ಮಣ್ಣಿನ ಮಗ, ರೈತನ ಮಗನೆಂದು ಬೊಗಳೆ ಬಿಟ್ಟು ರೈತರ ಹೆಸರಿನಲ್ಲಿ ರಾಜಕಾರಣ ನಡೆಸಿ ಅಧಿಕಾರಕ್ಕೇರಿದ ಕಾಂಗ್ರೆಸ್ ಈಗ ಕಾರ್ಪೊರೇಟ್ ಕಂಪನಿಗಳ ಗುಲಾಮನಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದ.ಕ ಜಿಲ್ಲಾ ಮುಖಂಡ ಕೆ ಯಾದವ ಶೆಟ್ಟಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚೆನ್ನರಾಯಪಟ್ಟಣದ 13 ಗ್ರಾಮಗಳ ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿರುವುದರ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಸರ್ಕಾರವು ರೈತ ಕಾರ್ಮಿಕ ನಾಯಕರನ್ನು ಬಂಧಿಸಿರುವುದನ್ನು ಖಂಡಿಸಿ ಗುರುವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿರುವ ಹಿನ್ನೆಲೆ ಮಂಗಳೂರು ನಗರದ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯಾದವ ಶೆಟ್ಟಿ, “ಕಳೆದ 1180 ದಿನಗಳಿಂದ ನಿರಂತರವಾಗಿ ಹೋರಾಟದಲ್ಲಿ ನಿರತರಾದ ರೈತರ ಬಳಿ ಮಾತನಾಡುವ ಕನಿಷ್ಠ ಸೌಜನ್ಯವೂ ರಾಜ್ಯ ಸರ್ಕಾರಕ್ಕಿಲ್ಲದೆ ಇರುವುದು ಅತ್ಯಂತ ಖಂಡನೀಯ. ರೈತರ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದವರು ಇಂದು ಮುಲಾಜಿಲ್ಲದೆ ರೈತರ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ. ಈ ರೀತಿ ವರ್ತಿಸುತ್ತಿರುವುದು ಸರಿಯಲ್ಲ” ಎಂದರು.

ಎಐಟಿಯುಸಿ ಜಿಲ್ಲಾ ನಾಯಕ ಬಿ ಶೇಖರ್ ಮಾತನಾಡಿ, “ದೇಶಕ್ಕೆ ಅನ್ನ ನೀಡುವ ರೈತರ ಸಂಕಷ್ಟವನ್ನು ಅರಿಯದ ಕಾಂಗ್ರೆಸ್ ಸರ್ಕಾರ ರಾಜ್ಯದ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಕಾಪಾಡಲು ಭಾರೀ ಉತ್ಸುಕವಾಗಿದೆ. ದೇಶದ ಕಾರ್ಪೊರೇಟ್ ಕಂಪನಿಗಳ ಪರವಾಗಿ ತುತ್ತೂರಿ ಬಾರಿಸುವುದರಲ್ಲಿ ಕಾಂಗ್ರೆಸ್ ಬಿಜೆಪಿಯ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಕಳೆದ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗಲೇ ಬೀದಿಗಿಳಿದ ದೇವನಹಳ್ಳಿಯ ರೈತರು ತಮ್ಮ ಭೂಮಿಯ ರಕ್ಷಣೆಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲವಾಗಿ ಹೋರಾಡಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ಬಿಜೆಪಿ ಮಾಡಿದ ರೈತ ವಿರೋಧಿ ತೀರ್ಮಾನವನ್ನು ಧಿಕ್ಕರಿಸಿ ರೈತರಿಗೆ ನ್ಯಾಯ ನೀಡುವ ಬದಲು ಅದೇ ತೀರ್ಮಾನವನ್ನು ಮುಂದುವರಿಸುವುದಾದರೆ, ರೈತರ ಭೂಮಿಯ ಪ್ರಶ್ನೆಯಲ್ಲಿ ಕಾಂಗ್ರೆಸ್‌ನ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಹೇಳಿದರು.
ಇದನ್ನೂ ಓದಿ: ಬಂಟ್ವಾಳ | ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ; ಪಿಡಿಒ ಅಮಾನತು
ಪ್ರತಿಭಟನೆಯಲ್ಲಿ ಜೆ ಬಾಲಕ್ರಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಅಶೋಕ್ ಶ್ರೀಯಾನ್, ನಾಗೇಶ್ ಕೊಟ್ಯಾನ್, ಇಬ್ರಾಹಿಂ ಮದಕ, ವಿ ಕುಕ್ಯಾನ್, ಪ್ರಭಾಕರ್ ರಾವ್, ತಿಮ್ಮಪ್ಪ ಕಾವೂರು, ಕ್ರಷ್ಣಪ್ಪ ಭಾಸ್ಕರ್, ಕ್ರಷ್ಣಪ್ಪ ಸಾಲ್ಯಾನ್, ಸದಾಶಿವದಾಸ್,ಶೇಖರ್ ಕುಂದರ್, ಮುನೀರ್ ಕಾಟಿಪಳ್ಳ, ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್, ತಯ್ಯುಬ್ ಬೆಂಗರೆ,ರಾಜ್ಯ ರೈತ ಸಂಘದ ಸ್ಟೀವನ್ ಡಿಸೋಜ, ಜಯಂತಿ ಶೆಟ್ಟಿ, ಭಾರತಿ ಬೋಳಾರ,ಅಸುಂತ ಡಿಸೋಜ,ಮಾಧುರಿ ಬೋಳಾರ,ಜಯಲಕ್ಷ್ಮಿ, ದಲಿತ ನಾಯಕರಾದ ಸದಾಶಿವ ಪಡುಬಿದ್ರೆ, ಕಮಲಾಕ್ಷ ಬಜಾಲ್, ತಿಮ್ಮಯ್ಯ ಕೊಂಚಾಡಿ, ಸಮುದಾಯದ ವಾಸುದೇವ ಉಚ್ಚಿಲ್, ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಶೇಖರ್ ವಾಮಂಜೂರು, ಕರಿಯ ಕೆ, ಬೀದಿಬದಿ ವ್ಯಾಪಾರಸ್ಥರ ಸಂಘದ ಹಸನ್ ಕುದ್ರೋಳಿ, ವಿಜಯ ಜೈನ್, ಮುಜಾಫರ್ ಅಹಮದ್ ಮುಂತಾದವರು ಉಪಸ್ಥಿತರಿದ್ದರು.