ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಟಿ.ಎಸ್.ಹೂವಯ್ಯಗೌಡ ಅವರು ಆದಿಚುಂಚನಗಿರಿ ಮಠ ಹಾಗೂ ಒಕ್ಕಲಿಗರ ಒಕ್ಕೂಟದ ವತಿಯಿಂದ ಕೊಡ ಮಾಡುವ ಜಿಲ್ಲಾ ಮಟ್ಟದ ‘ಕೆಂಪೇಗೌಡ ಪ್ರಶಸ್ತಿ’ಗೆ ಭಾಜನಾಗಿದ್ದಾರೆ.
ಗುರುವಾರ ಸಂಜೆ ನಡೆದ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರಶಸ್ತಿ ಪಡೆದ ಮೊದಲಿಗರಾಗಿ ಹೂವಯ್ಯಗೌಡರು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೇ ಶುಕ್ರವಾರ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆಯುವ 516 ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪ್ರಸನ್ನನಾಥ ಸ್ವಾಮೀಜಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಹೂವಯ್ಯಗೌಡ ಅವರು ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜುಗಳ ಪ್ರಾಂಶುಪಾಲರಾಗಿ, ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಸಚಿವರಾಗಿ, ನಂತರ ಪರೀಕ್ಷಾಂಗ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಎನ್.ಸಿ.ಸಿ ಅಧಿಕಾರಿಯಾಗಿ, ಅಕಾಡೆಮಿಕ್ ಕೌನ್ಸಿಲ್ ಹಾಗೂ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು, ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.