ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿರುವುದನ್ನು ಗುರುವಾರ ಪ್ರಕಟಿಸಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶೀಘ್ರದಲ್ಲೇ ಭಾರತದೊಂದಿಗೆ ‘ದೊಡ್ಡ ವ್ಯಾಪಾರ ಒಪ್ಪಂದ’ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ.
ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಆರಂಭದಲ್ಲಿ ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳ ಮೇಲೆ ತೆರಿಗೆ ಯುದ್ಧ ಆರಂಭಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗ ಇದ್ದ ಉತ್ಸಾಹವನ್ನು ಈಗ ಕಳೆದುಕೊಂಡಂತೆ ಕಾಣುತ್ತಿದೆ. ಚೀನಾದ ಜೊತೆಗೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ನಿರ್ಧರಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ಟ್ರಂಪ್ ಅವರು, “ಚೀನಾ ಜತೆಗಿನ ವ್ಯಾಪಾರ ಒಪ್ಪಂದಕ್ಕೆ ಈಗಷ್ಟೇ ಸಹಿ ಮಾಡಿದ್ದೇವೆ. ಎಲ್ಲರೊಂದಿಗೂ ನಾವು ಒಪ್ಪಂದ ಮಾಡಿಕೊಳ್ಳುವುದಿಲ್ಲ. ಆದರೆ ನಾವು ಕೆಲ ಒಳ್ಳೆಯ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಬಹುಶಃ ಮುಂದಿನ ದಿನಗಳಲ್ಲಿ ಭಾರತದ ಜೊತೆಗೆ ದೊಡ್ಡ ಒಪ್ಪಂದ ಮಾಡಿಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
“ಅಮೆರಿಕ ಎಲ್ಲ ದೇಶಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ. ನಾವು ಎಲ್ಲ ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೆಲ ದೇಶಗಳಿಗೆ ನಾವು ಪತ್ರ ಬರೆದು ಧನ್ಯವಾದ ಸಲ್ಲಿಸಲಿದ್ದೇವೆ. ನಾವು ಶೇ. 25, 35, 45ರಷ್ಟು ಸುಂಕ ನಿರೀಕ್ಷಿಸುತ್ತೇವೆ” ಎಂದಿದ್ದಾರೆ.
ಕೃಷಿ ಮತ್ತು ಡೈರಿ ಕ್ಷೇತ್ರಗಳು ಅಮೆರಿಕಕ್ಕೆ ಸುಂಕ ರಿಯಾಯಿತಿಗಳನ್ನು ನೀಡಲು ಭಾರತಕ್ಕೆ ಕಷ್ಟಕರ ಮತ್ತು ಸವಾಲಿನ ಕ್ಷೇತ್ರಗಳಾಗಿವೆ. ಭಾರತವು ಇಲ್ಲಿಯವರೆಗೆ ಸಹಿ ಹಾಕಿರುವ ಯಾವುದೇ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಡೈರಿಯನ್ನು ತೆರೆದಿಲ್ಲ. ಕೆಲವು ಕೈಗಾರಿಕಾ ಸರಕುಗಳು, ಆಟೋಮೊಬೈಲ್‌ಗಳು – ವಿಶೇಷವಾಗಿ ವಿದ್ಯುತ್ ವಾಹನಗಳು, ವೈನ್, ಪೆಟ್ರೋಕೆಮಿಕಲ್ ಉತ್ಪನ್ನಗಳು, ಡೈರಿ ಮತ್ತು ಸೇಬುಗಳು, ಮರದ ಬೀಜಗಳು ಮತ್ತು ಸ್ಥಳೀಯವಾಗಿ ಮಾರ್ಪಡಿಸಿದ ಕೃಷಿ ವಸ್ತುಗಳ ಮೇಲೆ ಸುಂಕ ರಿಯಾಯಿತಿಗಳನ್ನು ಅಮೆರಿಕ ಬಯಸುತ್ತದೆ.
ಪ್ರಸ್ತಾವಿತ ವ್ಯಾಪಾರ ಒಪ್ಪಂದದಲ್ಲಿ ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮದ ಸರಕುಗಳು, ಉಡುಪುಗಳು ಪ್ಲಾಸ್ಟಿಕ್‌ಗಳು, ರಾಸಾಯನಿಕಗಳು, ಸೀಗಡಿ, ಎಣ್ಣೆ ಬೀಜಗಳು, ದ್ರಾಕ್ಷಿಗಳು ಮತ್ತು ಬಾಳೆಹಣ್ಣುಗಳಂತಹ ವಲಯಗಳಿಗೆ ಸುಂಕ ರಿಯಾಯಿತಿಗಳನ್ನು ಭಾರತ ಬಯಸುತ್ತಿದೆ.