ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಟಾಟಾ ವಿಮೆ ಕಂಪನಿಯು 10 ಲಕ್ಷ ರೂಪಾಯಿಯ ವಿಮಾ ಚೆಕ್ ವಿತರಣೆ ಮಾಡಿದೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ತಾರಿಕೊಪ್ಪ ಅಂಚೆ ಸೇವಾನಗರ ನಿವಾಸಿ ರವಿ ಲಮಾಣಿ ನಾಲ್ಕು ತಿಂಗಳ ಹಿಂದೆ 399 ರೂ.ಗಳ ಅಪಘಾತ ವಿಮೆ ಪಾಲಿಸಿ ತೆಗೆದುಕೊಂಡಿದ್ದರು. ಇತ್ತೀಚೆಗೆ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪತ್ನಿ ಲಕ್ಷ್ಮೀ ಲಮಾಣಿ ಅವರಿಗೆ ವಿಮಾ ಕಂಪನಿಯು 10 ಲಕ್ಷ ರೂ.ಗಳ ಚೆಚ್ ವಿತರಿಸಿದ್ದಾರೆ.
ಚೆಚ್ ಹಸ್ತಾಂತರಿಸಿ ಮಾತನಾಡಿದ ಗದಗ ಅಂಚೆ ವಿಭಾಗದ ಅಧೀಕ್ಷಕ ಚಿದಾನಂದ ಪದ್ಮಶಾಲಿ, “ಅತೀ ಕಡಿಮೆ ಮೊತ್ತದ ವಿಮಾ ಕಂತನ್ನು ತೆಗೆದುಕೊಂಡು 10 ಲಕ್ಷ ಮೊತ್ತದ ವಿಮಾ ಹಣವನ್ನು ವಾರಸುದಾರರಿಗೆ ನೀಡುತ್ತಿರುವುದು ಅಂಚೆ ಇಲಾಖೆಯ ಸಾರ್ಥಕ ಸೇವೆಯಾಗಿದೆ. ಮೃತರ ಕುಟುಂಬದ ಮುಂದಿನ ನಿರ್ವಹಣೆಗೆ ಸಹಾಯವಾಗಲಿದೆ. ಈ ಪಾಲಿಸಿಯಿಂದ ಕೇವಲ ಮರಣ ಹೊಂದಿದವರಿಗೆ ಮಾತ್ರವಲ್ಲದೇ ಅಪಘಾತದಿಂದ ಗಾಯಗೊಂಡವರಿಗೂ ಆಸ್ಪತ್ರೆಯ ಖರ್ಚನ್ನು ವಿಮಾ ಪಾಲಿಸಿಯು ನೀಡುತ್ತದೆ” ಎಂದರು.
ಇಂಡಿಯಾ ಪೊಸ್ಟ್ ಪೇಮೆಂಟ್ ಬ್ಯಾಂಕ್‌ನ ಉತ್ತರ ಕರ್ನಾಟಕ ವಲಯದ ಮುಖ್ಯ ಪ್ರಭಂದಕ ರಾಣು ಅಗರವಾಲ್ ಮಾತನಾಡಿ, “ಟಾಟಾ ಅಪಫಾತ ವಿಮೆ ಅತೀ ಕಡಿಮೆ ಕಂತನ್ನು ಹೊಂದಿದ್ದು, ಅತೀ ಹೆಚ್ಚಿನ ಮೊತ್ತದ ವಿಮೆಯನ್ನು ನೀಡುತ್ತಿದೆ. ಈ ರೀತಿಯ ಉತ್ತಮ ವಿಮಾ ಸೌಲಭ್ಯ ಬೇರೆ ಯಾವ ವಿಮಾ ಸಂಸ್ಥೆಗಳಲ್ಲಿ ಕೂಡಾ ಇರುವುದಿಲ್ಲ. ಅಂಚೆ ಇಲಾಖೆಯಿಂದ ಈ ವಿಮಾ ಪಾಲಿಸಿ ಸೌಲಭ್ಯವು ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ” ಎಂದು ತಿಳಿಸಿದರು.
ಗದಗ ಐಪಿಬಿಬಿಯ ಮೇನೇಜರ್ ಆನಂದಸಾಗರ ಮಾತನಾಡಿ, “ಗದಗ ಶಾಖೆಯಲ್ಲಿ ಮೊದಲ ಅಪಘಾತ ವಿಮೆಯನ್ನು ನೀಡುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಈ ಸೌಲಭ್ಯ ಪಡೆದುಕೊಳ್ಳಬೇಕು” ಎಂದರು. ವಿಮಾ ಪಾಲಿಸಿಯನ್ನು ಮಾಡಿಸಿ ಬಡ ಕುಟುಂಬಕ್ಕೆ ಸಹಾಯ ಮಾಡಲು ಕಾರಣರಾದ ತಾರೀಕೊಪ್ಪ ಶಾಖಾ ಅಂಚೆ ಪಾಲಕ ಬಸವರಾಜ ಮಡಿವಾಳರ್ ಅವರನ್ನು ಪ್ರಶಂಸಿದರು.