“ಲೋಕಸಭಾ ಚುನಾವಣೆಯಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪಕ್ಷ ನಿಷ್ಠೆ ಮರೆತು ಹಣ ಪಡೆದು ಕಾಂಗ್ರೆಸ್ ಬೆಂಬಲಿಸಿ ಪ್ರಚಾರ ಮಾಡಿದ್ದರು. ಅವರು ಹಣ ಪಡೆದ ಸಾಕ್ಷ್ಯಗಳು ನನ್ನಲ್ಲಿದ್ದು, ದಾಖಲೆ ಸಮೇತ ಬಿಡುಗಡೆ ಮಾಡಲು ಸಿದ್ಧ” ಎಂದು ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ನಾನು ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಅಕ್ರಮ ಚಟುವಟಿಕೆಯಲ್ಲಿ ತೊಡಗಿಲ್ಲ ಎಂಬುದಕ್ಕೆ ದೇವರ ಮುಂದೆ ಪ್ರಮಾಣ ಮಾಡಲು ಸಿದ್ದನಿದ್ದೇನೆ. ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಆರೋಪ ಮಾಡಿರುವ ರೇಣುಕಾಚಾರ್ಯ ಅವರು ಪ್ರಮಾಣ ಮಾಡಬೇಕು. ಇದಕ್ಕೆ ಸಿಗಂಧೂರು ಚೌಡೇಶ್ವರಿ, ಕಟೀಲು ಪರಮೇಶ್ವರಿ ಹಾಗೂ ಚನ್ನಗಿರಿ ತಾಲ್ಲೂಕಿನ ಮಾವಿನಹಳ್ಳಿ ಮಹಾರುದ್ರಸ್ವಾಮಿ ದೇಗುಲಕ್ಕೆ ಬರಲು ಸಿದ್ದನಿದ್ದೇನೆ’ ಎಂದು ಸವಾಲೆಸೆದರು.
“ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬಳಿಕ ರೇಣುಕಾಚಾರ್ಯ ಅವರು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಪಕ್ಷನಿಷ್ಠೆ ಮರೆತು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದರು. ಹಾಗಂತಾ ಇವರ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆ ನನ್ನ ಬಳಿ ಇವೆ. ಸಮಯ ಬಂದಾಗ ಬಹಿರಂಗಪಡಿಸುವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಇದಕ್ಕೂ ಮುನ್ನ ರೇಣುಕಾಚಾರ್ಯ ಅವರು 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರನ್ನು ಭೇಟಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನೆ ಬಾಗಿಲಿಗೂ ಬಂದಿದ್ದರು. ತಮ್ಮ ನಿರ್ಧಾರವನ್ನು ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಬದಲಿಸಿ ಬಿಜೆಪಿಯಲ್ಲೇ ಮುಂದುವರೆದರು” ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
“ರೇಣುಕಾಚಾರ್ಯ ಯಾವ ಯಾವ ಕಡೆ ಎನೇನು ಸಂಬಂಧ ಇಟ್ಟಿದ್ದಾರೆ ಗೊತ್ತಿದೆ. ಈ ಎಲ್ಲ ವಿಚಾರ ವಿಜಯೇಂದ್ರಗೆ ತಿಳಿಸುವೆ. ಸಾಧು ಲಿಂಗಾಯತರ ಯುವಕರು ಬೆಳೆಯುವುದು ರೇಣುಕಾಚಾರ್ಯಗೆ ಇಷ್ಟವಿಲ್ಲ. ರೇಣುಕಾಚಾರ್ಯ ಲಾಟರಿ ಶಾಸಕ. ನಾನು ಹೋರಾಟ ಮಾಡಿ ಮೇಲೆ ಬಂದಿದ್ದೇನೆ” ಎಂದು ತಿಳಿಸಿದರು.
“ಭದ್ರಾ ಡ್ಯಾಂ ಬಲದಂಡೆ ಕಾಲುವೆ ವಿಚಾರದಲ್ಲಿ ದಾವಣಗೆರೆ ಜಿಲ್ಲೆಗೆ ಅನ್ಯಾಯ ಆಗಲು ಬಿಡಲ್ಲ. ಅದ್ರೆ ದಾವಣಗೆರೆ ಬಿಜೆಪಿ ನಿರುದ್ಯೋಗಿಗಳು ಹೋರಾಟ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇವನಹಳ್ಳಿ ಭೂ ಸ್ವಾಧೀನ ವಿರೋಧಿ ಹೋರಾಟಗಾರರ ಬಂಧನ; ಸಂಯುಕ್ತ ಹೋರಾಟ ಕರ್ನಾಟಕ ಖಂಡನೆ
“ನಾನು ಕೂಡಾ ಡಿಕೆ ಶಿವಕುಮಾರ್ ಬ್ರದರ್ ಬೆಂಬಲಿಗ. ಸಿಎಂ ಹಾಗೂ ಡಿಸಿಎಂ ಆಪ್ತರಿಗೆ ಅನುದಾನ ಜಾಸ್ತಿ ಎಂದು ಶಾಸಕ ಬಾಲಕೃಷ್ಣ ಅವರು ಹೇಳಿದ್ದಾರೆ. ನನಗೆ ಆ ರೀತ ಅನುಭವ ಆಗಿಲ್ಲ. ನಾನು ಕೂಡಾ ಡಿಕೆ ಬ್ರದರ್ ಸಪೋಟರ್ ಇದ್ದೇನೆ. ನನಗೆ ಅಂತಹ ಅನುಭವ ಆಗಿಲ್ಲ. ಪಕ್ಷದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ” ಎಂದು ಸ್ಪಷ್ಟಪಡಿಸಿದರು.