ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಡ್ಯಾಂಗಳು ತುಂಬಿವೆ. ಸರ್ವರಿಗೂ ಸಮಪಾಲು ನೀರು ಹಂಚಿಕೆಯಾಗಲಿದೆ. ರಾಜ್ಯಗಳ ನಡುವಿನ ಬಿಕ್ಕಟ್ಟು ಇದಲ್ಲ. ತುಮಕೂರು ರಾಮನಗರ ಎರಡೂ ನಮ್ಮದೇ. ಡಿ.ಕೆ.ಶಿವಕುಮಾರ್ ಕ್ಷೇತ್ರ ಬೇರೆ ಅಲ್ಲ, ವಾಸು ಕ್ಷೇತ್ರ ಬೇರೆ ಅಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ರಂಗನಹಳ್ಳಿ ಗೇಟ್ ಬಳಿ ನಡೆದ ಮಠದಹಳ್ಳ ಕೆರೆಗೆ ಹೇಮಾವತಿ ಹರಿಸುವ 50 ಕೋಟಿ ರೂಗಳ ನೀರಾವರಿ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಕೆ ಆರ್ ಎಸ್ ಶೇ.89, ಹೇಮಾವತಿ ಶೇ.85. ಹಾರಂಗಿ ಶೇ.72 ಕಬಿನಿ ಶೇ.85 ರಷ್ಟು ಡ್ಯಾಂ ತುಂಬಿವೆ. ಈ ನಿಟ್ಟಿನಲ್ಲಿ ಎಲ್ಲಾ ಕೆರೆಗಳಿಗೂ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ಎಲ್ಲಾ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿ ನೀರು ಹಂಚಿಕೆ ಮಾಡಲು ಸಭೆ ನಡೆಸಲು ತಿಳಿಸಿದ್ದೇನೆ ಎಂದರು.
ಎಚ್.ಡಿ.ಕುಮಾರಸ್ವಾಮಿ ಎತ್ತಿನಹೊಳೆ ಯೋಜನೆ ಯಶಸ್ವಿ ಆಗೋದಿಲ್ಲ ಎಂದಿದ್ದರು. ಆದರೆ ನಾವು ಸಾಧ್ಯ ಎಂದು ರುಜುವಾತು ಮಾಡಲು ಅಂದು ಜಯಚಂದ್ರ ಕೂಡಾ ಜೊತೆಯಲ್ಲಿ ನಿಂತು ಈ ಯೋಜನೆ ಸಫಲ ಕಾಣಿಸಿದ್ದಾರೆ. ಆಗಲ್ಲ ಎಂದವರು ನೋಡಲಿ ಅಂತ ಕಾಮಗಾರಿ ಪರಿಶೀಲನೆ ನಡೆಸಿದ್ದೇನೆ. ಅರಣ್ಯ ಪ್ರದೇಶ ಸಮಸ್ಯೆಗೆ ತುಮಕೂರು ಮತ್ತು ಹಾಸನ ಜಿಲ್ಲೆಯ ಅಧಿಕಾರಿಗಳಿಂದ ಅನುಮತಿ ದೊರೆಯಲಿದೆ. ಕೆಲಸ ಪೂರ್ಣಗೊಳ್ಳಲಿದೆ. 9 ಟಿಎಂಸಿ ನೀರು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗೆ ಕುಡಿಯುವ ನೀರು ಒದಗಳಿದೆ. ಇದನ್ನೇ ಮುಖ್ಯಮಂತ್ರಿಗಳು ನನಗೆ ಸೂಚಿಸಿದ್ದಾರೆ. ಈ ಹಿನ್ನಲೆ ಸ್ಥಳ ಪರಿಶೀಲನೆ ಮಾಡುತ್ತಿದ್ದೇನೆ ಎಂದರು.

ವಾಣಿ ವಿಲಾಸ ಡ್ಯಾಂಗೆ ಕಳೆದ ಬಾರಿ ನೀರು ಹರಿಸಲಾಗಿತ್ತು. ಈ ಬಾರಿ ಒಳ ಹರಿವು ಹೆಚ್ಚಿದೆ. 20 ಟಿಎಂಸಿ ನೀರು ಇದೆ. ಈ ಜೊತೆಗೆ ಹೇಮಾವತಿಗೆ ಹರಿಸಿ ಎಲ್ಲಡೆ ನೀರು ಹಂಚಿಕೆ ಮಾಡಲಾಗುವುದು. ಚಿಕ್ಕಬಳ್ಳಾಪುರ, ಕೋಲಾರದಲ್ಲಿ 2 ಸಾವಿರ ಅಡಿ ಬೋರ್ ವೆಲ್ ಕೊರೆಸಬೇಕಿದೆ. ನಾವೆಲ್ಲಾ ಒಂದೇ ಭಾವನೆ ಹೊಂದಿ ನೀರು ಹಂಚಿಕೆ ಮಾಡಿಕೊಳ್ಳಬೇಕು. ಕರ್ನಾಟಕ ತಮಿಳುನಾಡು ರೀತಿ ಕಿತ್ತಾಡುವುದು ಸರಿಯಲ್ಲ. ನಮ್ಮಲ್ಲೇ ಕಿತ್ತಾಟ ಬೇಕಿಲ್ಲ. ಹಾಗಾಗಿ ಶ್ರೀನಿವಾಸ್, ಕಿರಣ್ ಕುಮಾರ್, ಜಯಚಂದ್ರ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲು ಬಂದಿದ್ದೇನೆ. ನೀರಾವರಿ ಯೋಜನೆ ಮೂಲಕ ಎಲ್ಲರೂ ನೀರು ಪಡೆಯೋಣ ಎಂದು ತಿಳಿಸಿದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಹಾಗಲವಾಡಿ ಹಾಗೂ ಮಠದಹಳ್ಳ ಕೆರೆಗೆ ಹೇಮಾವತಿ ನೀರು ಹರಿಸುವ ಯೋಜನೆಗೆ ಸಾಕಷ್ಟು ತಾಂತ್ರಿಕ ಸಮಸ್ಯೆ ಅಡ್ಡಿ ಬಂದು ದಶಕ ಕಳೆದಿದೆ. ಆದರೂ ಪ್ರಯತ್ನ ಮಾಡುತಿದ್ದೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣ, ವಾಟ್ಸಾಪ್ ಗಳಲ್ಲಿ ಸುಳ್ಳಿನ ಸರಮಾಲೆ ಹರಿಬಿಟ್ಟರು. ಇದನ್ನೇ ನಂಬಿದ ಜನ ನೀರಾವರಿ ಯೋಜನೆ ಬಗ್ಗೆ ಅಪನಂಬಿಕೆ ಬೆಳೆಸಿಕೊಂಡರು. ಈ ಬಾರಿ ಬಜೆಟ್ ನಲ್ಲಿ ಉಪ ಮುಖ್ಯಮಂತ್ರಿಗಳು 50 ಕೋಟಿ ಮೀಸಲು ಇಟ್ಟರು. ಆದರೂ ನಂಬಿಕೆ ಬರುವುದಿಲ್ಲವೆಂದು ಅವರನ್ನೇ ಕರೆ ತಂದು ಭೂಮಿ ಪೂಜೆ ಮಾಡಿದ್ದೇವೆ ಎಂದ ಅವರು ಚೇಳೂರು ಮತ್ತು ಹಾಗಲವಾಡಿ ಹೋಬಳಿಗಳಿಗೆ ನೀರಿನ ಅಭಾವ ನೀಗಿಸಲು ಉಪ ಮುಖ್ಯಮಂತ್ರಿಗಳು ಭರವಸೆ ನೀಡಬೇಕು. ಈ ಎರಡು ಹೋಬಳಿ ಜನರ ನೀರಿನ ಸಂಕಷ್ಟ ಆಲಿಸಿ ಮತ್ತಷ್ಟು ನೀರಾವರಿ ಯೋಜನೆ ಜಾರಿ ಮಾಡಬೇಕು ಎಂದು ಮನವಿ ಮಾಡಿದರು
.

ಶಾಸಕ ಹಾಗೂ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ ಚೇಳೂರು, ಹಾಗಲವಾಡಿ ಭಾಗಕ್ಕೆ ನೀರು ಹರಿಸಲು 2003 ರಲ್ಲಿ 200 ಎಂಸಿಎಫ್ ಟಿ ನೀರು ಕೊಡಲು ನಿರ್ಧರಿಸಲಾಯಿತು. ಈ ಭಾಗಕ್ಕೆ ನೀರು ಹರಿಸಿದರೆ ಮುಂದುವರೆದು ಶಿರಾ ತಾಲ್ಲೂಕಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಈ ಎರಡು ಹೋಬಳಿ ನೀರಾವರಿ ಯೋಜನೆಗೆ ನಮ್ಮ ಸಾಥ್ ಇದೆ ಎಂದ ಅವರು ಜಿಲ್ಲೆಗೆ ನಮ್ಮ ಪಾಲಿನ ಹೇಮಾವತಿ ನೀರು ಎಂದಿಗೂ 24 ಟಿಎಂಸಿ ನೀರು ಹರಿದಿಲ್ಲ. ಉಪ ಮುಖ್ಯಮಂತ್ರಿಗಳು ನಮ್ಮ ಪಾಲಿನ ನೀರು ಸಂಪೂರ್ಣ ಹರಿಸಿದರೆ ಕುಣಿಗಲ್ ತಾಲ್ಲೂಕು ಸಮೃದ್ಧಿಯಾಗಿ ಮುಂದುವರೆದು ನೀರು ಹರಿಸಬಹುದು. ಈ ಜೊತೆಗೆ ಮೇಕೆದಾಟು ಯೋಜನೆ ಡಿಕೆಶಿ ಸಾಹೇಬ್ರು ಕೈಗೆತ್ತಿಕೊಂಡು ಪೂರ್ಣಗೊಳಿಸಿದರೆ ಕಾವೇರಿ ಜಲಾನಯನ ಸಮೃದ್ಧಿಯಾಗಲಿದೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳು ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ್ ಅಭಿಮಾನಿಗಳು ವಾಸಣ್ಣನವರಿಗೆ ಮಂತ್ರಿ ಮಾಡಬೇಕು, ಐದು ಬಾರಿ ಗೆದ್ದಿದ್ದಾರೆ ಎಂದು ಕೂಗಿದ್ದು ಇಡೀ ಸಭೆಯಲ್ಲಿ ಸದ್ದಾಯಿತು.
ವೇದಿಕೆಯಲ್ಲಿ ಮಾಜಿ ಶಾಸಕ ಕಿರಣ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ, ಜಿಲ್ಲಾ ಉಪಾಧ್ಯಕ್ಷ ಶಂಕರಾನಂದ, ಸ್ಥಳೀಯ ಮುಖಂಡ ಮಂಚಲದೊರೆ ರಮೇಶ್, ಗ್ರಾಪಂ ಸದಸ್ಯ ಲಕ್ಷ್ಮೀಕಾಂತರಾಜ್ ಸೇರಿದಂತೆ ಎತ್ತಿನಹೊಳೆ ಅಧಿಕಾರಿಗಳು, ಹೇಮಾವತಿ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಇತರರು ಇದ್ದರು.