ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯವಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿಯೇ ಭರ್ತಿಯಾಗಿದೆ. ಜಲಾಶಯ ತುಂಬಿರುವುದರಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗಿದೆ. ಬಹುತೇಕ ಈ ವರ್ಷ ನೀರಿನ ವಿಚಾರವಾಗಿ ತಮಿಳುನಾಡು-ಕರ್ನಾಟಕ ನಡುವೆ ವಿವಾದ ಮುನ್ನೆಲೆಗೆ ಬರುವ ಸಾಧ್ಯತೆ ತೀರಾ ಕಡಿಮೆಯಿದೆ ಎಂಬ ಮುನ್ಸೂಚನೆಯನ್ನೂ ನೀಡಿದೆ.
ಸಾಮಾನ್ಯವಾಗಿ, ಕೆಆರ್‌ಎಸ್ ಅಣೆಕಟ್ಟು ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಭರ್ತಿಯಾಗುತ್ತಿತ್ತು. ಕೆಲವು ವರ್ಷಗಳಲ್ಲಿ ಭರ್ತಿಯೇ ಆಗದೆ ನೀರಿನ ಅಭಾವವೂ ಎದುರಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ತಗಾದೆ ತೆಗೆಯುತ್ತಿತ್ತು. ಕಾವೇರಿ ನೀರಿಗಾಗಿ ತಮಿಳುನಾಡು ಮತ್ತು ಕರ್ನಾಟಕ ನಡುವೆ ವಿವಾದ ಎದುರಾಗುವುದು ಮಾತ್ರವಲ್ಲದೆ, ಭಾರೀ ಪ್ರತಿಭಟನೆಗಳು, ಬಂದ್‌ಗಳು ನಡೆಯುತ್ತಿದ್ದವು. ಈ ವರ್ಷ, ಇದೇ ಮೊದಲ ಬಾರಿಗೆ ಜೂನ್‌ನಲ್ಲಿಯೇ ಜಲಾಯಶ ತುಂಬಿದೆ.
ಕೆಆರ್‌ಎಸ್ ಜಲಾಶಯವು 124.80 ಅಡಿ ಗರಿಷ್ಠ ಸಾಮರ್ಥ್ಯವನ್ನು ಹೊಂದಿದೆ. ಜೂನ್ ಆರಂಭದಲ್ಲೇ ಅಣೆಕಟ್ಟಿನಲ್ಲಿ ನೀರಿನ ಮಟ್ಟ 100 ಅಡಿ ದಾಟಿತ್ತು. ಇದೀಗ, ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು, ಅಣೆಕಟ್ಟಿನಿಂದ 630 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಈ ಲೇಖನ ಓದಿದ್ದೀರಾ?: ಎತ್ತ ಸಾಗುತ್ತಿದೆ ಬೆಂಗಳೂರು ಕಾಲ್ತುಳಿತ ಪ್ರಕರಣದ ತನಿಖೆ?
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನಗಳಲ್ಲಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ ಎಂದು ತಿಳಿದುಬಂದಿದೆ. ಜೂನ್ ತಿಂಗಳಲ್ಲೇ ಕಾವೇರಿಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿಯೂ ಸಿದ್ದರಾಮಯ್ಯನವರೇ ಆಗಲಿದ್ದಾರೆ.
ಅಂದಹಾಗೆ, 1979ರಲ್ಲಿ ಅಂದಿನ ಮುಖ್ಯಮಂತ್ರಿ ಡಿ ದೇವರಾಜ್ ಅರಸ್ ಅವರು ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿಯನ್ನು ಆರಂಭಿಸಿದರು. ಅಂದಿನಿಂದ, ಕೆಆರ್‌ಎಸ್ ತುಂಬಿದಾಗೆಲ್ಲ, ಮುಖ್ಯಮಂತ್ರಿಗಳು ಕಾವೇರಿಗೆ ಬಾಗಿನ ಅರ್ಪಿಸುವುದನ್ನು ಮುಂದುವರೆಸಿದ್ದಾರೆ.