ಮಹಾರಾಷ್ಟ್ರ ಶಾಲೆಗಳಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಠಾಕ್ರೆ ಸಹೋದರರಾದ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಮತ್ತು ಒಂದಾಗಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ ಶಿವಸೇನೆ (ಯುಬಿಟಿ) ನಾಯಕ ಮತ್ತು ಸಂಸದ ಸಂಜಯ್ ರಾವತ್ ಈ ಘೋಷಣೆ ಮಾಡಿದ್ದಾರೆ.
‘ತ್ರಿಭಾಷಾ ನೀತಿ’ಯಡಿಯಲ್ಲಿ 4ನೇ ತರಗತಿಯವರೆಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ವರದಿಯ ವಿರುದ್ಧ ಶಿವಸೇನೆ(ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಜಂಟಿಯಾಗಿ ಜುಲೈ 5ರಂದು ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಿವೆ.
ಇದನ್ನು ಓದಿದ್ದೀರಾ? ರಾಮಮಂದಿರ ಉದ್ಘಾಟನೆ ಬಳಿಕ ಗೋಧ್ರಾ ಮಾದರಿಯ ಘಟನೆ ಸಾಧ್ಯತೆ: ಉದ್ಧವ್ ಠಾಕ್ರೆ ಎಚ್ಚರಿಕೆ
“ನಾವು ಯಾವುದೇ ಭಾಷೆಯ ವಿರುದ್ಧವಾಗಿಲ್ಲ. ನಾವು ಯಾವಾಗಲೂ ಹಿಂದಿಯನ್ನು ಗೌರವಿಸುತ್ತೇವೆ. ನಮ್ಮ ಪಕ್ಷ ಹಲವು ಸಂದರ್ಭಗಳಲ್ಲಿ ಹಿಂದಿ ಬಳಸುತ್ತದೆ. ಆದರೆ ‘ತ್ರಿಭಾಷಾ ನೀತಿ’ಯಡಿಯಲ್ಲಿ 4ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ಹಿಂದಿಯನ್ನು ಕಡ್ಡಾಯಗೊಳಿಸುವ ಇತ್ತೀಚಿನ ನಿರ್ಧಾರವು ಮಕ್ಕಳ ಮೇಲೆ ಅನಗತ್ಯ ಹೊರೆಯನ್ನು ಹೇರಿದ್ದಂತಾಗುತ್ತದೆ. ಇದು ಶೈಕ್ಷಣಿಕ ಮತ್ತು ಭಾಷಾ ವಿಷಯವಾಗಿದೆ” ಎಂದು ಹೇಳಿದ್ದಾರೆ.
ಈ ಹಿಂದೆ ಶಿವಸೇನೆ(ಯುಬಿಟಿ) ಮತ್ತು ಎಂಎನ್ಎಸ್ ಜುಲೈ 6 ಮತ್ತು ಜುಲೈ 7ರಂದು ಕ್ರಮವಾಗಿ ಪ್ರತ್ಯೇಕ ಪ್ರತಿಭಟನೆಗಳನ್ನು ಮಾಡಲು ಮುಂದಾಗಿತ್ತು. ಆದರೆ ಇದೀಗ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಚರ್ಚೆ ನಡೆಸಿ ಈ ಗೊಂದಲವನ್ನು ಬಗೆಹರಿಸಿದ್ದಾರೆ. ಜುಲೈ ಐದರಂದು ಪ್ರತಿಭಟನೆ ನಡೆಯಲಿದೆ.
“ಎರಡು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸುವುದು ಒಳ್ಳೆಯದಲ್ಲ. ನಾನು ಉದ್ಧವ್ ಮತ್ತು ರಾಜ್ ಠಾಕ್ರೆ ಅವರೊಂದಿಗೆ ಚರ್ಚಿಸಿದೆ. ಶಿವಸೇನೆ(ಯುಬಿಟಿ) ಮತ್ತು ಎಂಎನ್ಎಸ್ ಎರಡೂ ಜಂಟಿಯಾಗಿ ಜುಲೈ 5ರಂದು ಈ ಆಂದೋಲನವನ್ನು ಪ್ರಾರಂಭಿಸುತ್ತವೆ” ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾವತ್ ಮಹಾರಾಷ್ಟ್ರಕ್ಕೆ ರಾಜಕೀಯ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
