ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ಪೊಲೀಸ್ ಠಾಣೆಯ ಎದುರಿಗೆಯೇ ಇರುವ ಮಠದಲ್ಲಿ ಹುಂಡಿ ಕಳವು ಮಾಡಿಕೊಂಡು ದುಷ್ಕರ್ಮಿಗಳು ಕೈಚಳಕ ತೋರಿಸಿರುವ ಘಟನೆ ನಡೆದಿದೆ.
ಪಟ್ಟಣದ ಚೆನ್ನಮ್ಮ ವೃತ್ತದಲ್ಲಿರುವ ಸದ್ಗುರು ಮರಿಮಹಾರಾಜರ ಮಠದಲ್ಲಿ ಮಂಗಳವಾರ ತಡರಾತ್ರಿ ದುಷ್ಕರ್ಮಿಗಳು ನುಗ್ಗಿ ಹುಂಡಿ ಕಳ್ಳತನ ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಗೂ ಹಾರ್ಡಿಸ್‌ಗಳನ್ನು ಕಿತ್ತುಕೊಂಡು ಆರೋಪಿಗಳು ಪತ್ತೆಗಾಗದಂತೆ ಆಯ್ದ ಕ್ರಮ ಕೈಗೊಂಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಠದ ಆಡಳಿತ ಮಂಡಳಿಯವರಿಂದ ದೂರು ಪಡೆಯಲಾಗಿದೆ. ಈ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ. ಮಠದ ಹುಂಡಿಯಲ್ಲಿ ಎಷ್ಟು ಹಣವಿತ್ತು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಪೊಲೀಸ್ ಠಾಣೆಯ ಎದುರಿಗೆಯೇ ಈ ಘಟನೆ ನಡೆದಿರುವುದು ಸ್ಥಳೀಯರು, ಭಕ್ತರಲ್ಲಿ ಆಕ್ರೋಶ ಮೂಡಿಸಿದೆ.