ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಕಲಾಪ ಅಸ್ತವ್ಯಸ್ತವಾಗಿರುವ ಸಂದರ್ಭದಲ್ಲಿಯೇ ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಆರ್ಎಸ್ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿವೆ.
ಲೋಕಸಭೆಯಲ್ಲಿ ಕಾಂಗ್ರೆಸ್ನ ಉಪ ನಾಯಕ ಗೌರವ್ ಗೊಗೊಯ್ ಅವರು ಇಂದು (ಜುಲೈ 26) ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಈ ಬಗ್ಗೆ ಪಕ್ಷದ ಹಿರಿಯ ನಾಯಕರಾದ ಅಧೀರ್ ರಂಜನ್ ಚೌಧರಿ ತಿಳಿಸಿದ್ದಾರೆ.
‘ಇಂಡಿಯಾ’ ಒಕ್ಕೂಟದ ಭಾಗವಲ್ಲದ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪ್ರತ್ಯೇಕವಾಗಿ ಅವಿಶ್ವಾಸ ನಿರ್ಣಯ ಮಂಡಿಸಿದೆ.
“ನಾವು ನಮ್ಮ ಪಕ್ಷದ ಪರವಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇವೆ. ಅಧಿವೇಶನ ಪ್ರಾರಂಭವಾದಾಗಿನಿಂದ ಎಲ್ಲ ಪ್ರತಿಪಕ್ಷಗಳ ನಾಯಕರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಒತ್ತಾಯಿಸುತ್ತಿದ್ದರು. ಪ್ರಧಾನಿ ಈ ಬಗ್ಗೆ ಮಾತನಾಡಿದರೆ, ದೇಶದ ಜನರಲ್ಲಿ ಶಾಂತಿ ನೆಲೆಸುತ್ತದೆ. ಆದ್ದರಿಂದ ನಾವು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದೇವೆ” ಎಂದು ಬಿಆರ್ಎಸ್ ಸಂಸದ ನಾಮಾ ನಾಗೇಶ್ವರ ರಾವ್ ಹೇಳಿದ್ದಾರೆ.
ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಸದನದಲ್ಲಿ 50 ಸದಸ್ಯರು ಬೆಂಬಲ ನೀಡಿದರೆ ಮಾತ್ರ ಅವಿಶ್ವಾಸ ಗೊತ್ತುವಳಿ ಮಂಡನೆ ನಡೆಯಲಿದೆ. ಕಾಂಗ್ರೆಸ್ ನಿರ್ಣಯವು ಅಗತ್ಯ ಬೆಂಬಲವನ್ನು ಕಂಡುಕೊಳ್ಳುವ ನಿರೀಕ್ಷೆಯಿದೆ. ಬಿಆರ್ಎಸ್ ಲೋಕಸಭೆಯಲ್ಲಿ 9 ಸ್ಥಾನಗಳನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮೈಕ್ರೋಫೋನ್ ಸ್ವಿಚ್ಡ್ ಆಫ್; ‘ಇಂಡಿಯಾ’ ನಾಯಕರಿಂದ ಸಭಾತ್ಯಾಗ
543 ಸದಸ್ಯರ ಲೋಕಸಭೆಯಲ್ಲಿ, ಆಡಳಿತಾರೂಢ ಎನ್ಡಿಎ ಪ್ರಸ್ತುತ 331 ಬಲವನ್ನು ಹೊಂದಿದೆ. ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟವು ಸದನದಲ್ಲಿ 144 ಸದಸ್ಯರನ್ನು ಹೊಂದಿದೆ.
ಸದ್ಯ ಮುಂಗಾರು ಅಧಿವೇಶನದ 13 ಕೆಲಸದ ದಿನಗಳು ಮಾತ್ರ ಉಳಿದಿವೆ. ಲೋಕಸಭೆ ಸ್ಪೀಕರ್ ಕಾರ್ಯವಿಧಾನದ ಪ್ರಕಾರ ಅವಿಶ್ವಾಸ ನಿರ್ಣಯದ ಚರ್ಚೆಯನ್ನು ನಿಗದಿಪಡಿಸಲು 10 ದಿನಗಳ ಸಮಯ ತೆಗೆದುಕೊಳ್ಳಬಹುದು.
“ಇದು ‘ಇಂಡಿಯಾ’ ಮೈತ್ರಿಕೂಟದ ನಿರ್ಧಾರವಾಗಿದೆ. ಕಾಂಗ್ರೆಸ್ ನಾಯಕರು ಈ ಪ್ರಸ್ತಾಪವನ್ನು ಮಂಡಿಸಲಿದ್ದಾರೆ. ಸರ್ಕಾರದ ದುರಹಂಕಾರವನ್ನು ಮುರಿಯಲು ಮತ್ತು ಮಣಿಪುರದ ಬಗ್ಗೆ ಮಾತನಾಡುವಂತೆ ಮಾಡಲು ಈ ಕೊನೆಯ ಅಸ್ತ್ರವನ್ನು ಬಳಸುವುದು ನಮ್ಮ ಕರ್ತವ್ಯ ಎಂದು ನಾವು ಭಾವಿಸುತ್ತೇವೆ.” ಎಂದು ಕಾಂಗ್ರೆಸ್ ನಾಯಕ ಮಾಣಿಕಂ ಟ್ಯಾಗೋರ್ ಹೇಳಿದ್ದಾರೆ.
ಮಣಿಪುರದ ಬಗ್ಗೆ ಚರ್ಚೆಗೆ ಸಿದ್ಧ ಎಂದು ಸರ್ಕಾರ ಹೇಳಿದೆ. ಆದರೆ ವಿರೋಧ ಪಕ್ಷಗಳು ಮತದಾನ ನಿಯಮದ ಅಡಿಯಲ್ಲಿ ಚರ್ಚೆಗೆ ಒತ್ತಾಯಿಸುತ್ತಿವೆ.