ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಪ್ರತಿಭಟನಾ ನಿರತ ರೈತರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ ಕ್ರಮ ಖಂಡಿಸಿ ಶಹಾಪುರನಲ್ಲಿ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಚನ್ನಪ್ಪ ಆನೆಗುಂದಿ ಮಾತನಾಡಿ, ʼಪೊಲೀಸರು ಏಕಾಏಕಿ ಘಟನಾ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಗೆ ಅವಕಾಶವಿಲ್ಲವೆಂದು ವೇದಿಕೆ ಮೇಲಿರುವ ಪ್ರತಿಭಟನಕಾರರನ್ನು ಎಳದಾಡಿ, ಬಂಧಿಸಿರುವುದು ಸರಿಯಲ್ಲ. ಕೂಡಲೇ ಬಂಧಿಸಿದವರನ್ನು ಬಿಡುಗಡೆ ಮಾಡಿ, ಅವರ ಮೇಲಿನ ಪ್ರಕರಣಗಳನ್ನು ಕೈ ಬಿಡಬೇಕು. ಅಲ್ಲದೆ, ಭೂಸ್ವಾಧೀನ ಪ್ರಕ್ರಿಯೆ ಹಿಂಪಡೆಯಬೇಕುʼ ಎಂದು ಒತ್ತಾಯಿಸಿದರು
ʼಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ತಮ್ಮ 1,177 ಎಕರೆ ಭೂಮಿ ಉಳಿಸಿಕೊಳ್ಳಲು 1,181 ದಿನಗಳಿಂದ ಪ್ರಜಾತಾಂತ್ರಿಕ ಹೋರಾಟ ಮಾಡುತ್ತಿದ್ದರು. ಸರಕಾರ ಅವರ ಇಷ್ಟುದಿನಗಳ ಹೋರಾಟಕ್ಕೆ ಒತ್ತಾಯಕ್ಕೆ ಕಿವಿಕೊಡದೇ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಘಟ್ಟಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಜೂ.25 ರಂದು ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ, ವಿವಿಧ ಪ್ರಗತಿಪರ ಸಂಘಟನೆಗಳು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ತೀರ್ಮಾನದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮೃಷ್ಟಾನ್ನ ತಿನ್ನಿಸುವ ಯೋಜನೆಯ ಈ ಸಂಚು ಜನವಿರೋಧಿ ಎಂಬುದು ಎಲ್ಲರ ಒಕ್ಕೊರಲಿನ ಕೂಗಾಗಿತ್ತುʼ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಸಂಚಾಲಕ ಮಲ್ಕಣ ಚಿಂತಿ, ಸಂಯುಕ್ತ ಹೋರಾಟ ಜಿಲ್ಲಾ ಸಮಿತಿ ಮುಖಂಡರು, ರೈತರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಭಾಲ್ಕಿ ರೈಲ್ವೆ ನಿಲ್ದಾಣದಲ್ಲಿ ತಿರುಪತಿ-ಔರಂಗಬಾದ್ ರೈಲು ನಿಲುಗಡೆ