ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿ, 10.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ಮೇ 25ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದ ಕೆನರಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು. ಸ್ವತಃ ಬ್ಯಾಂಕ್ ಮ್ಯಾನೇಜರ್ ಆಗಿದ್ದವನೇ ಈ ದರೋಡೆಯ ಸೂತ್ರಧಾರ ಎಂಬುದನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಧಾರಾಕಾರ ಮಳೆಯ ಸಮಯದಲ್ಲೇ ಸಿನಿಮೀಯ ಶೈಲಿಯಲ್ಲಿ ಬಂದು 58 ಕೆ.ಜಿ 975.94 ಗ್ರಾಂ ಚಿನ್ನಾಭರಣ ಹಾಗೂ 5.20 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು. ಇದರಿಂದ ಬ್ಯಾಂಕ್‌ನ ಗ್ರಾಹಕರು ಕಂಗಾಲಾಗಿದ್ದರು. ಆರೋಪಿಗಳನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಆರೋಪಿಗಳ ಪತ್ತೆಗಾಗಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ 8 ತಂಡಗಳನ್ನ ರಚಿಸಿದ್ದರು. ಪ್ರಕರಣವನ್ನು ಎಲ್ಲ ಆಯಾಮಗಳಲ್ಲಿ ತನಿಖೆ ಮಾಡಿ, ಒಂದೇ ತಿಂಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕ್‌ನ ಹಿಂದಿನ ವ್ಯವಸ್ಥಾಪಕ ಹಾಗೂ ಹಾಲಿ ಕೊಲ್ಹಾರ ತಾಲ್ಲೂಕಿನ ರೋಣಿಹಾಳ ಕೆನರಾ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ, ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿ ವಿಜಯಕುಮಾರ ಮಿರಿಯಾಲ(41), ಹುಬ್ಬಳ್ಳಿ ಜನತಾ ಕಾಲೊನಿಯ ಖಾಸಗಿ ಕಂಪನಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ(38) ಮತ್ತು ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ ಮೋಕಾ(40) ಎಂಬುವರನ್ನು ಬಂಧಿಸಲಾಗಿದೆ. ಜೊತೆಗೆ 10.5 ಲಕ್ಷ ರೂ. ಮೌಲ್ಯದ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸದ್ಯ ಪ್ರಕರಣ ಭೇದಿಸಿದ್ದಕ್ಕೆ ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟಿದ್ದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಪ್ರಕರಣ?
ಆರೋಪಿ ವಿಜಯಕುಮಾರ ಹುಬ್ಬಳ್ಳಿಯ ಕೋಠಾರಿ ನಗರದ ಕೆನರಾ ಬ್ಯಾಂಕ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನೋರ್ವ ಆರೋಪಿ ಚಂದ್ರಶೇಖರ ಹುಬ್ಬಳ್ಳಿಯಲ್ಲಿ ಖಾಸಗಿ ಉದ್ಯೋಗಿಯಾಗಿದ್ದ. ಮೂರನೇ ಆರೋಪಿ ಸುನೀಲ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇ 25ರಂದು ಬ್ಯಾಂಕ್‌ನ ಕಿಟಕಿಯ ಸರಳುಗಳನ್ನು ಕಟ್ ಮಾಡಿ, ಒಳನುಗ್ಗಿದ್ದರು. ಜೊತೆಗೆ ಪೊಲೀಸರ ದಿಕ್ಕು ತಪ್ಪಿಸಲು ಗೊಂಬೆ ಇಟ್ಟು ವಾಮಾಚಾರ ಮಾಡಿದ್ದರು.

“ಆರೋಪಿಗಳ ಬಳಿ ಇದ್ದ ₹10.75 ಕೋಟಿ ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇನ್ನುಳಿದ ಆರೋಪಿಗಳ ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯ ಮುಂದುವರಿದಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಚಿನ್ನಾಭರಣ ಕಳವು ಸಂಬಂಧ ಆರೋಪಿಗಳು ಮೂರು ತಿಂಗಳಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದರು. ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಆರೋಪಿಗಳು ಸೃಷ್ಟಿಸಿದ್ದರು. ಕಳ್ಳರು ತಮ್ಮ ಗುರುತು ಪತ್ತೆ ಆಗದಂತೆ ಬ್ಯಾಂಕ್‌ನಲ್ಲಿರುವ ಸಿ.ಸಿ.ಟಿ.ವಿ ಕ್ಯಾಮರಾಗಳ ವಿಡಿಯೊ ಡಾಟಾ ಸಂಗ್ರಹಣೆ ಮತ್ತು ನಿರ್ವಹಣೆ ಸಾಧನ (ಎನ್.ವಿ.ಆರ್) ತೆಗೆದುಕೊಂಡು ಹೋಗಿದ್ದರು. ಪ್ರಕರಣ ಪತ್ತೆ ಹಚ್ಚಲು ಪೊಲೀಸರ ಎಂಟು ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೈಜ್ಞಾನಿಕ ರೀತಿಯಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದರು.
ಸಿನಿಮಾಗಳಿಂದ ಪ್ರೇರಣೆ
ಪ್ರಪಂಚದ ವಿವಿಧೆಡೆ ಈ ಹಿಂದೆ ನಡೆದಿರುವ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಆರೋಪಿಗಳು ತಿಳಿದುಕೊಂಡಿದ್ದರು. ಅಲ್ಲದೇ, ಬಾಲಿವುಡ್, ಹಾಲಿವುಡ್ ಸೇರಿದಂತೆ ಕಳವು ಪ್ರಕರಣಕ್ಕೆ ಸಂಬಂಧಿಸಿದ ಹಲವು ರೋಚಕ ಸಿನಿಮಾಗಳನ್ನು ನೋಡಿ ಪ್ರೇರಿತರಾಗಿ, ಅದೇ ರೀತಿ ಸಂಚು ರೂಪಿಸಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ತಿಳಿದುಬಂದಿದೆ. ಅಲ್ಲದೇ, ಬ್ಯಾಂಕಿನ ಒಳಗಡೆ ಬರುವ ಹಾಗೂ ಹೊರಹೋಗುವ ಎಲ್ಲ ದಾರಿಗಳನ್ನು ಕೂಡ ಮುಂಚೆಯೇ ನೋಡಿಕೊಂಡಿದ್ದರು.” ಎಂದು ಎಸ್.ಪಿ. ತಿಳಿಸಿದರು.
ಸಚಿವ ಎಂ ಬಿ ಪಾಟೀಲ್ ಅಭಿನಂದನೆ
ವಿಜಯಪುರದ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಸಚಿವ ಎಂ ಬಿ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಕಳೆದ ತಿಂಗಳು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ನಡೆದ ಕೆನರಾ ಬ್ಯಾಂಕ್ ದರೋಡೆ ಪ್ರಕರಣ, ರಾಜ್ಯದ ಇತಿಹಾಸದಲ್ಲಿಯೇ ಅತಿದೊಡ್ಡ ಡಕಾಯಿತಿ ಪ್ರಕರಣವಾಗಿ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಆದರೆ, ವಿಜಯಪುರ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ತಮ್ಮ ಚುರುಕಿನ ಕಾರ್ಯಾಚರಣೆಯಿಂದ ರಾಜ್ಯದ ಜನತೆಯ ನಂಬಿಕೆಗೆ ಧಕ್ಕೆಯುಂಟಾಗದಂತೆ ಮಾಡಿದ್ದಾರೆ. ಪ್ರಕರಣವನ್ನು ತಿಂಗಳ ಅವಧಿಯಲ್ಲಿಯೇ ಬೇಧಿಸಿ. ಸೀನಿಯರ್ ಮ್ಯಾನೇಜರ್ ಸೇರಿದಂತೆ ಮೂರು ಆರೋಪಿಗಳನ್ನು ಬಂಧಿಸಿ, ಸುಮಾರು 10.5 ಕೆಜಿ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣದಲ್ಲಿ ಪ್ರಮುಖ ಮುನ್ನಡೆ ಸಾಧಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ಯಶಸ್ವಿಗೊಳಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ ಅವರನ್ನು ವಿಜಯಪುರದ ನಮ್ಮ ನಿವಾಸದಲ್ಲಿ ಅಭಿನಂದನೆ ತಿಳಿಸಿದೆ. ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಇಂಥ ಕಾರ್ಯಾಚರಣೆಗಳು ಮಾದರಿಯಾಗಲಿದೆ ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
