‘ಸಮಾಜವಾದಿ, ಜಾತ್ಯತೀತ’ ಪದ ತೆಗೆವ ಆರ್‌ಎಸ್‌ಎಸ್‌ ಪ್ರಸ್ತಾಪದ ಬಗ್ಗೆ ಪ್ರಧಾನಿ ಮೋದಿ ನಿಲುವೇನು?: ಸಿಎಂ

Date:

Advertisements

ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಕಿತ್ತುಹಾಕಬೇಕೆಂದು ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ. ಬಿಜೆಪಿಯ ಹೈಕಮಾಂಡ್‌ ಆಗಿರುವ ಆರ್‌ಎಸ್‌ಎಸ್‌ನಿಂದಲೇ ಇಂತಹ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯ-ನಿಲುವನ್ನು ದೇಶದ ಜನರ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಹೊಸಬಾಳೆ ಅವರ ಹೇಳಿಕೆ ಖಂಡಿಸಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, “ಭಾರತ ಸಮಾಜವಾದಿ ಮತ್ತು ಜಾತ್ಯತೀತ ದೇಶ ಎಂದು ಎಲ್ಲರೂ ಅರ್ಥಮಾಡಿಕೊಂಡಿದ್ದ ಕಾರಣ ಸಂವಿಧಾನದ ಮೂಲಪೀಠಿಕೆಯಲ್ಲಿ ಈ ಪದಗಳನ್ನು ಪ್ರತ್ಯೇಕವಾಗಿ ಸೇರಿಸುವ ಅಗತ್ಯ ಪ್ರಾರಂಭದ ದಿನಗಳಲ್ಲಿ ಬರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯಗಳಾದ ಜಾತ್ಯತೀತತೆ ಮತ್ತು ಸಮಾಜವಾದದ ಮೇಲೆಯೇ ಆರ್‌ಎಸ್‌ಎಸ್‌ ಮತ್ತು ಜನಸಂಘಗಳು ದಾಳಿ ಮಾಡಲು ಶುರುಮಾಡಿದಾಗ ಪ್ರಧಾನಿ ಇಂದಿರಾ ಗಾಂಧಿಯವರು 42ನೇ ತಿದ್ದುಪಡಿ ಮೂಲಕ ಈ ಪದಗಳನ್ನು ಸೇರಿಸಬೇಕಾಯಿತು ಎನ್ನುವುದನ್ನು ಇಡೀ ದೇಶ ಇಂದು ಒಪ್ಪಿಕೊಂಡಿದೆ” ಎಂದು ತಿಳಿಸಿದ್ದಾರೆ.

“ಸಂವಿಧಾನವನ್ನು ಆರ್‌ಎಸ್‌ಎಸ್‌ ವಿರೋಧಿಸುತ್ತಿರುವುದು ಹೊಸ ಬೆಳವಣಿಗೆಯೇನಲ್ಲ. ಭಾರತೀಯ ಜನತಾಪಕ್ಷ ಮತ್ತು ಅದರ ಮಾತೃಸಂಸ್ಥೆ ಆರ್‌ಎಸ್‌ಎಸ್‌ ಸಂವಿಧಾನವನ್ನು ಅದರ ರಚನೆಯ ದಿನದಿಂದಲೇ ವಿರೋಧಿಸುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ದೇಶಕ್ಕೆ ಅರ್ಪಿಸಿದ್ದ ನಾಲ್ಕೇ ದಿನಕ್ಕೆ ಅದನ್ನು ವಿರೋಧಿಸಿ ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’ ಪತ್ರಿಕೆ ಸಂಪಾದಕೀಯವನ್ನು ಬರೆದಿತ್ತು” ಎಂದು ನೆನಪಿಸಿದ್ದಾರೆ.

Advertisements

“ಆರ್ಗನೈಸರ್‌ ಸಂಪಾದಕೀಯದಲ್ಲಿ ‘ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಭಾರತೀಯತೆಯಾಗಲಿ, ಪುರಾತನ ಭಾರತದ ಕಟ್ಟುಕಟ್ಟಳೆಗಳಾಗಲಿ ಇಲ್ಲ, ಇದೇ ಈ ಸಂವಿಧಾನದ ಅತ್ಯಂತ ಕೆಟ್ಟ ವಿಚಾರ’ವೆಂದು ಬರೆದಿತ್ತು. ‘ಭಾರತದ ಸಂವಿಧಾನ ಎನ್ನುವುದು ಬೇರೆ ದೇಶಗಳ ಸಂವಿಧಾನದ ಕಲಮ್‌ಗಳನ್ನು ಹೆಕ್ಕಿತಂದು ಒಟ್ಟುಗೂಡಿಸಿದ ಕಂತೆ, ಅದರಲ್ಲಿ ಭಾರತೀಯತೆಯೇ ಇಲ್ಲ’ವೆಂದು ಎಂ.ಎಸ್. ಗೋಲ್ವಾಲ್ಕರ್ ಹೇಳಿದ್ದರು. ‘ಮನುಸ್ಮೃತಿಯೇ ನಿಜವಾದ ಹಿಂದೂ ಕಾನೂನು, ಅದೇ ಹಿಂದೂಗಳ ಪೂಜನೀಯ ಗ್ರಂಥ. ಈ ಮನುಸ್ಮೃತಿಯ ಆಶಯಗಳು ಸಂವಿಧಾನದಲ್ಲಿ ಇಲ್ಲ’ವೆಂದು ವಿ.ಡಿ.ಸಾವರ್ಕರ್ ಹೇಳಿದ್ದರು. ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ ಮತ್ತು ಅದರ ನಾಯಕರು ಬಹಿರಂಗವಾಗಿ ವ್ಯಕ್ತಪಡಿಸಿರುವ ಈ ಅಭಿಪ್ರಾಯವನ್ನು ಬಿಜೆಪಿ ಇಲ್ಲಿಯ ವರೆಗೆ ತಿರಸ್ಕರಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕಲ್ಲಡ್ಕ ಭುಜಕ್ಕೆ ಭುಜ ತಾಗಿಸಿ ನಿಂತರು ಜಾತ್ಯತೀತವಾದಿ ದೇವೇಗೌಡರು!

“ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಒಂದೆಡೆ ಆರ್‌ಎಸ್‌ಎಸ್‌ ನಾಯಕರು ಮತ್ತು ಇನ್ನೊಂದೆಡೆ ಬಿಜೆಪಿಯ ಕೆಳಹಂತದ ನಾಯಕರು ಸಂವಿಧಾನ ಬದಲಾವಣೆಯ ಕೂಗು ಹಾಕುತ್ತಾ ‘ಟೆಸ್ಟ್ ಡೋಸ್’ ಕೊಡುತ್ತಾ ಜನರ ನಾಡಿಮಿಡಿತವನ್ನು ಪರೀಕ್ಷಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಬಿಜೆಪಿ ಈ ‘ಕಳ್ಳಾಟ’ವನ್ನು ದೇಶದ ಪ್ರಜ್ಞಾವಂತ ಜನ ಅರ್ಥಮಾಡಿಕೊಂಡಿದ್ದಾರೆ” ಎಂದಿದ್ದಾರೆ.

“ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನವನ್ನು ಬದಲಾಯಿಸುವುದಾಗಿ ಬಿಜೆಪಿ ಪಕ್ಷದ ಕೆಲವು ಕೂಗುಮಾರಿಗಳಿಂದ ಘೋಷಣೆ ಮಾಡಿಸಿದ್ದ ಬಿಜೆಪಿ ಅದಕ್ಕೆ ತಕ್ಕ ಉತ್ತರ ಪಡೆದಿದ್ದಾರೆ ಎಂದು ಭಾವಿಸುವೆ. ನಮ್ಮ ನಡುವಿನ ಒಂದಷ್ಟು ಜಾತ್ಯತೀತ ನಿಲುವಿನ ಪಕ್ಷಗಳು ಅಧಿಕಾರದ ಲಾಲಸೆಯಿಂದ ರಾಜಿ ಮಾಡಿಕೊಳ್ಳದೆ ಇದ್ದರೆ ಬಿಜೆಪಿ ಇಂದು ವಿರೋಧಪಕ್ಷದ ಸ್ಥಾನದಲ್ಲಿ ಕೂರಬೇಕಾಗಿತ್ತು. ಇದರ ನಂತರವೂ ಬಿಜೆಪಿ ತನ್ನ ಕುಟಿಲ ಪ್ರಯತ್ನವನ್ನು ಮುಂದುವರಿಸಿರುವುದು ವಿಷಾದನೀಯ. ಈಗಲೂ ಎಚ್ಚೆತ್ತುಕೊಳ್ಳದೆ ತಮ್ಮ ಕುಟಿಲ ಪ್ರಯತ್ನವನ್ನು ಹೀಗೆಯೇ ಮುಂದುವರಿಸಿದರೆ ದೇಶದ ಪ್ರಜಾಪ್ರಭುತ್ವಪ್ರೇಮಿ ಜನ ಬಿಜೆಪಿಗೆ ತಕ್ಕ ಪಾಠ ಕಲಿಸುವುದು ನಿಶ್ಚಿತ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X