಾಗಿದ್ದು, ಅವರ ಸಂದೇಶಗಳು ಈ ದಿನದ ಜಗತ್ತಿಗೆ ಅತ್ಯಗತ್ಯವಾಗಿವೆ. ಮಾನವೀಯತೆ, ಸಹಿಷ್ಣುತೆ ಮತ್ತು ದಯೆಯ ಬೆಳಕು ಹಂಚುವ ಈ ಮಹಾನ್ ಧರ್ಮಗುರು ಈ ಕಾಲಘಟ್ಟದ ಅತೀವ ಅಗತ್ಯ,” ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಇಂಡೋ-ಟಿಬೇಟಿಯನ್ ಫ್ರೆಂಡ್‌ಶಿಪ್ ಸೊಸೈಟಿ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಮುಖಂಡರು ಭಾಗಿಯಾಗಿದ್ದರು. ಮಠಾಧೀಶ ಪರಮಪೂಜ್ಯ ಯೇಶಿ ತುಂಡುಪ್ ಲಾಮಾ, ದಲೈ ಲಾಮಾ ಅವರ ತತ್ವವನ್ನು ಪ್ರತಿನಿಧಿಸಿ ಮಾತನಾಡುತ್ತಾ, ಬೌದ್ಧ ತತ್ತ್ವಗಳ ಆಳವನ್ನು ವಿವರಿಸಿದರು.
ಇದನ್ನೂ ಓದಿ: https://eedina.com/world/iran-israel-conventional-war-is-indias-neutral-stance-right/2025-06-26/
ಬೌದ್ಧ ತತ್ತ್ವ, ವಿಶ್ವ ಶಾಂತಿ, ದಲೈ ಲಾಮಾ ಅವರ ಧರ್ಮದರ್ಶನ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ಆಳವಾದ ಚರ್ಚೆ ನಡೆಯಿತು.

ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕ ಎಸ್. ಪಕ್ಕೀರಪ್ಪ, ಮುಂಡಗೋಡ ಘಟಕದ ಲಕ್ಷ್ಮಣ ಭೋವಿವಡ್ಡರ ಮತ್ತು ಪರಶುರಾಮ ಪೂಜಾರ, ಅಂಬೇಡ್ಕರ್ ಸಹಕಾರಿ ಸಂಘದ ಪಿಆರ್‌ಒ ಪ್ರಮೋದ ರತ್ನಾಕರ್ ಮತ್ತು ಪೂಜ್ಯ ಜಂಪಾ ಲಾಮಾ ಗುರೂಜಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.