- ತಂದೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 40 ನಿಮಿಷ ತಡವಾಯಿತು: ಮುತ್ತುರಾಜ್ ಟಿ
- ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸುತ್ತಿದ್ದ ವೇಳೆ ನಡೆದ ಘಟನೆ
ನಮ್ಮ ಮೆಟ್ರೋದಲ್ಲಿ ವೃದ್ಧರೊಬ್ಬರು ಕುಸಿದುಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ವೃದ್ಧರನ್ನು ಸಿಬ್ಬಂದಿ ಉಪಚರಿಸಲಿಲ್ಲ ಎಂಬ ಆರೋಪವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರಾಕರಿಸಿದೆ.
ಮೃತ ತಿಮ್ಮೇಗೌಡ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಕಂಡಯ್ಯನಪಾಳ್ಯ ಗ್ರಾಮದವರು. ಇವರು ಜುಲೈ 20 ರಂದು ಮೆಟ್ರೋದಲ್ಲಿ ಸಂಚರಿಸುತ್ತಿರುವ ವೇಳೆ ಕುಸಿದು ಬಿದ್ದಾಗ ಸಕಾಲದಲ್ಲಿ ಬಿಎಂಆರ್‌ಸಿಎಲ್ ಸಿಬ್ಬಂದಿ ಬಂದು ಸಹಾಯ ಮಾಡಲಿಲ್ಲ. ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ವೈದ್ಯಕೀಯ ಸಹಾಯವಿಲ್ಲದೆ ಸುಮಾರು 20 ನಿಮಿಷಗಳ ಕಾಲ 67 ವರ್ಷ ವಯಸ್ಸಿನ ತಿಮ್ಮೇಗೌಡ ಮಲಗಿದ್ದರು. ಈ ವೇಳೆ, ವೈದ್ಯಕೀಯ ನೆರವು ಹಾಗೂ 108 ಆಂಬ್ಯುಲೆನ್ಸ್ ಸೇವೆ ನೀಡಿಲ್ಲ. ನಿಗಮದ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಸಾವಾಗಿದೆ ಎಂದು ಮೃತಪಟ್ಟ ವ್ಯಕ್ತಿಯ ಮಗ ಮುತ್ತುರಾಜ್ ಟಿ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ಮುತ್ತುರಾಜ್ ಟಿ ಅವರ ತಂದೆ ತಿಮ್ಮೇಗೌಡ ಮೃತಪಟ್ಟ ವ್ಯಕ್ತಿ. ಇವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಬೈಯಪ್ಪನಹಳ್ಳಿ ಪೊಲೀಸರು ಬಿಎಂಆರ್‌ಸಿಎಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಎಫ್‌ಐಆರ್ ದಾಖಲಿಸಿದ್ದಾರೆ.
ಆರೋಪವನ್ನು ನಿರಾಕರಿಸಿದ ಬಿಎಂಆರ್‌ಸಿಎಲ್
“ಬೈಯಪ್ಪನಹಳ್ಳಿಯಿಂದ ಕೆಂಗೇರಿಗೆ ಪ್ರಯಾಣಿಸುತ್ತಿದ್ದಾಗ ಬೆಳಗ್ಗೆ 10.21ರ ಸುಮಾರಿಗೆ ಮೆಟ್ರೋ ರೈಲಿನೊಳಗೆ ಪ್ರಯಾಣಿಕರೊಬ್ಬರು ಬಿದ್ದಿದ್ದಾರೆ. ಸಹ ಪ್ರಯಾಣಿಕರು ಅವರನ್ನು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಇಳಿಸಿ ಪ್ಲಾಟ್‌ಫಾರ್ಮ್‌ನಲ್ಲಿರುವ ಬಿಎಂಆರ್‌ಸಿಎಲ್ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣ ಸ್ಟೇಷನ್ ಕಂಟ್ರೋಲರ್‌ಗೆ ಕರೆ ಮಾಡಿದ್ದಾರೆ” ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
“ಒಂದು ನಿಮಿಷದಲ್ಲಿ ಸ್ಥಳಕ್ಕಾಗಮಿಸಿದ ಅವರು ಪ್ರಜ್ಞೆ ತಪ್ಪಿದ ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಿದರು. ನಿಲ್ದಾಣದ ನಿಯಂತ್ರಕರು 108ಗೆ ಕರೆ ಮಾಡಿದರು. ಆದರೆ, ಆಂಬುಲೆನ್ಸ್ 30 ನಿಮಿಷಗಳ ತಡವಾಗಿ ಬರುತ್ತದೆ ಎಂಬ ಮಾಹಿತಿ ತಿಳಿಯಿತು. ಹಾಗಾಗಿ, ಈ ವಿಳಂಬವನ್ನು ತಪ್ಪಿಸಲು, ಬಿಎಂಆರ್‌ಸಿಎಲ್ ತನ್ನ ಸ್ವಂತ ಖರ್ಚಿನಲ್ಲಿ ಪ್ರಯಾಣಿಕರನ್ನು ಸ್ಪರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದೆ. ರೋಗಿಯ ಮಗನ ಕೋರಿಕೆಯಂತೆ ಆಟೋದಲ್ಲಿ ಕಳುಹಿಸಲಾಗಿದೆ. ಈ ವೇಳೆ, ಇಬ್ಬರು ಬಿಎಂಆರ್‌ಸಿಎಲ್ ಸಿಬ್ಬಂದಿ ಜೊತೆಗಿದ್ದು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹೇಳಿದೆ.
ಈ ಘಟನೆಯಲ್ಲಿ ಬಿಎಂಆರ್‌ಸಿಎಲ್ ಸಿಬ್ಬಂದಿ ಯಾವುದೇ ಲೋಪವನ್ನು ಮಾಡಿಲ್ಲ ಎಂಬ ಆರೋಪವನ್ನು ನಿರಾಕರಿಸಿದೆ. ಪೊಲೀಸ್ ಪ್ರಕರಣವು “ಸುಳ್ಳು ಮತ್ತು ಮಾನನಷ್ಟ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಮೆಟ್ರೋದಲ್ಲಿ ಕುಸಿದು ಬಿದ್ದು ವೃದ್ಧ ಸಾವು; ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು
ಮೆಟ್ರೋ ಅಧಿಕಾರಿಗಳಿಂದ ಸ್ಪಷ್ಟ ಲೋಪ: ಪೊಲೀಸ್ ತನಿಖೆ
ಪೊಲೀಸ್ ತನಿಖೆ ವೇಳೆ, ಈ ಘಟನೆಗೆ ಸಂಬಂಧಿಸಿದಂತೆ ಮೆಟ್ರೋ ಅಧಿಕಾರಿಗಳ “ಸ್ಪಷ್ಟ ಲೋಪ” ವನ್ನು ತೋರಿಸುತ್ತದೆ.
“15-20 ನಿಮಿಷಗಳ ಕಾಲ ಎಂ.ಜಿ.ರಸ್ತೆ ನಿಲ್ದಾಣದಲ್ಲಿ ತಿಮ್ಮೇಗೌಡರು ಇದ್ದರು. ಈ ವಳೆ, ವ್ಯಕ್ತಿಯೊಬ್ಬರು ಮಲಗಿರುವುದನ್ನು ಗಮನಿಸದೆ ಇಬ್ಬರು ಮೆಟ್ರೋ ಗಾರ್ಡ್‌ಗಳು ತಿರುಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣಬಹುದು. ಅವರಲ್ಲಿ ಒಬ್ಬರು ನಂತರ ಗಾಲಿಕುರ್ಚಿಯನ್ನು ತೆಗೆದುಕೊಂಡು ಬಂದಿದ್ದಾರೆ. ಯಾವುದೇ ಮೆಟ್ರೋ ಅಧಿಕಾರಿಗಳು ಈ ವೇಳೆ ಸ್ಥಳಕ್ಕೆ ಹಾಜರಾಗಿಲ್ಲ. ತಿಮ್ಮೇಗೌಡ ಅವರನ್ನು 20 ನಿಮಿಷಗಳ ನಂತರ ಗಾಲಿಕುರ್ಚಿಯಲ್ಲಿ ಕರೆದುಕೊಂಡು ಹೋಗಲಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
“ಸಹ ಪ್ರಯಾಣಿಕರು ಇಂದಿರಾನಗರ ಮತ್ತು ಹಲಸೂರಿನಲ್ಲಿ ತಿಮ್ಮೇಗೌಡರನ್ನು ಇಳಿಸಲು ನೋಡಿದ್ದಾರೆ. ಈ ವೇಳೆ, ರೈಲಿನೊಳಗೆ ತುರ್ತು ಸಂಪರ್ಕಗಳನ್ನು ಹುಡುಕಿದ್ದಾರೆ. ಆದರೆ, ಯಾವುದೂ ಕಂಡುಬಂದಿಲ್ಲ. ಸಿಆರ್‌ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಬಿಎಂಆರ್‌ಸಿಎಲ್ ಮುಖ್ಯ ಭದ್ರತಾ ಅಧಿಕಾರಿಗಳನ್ನು ವಿಚಾರಣೆಗಾಗಿ ಪೊಲೀಸರು ಕರೆಸಿದ್ದಾರೆ. 2-3 ದಿನಗಳಲ್ಲಿ ಅಧಿಕಾರಿಯಿಂದ ಪ್ರತಿಕ್ರಿಯೆಯ ನೀರಿಕ್ಷೆಯಲ್ಲಿದ್ದೇವೆ” ಎಂದು ಅವರು ಹೇಳಿದರು.
“ಬಿಎಂಆರ್‌ಸಿಎಲ್ ಸಿಬ್ಬಂದಿಗೆ ಶಿಕ್ಷೆ ನೀಡುವುದನ್ನು ಬಯಸುತ್ತಿಲ್ಲ. ಬದಲಿಗೆ ಮೆಟ್ರೋದಲ್ಲಿ ತುರ್ತು ಪರಿಸ್ಥಿತಿ ವ್ಯವಸ್ಥೆಗಳ ಕೊರತೆ ಮತ್ತು ವೈದ್ಯಕೀಯ ತರಬೇತಿಯಿಲ್ಲದ ಗಾರ್ಡ್‌ಗಳ ಬಗ್ಗೆ ಜಾಗೃತಿ ಮೂಡಿಸಲು ಹೇಳಿದರು. ನನ್ನ ತಂದೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 40 ನಿಮಿಷ ತಡವಾಯಿತು. ಅವರು ನಿಲ್ದಾಣದ ಬೆಂಚ್ ಮೇಲೆ ಮಲಗಿದ್ದಾಗ ಬಿಎಂಆರ್‌ಸಿಎಲ್‌ನ ಯಾವೊಬ್ಬ ಅಧಿಕಾರಿಯೂ ಹಾಜರಿರಲಿಲ್ಲ. ಆ ಅವಧಿಯಲ್ಲಿ ಮೂರು ರೈಲುಗಳು ಪ್ರಯಾಣ ಬೆಳೆಸಿವೆ” ಎಂದು ಮುತ್ತುರಾಜ್ ಟಿ ಹೇಳಿದರು.