ದೇಶದ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿ ತನ್ನ ರಾಜ್ಯಾಧ್ಯಕ್ಷರನ್ನು ನೇಮಿಸಿದೆ. ಕೆಲವೇ ಕೆಲವು ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಾಕಿ ಇದೆ. ಅಲ್ಲದೆ, ಕರ್ನಾಟಕ ಬಿಜೆಪಿಯಲ್ಲಿ ಅವಧಿಗೂ ಮುನ್ನವೇ ಅಧ್ಯಕ್ಷರನ್ನು ಬದಲಾಯಿಸುವ ಚರ್ಚೆಗಳು ನಡೆಯುತ್ತಿವೆ. ಕೆಲವೇ ದಿನಗಳಲ್ಲಿ ಉಳಿದ ರಾಜ್ಯಗಳಿಗೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವಾಗುವ ಸಾಧ್ಯತೆಗಳಿವೆ. ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ರೇಸ್-ಜಟಾಪಟಿಗಳು ನಡೆಯುತ್ತಿವೆ. ಕೆಲವರ ಹೆಸರುಗಳು ಮುಂಚೂಣಿಯಲ್ಲೂ ಇವೆ.
ಪ್ರಸ್ತುತ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರನ್ನು 2023ರ ನವೆಂಬರ್‌ನಲ್ಲಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅವರು ಅಧ್ಯಕ್ಷರಾಗಿ ಕೇವಲ 1.7 ವರ್ಷಗಳು ಮಾತ್ರವೇ ಕಳೆದಿವೆ. ಆದರೂ, ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆಯ ಚರ್ಚೆ ಜೋರಾಗಿದೆ.
ಆರು ತಿಂಗಳ ಹಿಂದೆಯೇ ಕೂಡ ರಾಜ್ಯಾಧ್ಯಕ್ಷ ಹುದ್ದೆಯಿಂದ ವಿಜಯೇಂದ್ರರನ್ನು ಇಳಿಸಿ, ಬೇರೊಬ್ಬರನ್ನು ನೇಮಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿತ್ತು. ಆ ಸಮಯದಲ್ಲಿ, ಬಿಜೆಪಿಗೆ ರಾಜ್ಯ ಅಧ್ಯಕ್ಷರನ್ನಾಗಿ ಕೇಂದ್ರ ಸಚಿವ ವಿ ಸೋಮಣ್ಣ ಅವರನ್ನು ನೇಮಿಸುವ ಪ್ರಸ್ತಾಪವಿತ್ತು. ಮಂತ್ರಿಗಿರಿ ಜೊತೆಗೆ, ಅಧ್ಯಕ್ಷಗಿರಿಯೂ ದೊರೆದರೆ ಎರಡನ್ನೂ ಪಡೆಯುವ ಮನಸ್ಥಿತಿ ಸೋಮಣ್ಣ ಅವರದ್ದಾಗಿತ್ತು ಎನ್ನಲಾಗಿದೆ. ಆದಾಗ್ಯೂ, ಬಿಜೆಪಿಯಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಮಯವಿದ್ದು, ಸೋಮಣ್ಣಗೆ ಎರಡೂ ಹುದ್ದೆಗಳನ್ನೂ ನೀಡುವುದು ಸಾಧ್ಯವಿರಲಿಲ್ಲ. ಹೀಗಾಗಿ, ಸೋಮಣ್ಣ ಅವರಿಗೆ ಕೇಂದ್ರ ಸಚಿವರಾಗಿಯೇ ಕೆಲಸ ಮಾಡುವಂತೆ ಬಿಜೆಪಿ ಹೈಕಮಾಂಡ್ ಹೇಳಿತ್ತು. ಅಧ್ಯಕ್ಷ ಬದಲಾವಣೆಯ ಚರ್ಚೆಗಳನ್ನು ಮುಂದಕ್ಕೆ ಹಾಕಲಾಗಿತ್ತು.
ಸದ್ಯಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹಿಂದುಳಿದ ಸಮುದಾಯದಿಂದ ವಿ ಸುನೀಲ್ ಕುಮಾರ್, ಲಿಂಗಾಯತ ಮತ್ತು ಪಂಚಮಸಾಲಿ ಕೋಟಾದಲ್ಲಿ ಅರವಿಂದ ಬೆಲ್ಲದ್, ದಲಿತ ಕೋಟಾದಲ್ಲಿ ಅರವಿಂದ ಲಿಂಬಾವಳಿ ಹೆಸರುಗಳು ಮುನ್ನೆಲೆಯಲ್ಲಿವೆ. ಮಾತ್ರವಲ್ಲದೆ, ಸುನೀಲ್ ಕುಮಾರ್ ಅವರೊಂದಿಗೆ ಬಿಜೆಪಿ ಹೈಕಮಾಂಡ್ ಚರ್ಚಿಸಿದೆ ಎಂದು ವರದಿಗಳು ಹೇಳುತ್ತಿವೆ.
ಇದೆಲ್ಲದರ ನಡುವೆ, ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಂಗಳವಾರ ದೆಹಲಿಗೆ ಹಾರಿದ್ದಾರೆ. ಮೂರು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಇತ್ತ, ಅತೃಪ್ತರ ಬಣವು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಿದೆ. ಹೈಕಮಾಂಡ್ ಭೇಟಿಗಾಗಿ ದೆಹಲಿಗೆ ತೆರಳಲು ನಿರ್ಧರಿಸಿದೆ ಎಂದು ವರದಿಯಾಗಿದೆ.