- ಮಲ್ಪೆ ಪೊಲೀಸ್ ಠಾಣೆಯಲ್ಲಿ ಎರಡು ಸ್ವಯಂಪ್ರೇರಿತ ದೂರು ದಾಖಲು
- ಸುಳ್ಳು ಸುದ್ದಿ ಹಬ್ಬಿಸಿ, ಸೌಹಾರ್ದತೆಗೆ ಧಕ್ಕೆಗೆ ಯತ್ನಿಸಿದವರ ವಿರುದ್ಧ ಕೂಡ ಎಫ್‌ಐಆರ್
ಉಡುಪಿಯ ಖಾಸಗಿ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಮಾಡಲು ಮೊಬೈಲ್ ಇಟ್ಟ ಪ್ರಕರಣ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ವೇದಿಕೆಯೊದಗಿಸಿದೆ. ಬಿಜೆಪಿ ಮತ್ತು ಹಿಂದುತ್ವವಾದಿಗಳು ಘಟನೆಗೆ ಕೋಮು ಬಣ್ಣ ಬಳಿಯುತ್ತಿದ್ದಾರೆ. ಇದೆಲ್ಲದರ ನಡುವೆ, ಉಡುಪಿಯ ಮಲ್ಪೆ ಪೊಲೀಸರು ಸ್ವಯಂ ಪ್ರೇರಿತವಾಗಿ ಒಟ್ಟು ಎರಡು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಒಂದು ಘಟನೆಯ ಸತ್ಯಾಸತ್ಯತೆ ಪರಿಶೀಲಿಸಲು ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ಹಾಗೂ ಸುಳ್ಳು ಸುದ್ದಿ ಹಬ್ಬಿಸಿ ಕೋಮು ದ್ವೇಷ ಉಂಟು ಮಾಡಿ ಸೌಹಾರ್ದತೆಗೆ ಭಾದಕವಾಗುವ ಕೃತ್ಯದ ಎಸಗಿದವರ ವಿರುದ್ಧವೂ ದೂರು ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಉಡುಪಿ ಜಿಲ್ಲಾ ಪೊಲೀಸರು, ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವಿಡೀಯೋ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆಯಲ್ಲಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿಯ ಕಾಲೇಜಿನಲ್ಲಿ ನಡೆದಿದ್ದೇನು? ಬಿಜೆಪಿ ನಾಯಕರು ಹೇಳುತ್ತಿರುವುದೇನು? ಇಲ್ಲಿದೆ ವಿವರ
ಈ ಘಟನೆಗೆ ಸಂಬಂಧಿಸಿದಂತೆ ನೇತ್ರ ಜ್ಯೋತಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಮೂಲಕ ವಿಡಿಯೋ ಚಿತ್ರೀಕರಿಸಿ ಫಾರ್ವರ್ಡ್ ಮಾಡಿರುತ್ತಾರೆ ಎಂದು ಎಡಿಟ್ ಮಾಡಿದ ವಿಡಿಯೋ One India Kannada ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಆಗಿದೆ. ಅದನ್ನು ಕಾಲು ಸಿಂಗ್ ಚೌಹಾಣ್ ಎಂಬ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ಷೇಪಾರ್ಹ ಸುಳ್ಳುಸುದ್ದಿ ಹಬ್ಬಿಸುತ್ತಿರುವುದು ಕಂಡು ಬಂದಿರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮು ದ್ವೇಷ ಉಂಟು ಮಾಡಿ ಸೌಹಾರ್ದತೆಗೆ ಭಾದಕವಾಗುವ ಕೃತ್ಯದ ಅಡಿಯಲ್ಲಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿದ್ದೇವೆ ಎಂದು ಉಡುಪಿ ಪೊಲೀಸರು ಮಾಹಿತಿ ನೀಡಿದ್ದಾರೆ.