ರೈತರೊಂದಿಗೆ ಸಿಎಂ ಸಭೆ ಜು. 4ಕ್ಕೆ ಏಕೆ, ಭೂದಾಹಿಗಳ ಮಸಲತ್ತೇನು?

Date:

Advertisements
ಹಣವಂತ ರಿಯಲ್ ಎಸ್ಟೇಟ್ ಕುಳಗಳು, ಅಧಿಕಾರಿಗಳು, ಅಧಿಕಾರಸ್ಥ ರಾಜಕಾರಣಿಗಳು- ಯಾವುದಕ್ಕೂ ಹೇಸದವರು. ಇವರ ಬಳಿ ಅಧಿಕಾರ, ಕಾನೂನು, ಪೊಲೀಸ್, ತೋಳ್ಬಲ- ಎಲ್ಲವೂ ಇದೆ. ಈ ವಿಷವರ್ತುಲ ಹೂಡುವ ಹೂಟಕ್ಕೆ ರೈತರು ಬಲಿಯಾಗದಿರಲಿ... 

ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಚನ್ನರಾಯಪಟ್ಟಣ ಹೋಬಳಿಯ ರೈತರ 1180 ದಿನಗಳ ಹೋರಾಟ ಬೆಂಬಲಿಸಿ ಜೂನ್ 25ರಂದು ‘ಸಂಯುಕ್ತ ಹೋರಾಟ ಕರ್ನಾಟಕ’ದ ಕರೆಯ ಮೇರೆಗೆ ಎಲ್ಲ ಜನಪರ ಚಳವಳಿಗಳ‌ ನೂರಾರು ಕಾರ್ಯಕರ್ತರು ಮತ್ತು ಮುಂದಾಳುಗಳು ‘ದೇವನಹಳ್ಳಿ ಚಲೋ’ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಈ ಬೃಹತ್ ಚಲೋ ಬಗ್ಗೆ ಮೊದಲೇ ಸರ್ಕಾರದ ಮತ್ತು ಪೊಲೀಸರ ಗಮನಕ್ಕೆ ತರಲಾಗಿತ್ತು. ಅತ್ಯಂತ ಶಾಂತಿಯುತವಾಗಿ ನಡೆದಿತ್ತು. ಆದರೂ ದೇವನಹಳ್ಳಿ ರೈತರ ಪ್ರತಿಭಟನೆಯನ್ನು ವಿಪರೀತ ಪೊಲೀಸ್ ಬಲ ಬಳಸಿ ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ನಡೆಸಿತ್ತು.

ಈ ಹಿನ್ನೆಲೆಯಲ್ಲಿ ಖುದ್ದಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ರೈತ ಹೋರಾಟಗಾರರ ಪರವಾಗಿ ಪ್ರಕಾಶ್ ರಾಜ್ ನೇತೃತ್ವದ ತಂಡ ಮುಂದಾಯಿತು. ಅಲ್ಲಿ ಮೂರು ಮುಖ್ಯ ಸಂಗತಿಗಳತ್ತ ಮುಖ್ಯಮಂತ್ರಿಗಳ ಗಮನ ಸೆಳೆಯಿತು.

Advertisements

1) ಸುಮಾರು ನಾಲ್ಕು ವರ್ಷಗಳಿಂದ ನ್ಯಾಯಬದ್ಧ ಹೋರಾಟ ನಡೆಸುತ್ತಿರುವ ಸ್ಥಳೀಯ ರೈತರು, ಜನಚಳವಳಿಗಳ ರಾಜ್ಯನಾಯಕರುಗಳನ್ನು ಕ್ರಿಮಿನಲ್‌ಗಳಂತೆ ನಡೆಸಿಕೊಂಡು ಅನಗತ್ಯ ಬಲಪ್ರಯೋಗ ಮಾಡಿದ ಏರಿಯ ಡಿಸಿಪಿ ಸಚಿತ್‌‌ ಕುಮಾರ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಪೊಲೀಸ್ ಅತಿರೇಕದ ವರ್ತನೆಯ ಕುರಿತು ಸಮಗ್ರ‌ ತನಿಖೆ ನಡೆಸಿ,‌ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.‌ ಈ ಇಡೀ ದುರ್ವರ್ತನೆಯ ಘಟನೆಯ ಕುರಿತಾಗಿ ಸರ್ಕಾರ ಅಧಿಕೃತ ಹೇಳಿಕೆ ಹೊರಡಿಸಬೇಕು.

ಇದನ್ನು ಓದಿದ್ದೀರಾ?: ರೈತರ ಅಹೋರಾತ್ರಿ ಧರಣಿ; ನೆಲ ಜನ ಸಂಸ್ಕೃತಿಯನ್ನು ಉಳಿಸುವ ಹೋರಾಟವಿದು- ಇಂದೂಧರ ಹೊನ್ನಾಪುರ

2) ‘ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್’ ಮಾಡಲು ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಇಡೀ ಯೋಜನೆಯನ್ನೇ ಸಂಪೂರ್ಣವಾಗಿ ಕೈಬಿಡಬೇಕು.

3) ಕೂಡಲೇ ದೇವನಹಳ್ಳಿ – ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಕುರಿತಾಗಿ ರೈತರು ಮತ್ತು ಹೋರಾಟಗಾರರ ಜೊತೆಗೆ ಅಂತಿಮ ಸಭೆ ನಡೆಸಲು ದಿನಾಂಕವನ್ನು ಇಂದೇ ನಿಗದಿಪಡಿಸಬೇಕು ಎಂಬುದಾಗಿತ್ತು.

WhatsApp Image 2025 06 26 at 19.27.05

ಹೋರಾಟಗಾರರ ಕರೆಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜುಲೈ 4ರ ಬೆಳಗ್ಗೆ 11 ಗಂಟೆಗೆ ರೈತರ ಬೇಡಿಕೆ ಮತ್ತು ಸಮಸ್ಯೆ ಕುರಿತಾಗಿ ಸಮಗ್ರ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಇದಕ್ಕೊಪ್ಪಿದ ರೈತ ಹೋರಾಟಗಾರರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಚನ್ನರಾಯಪಟ್ಟಣ ಹೋಬಳಿಯ ರೈತ ಹೋರಾಟ ತಿಳಿಯದ ವಿಷಯವಲ್ಲ. ಕಳೆದ ನಾಲ್ಕು ವರ್ಷಗಳಿಂದ ಪ್ರತಿಭಟನೆ, ಧರಣಿ, ರಸ್ತೆ ರೋಖೋ, ಜಾಥಾ, ಸತ್ಯಾಗ್ರಹ, ಸಭೆ, ಮನವಿಗಳ ಮೂಲಕ ರೈತರು ಚಪ್ಪಲಿ ಸವೆಸುತ್ತಿರುವುದು ಗೊತ್ತಿದೆ. ಗೊತ್ತಿದ್ದೂ, ಮುಖ್ಯಮಂತ್ರಿಗಳು ಮುಂದೆ ತಳ್ಳುತ್ತಿದ್ದಾರೆ. ರೈತರ ಸಹನೆ ಪರೀಕ್ಷಿಸುತ್ತಿದ್ದಾರೆ. ಇದು ನಿಧಾನದ್ರೋಹವಲ್ಲವೇ? ಬಿಜೆಪಿ ಬಿಟ್ಟು ಕಾಂಗ್ರೆಸ್ ಆಯ್ಕೆ ಮಾಡಿಕೊಂಡ ಸರ್ಕಾರವೇ ರೈತರನ್ನು ಕಡೆಗಣಿಸಿದರೆ, ಇದು ಜನಪರ, ರೈತಪರ ಸರ್ಕಾರವೇ?   

ಏತನ್ಮಧ್ಯೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಚನ್ನರಾಯಪಟ್ಟಣ ಹೋಬಳಿಯ ಮೂರು ಹಳ್ಳಿಗಳ 495 ಎಕರೆ ಭೂಸ್ವಾಧೀನ ಇಲ್ಲ ಎಂದಿದ್ದಾರೆ. ಮುಂದುವರೆದು, ಕೈಗಾರಿಕೆಗಳು ಬೇಕು, ರೈತರಿಗೂ ಅನುಕೂಲವಾಗುತ್ತದೆ, ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ರೈತರೊಂದಿಗೆ ರಾಜೀಕಬೂಲಿಗೆ ಇಳಿದಿದ್ದಾರೆ. ಸಚಿವರು ಹೀಗೆ ಹೇಳುತ್ತಿರುವುದು ಹಾಗೂ ಮುಖ್ಯಮಂತ್ರಿಗಳು ಜು. 4ರಂದು ಸಭೆ ಕರೆದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅದೇನೆಂದರೆ, ದೇವನಹಳ್ಳಿ ಸುತ್ತಮುತ್ತಲಿನ ಭೂಮಿಗೆ ಬಂಗಾರಕ್ಕಿಂತಲೂ ಹೆಚ್ಚಿನ ಬೆಲೆ ಇದೆ. ಈಗಾಗಲೇ ಸಾವಿರಾರು ಕೋಟಿ ಬಂಡವಾಳ ಹೂಡಿರುವ ರಿಯಲ್ ಎಸ್ಟೇಟ್ ದಂಧೆಕೋರರು, ರಾಜಕಾರಣಿಗಳ ಬೆನ್ನು ಬಿದ್ದು, ಹೇಗಾದರೂ ಸರಿ ಭೂಸ್ವಾಧೀನದಿಂದ ಹಿಂದೆ ಸರಿಯಬೇಡಿ ಎಂಬ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಸ್ಥಳೀಯ ಪುಡಿ ಪುಢಾರಿಗಳನ್ನು ಮತ್ತು ಕಮಿಷನ್ ಏಜೆಂಟರನ್ನು ಛೂಬಿಟ್ಟು, ಕಷ್ಟದಲ್ಲಿರುವ ರೈತರನ್ನು ಕಂಡುಹಿಡಿಯಲು, ಭೂಮಿ ಮಾರಿಸಲು ಅವರ ಮನವೊಲಿಸುತ್ತಿದ್ದಾರೆ. ಅದನ್ನೇ ಮುಂದಿಟ್ಟು ಭೂಸ್ವಾಧೀನ ಸಮರ್ಥಿಸಿಕೊಳ್ಳಲು ಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.

ಈ ಹಿಂದೆ, ಬಿಜೆಪಿ ಸರ್ಕಾರದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರ ಮೇಲೂ ರಿಯಲ್ ಎಸ್ಟೇಟ್ ಕುಳಗಳು ಒತ್ತಡ ತಂದಿದ್ದರು. ಅವರು ಒತ್ತಡಕ್ಕೆ ಒಳಗಾಗಿ, ದೇವನಹಳ್ಳಿಯ ಸುತ್ತಮುತ್ತಲಿನ ಒಂದಷ್ಟು ರೈತರೊಂದಿಗೆ ಸಭೆ ನಡೆಸಿ, ‘ರೈತರು ಭೂಮಿ ಕೊಡಲು ಒಪ್ಪಿದ್ದಾರೆ’ ಎಂದು ಘೋಷಿಸಿದ್ದರು. ಆದರೆ ಬಿಜೆಪಿ ಸರ್ಕಾರ ಬಿದ್ದುಹೋಗಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದನಂತರ, ಆ ಯೋಜನೆ ಅಲ್ಲಿಗೇ ಸ್ಥಗಿತಗೊಂಡಿತ್ತು. ರಿಯಲ್ ಎಸ್ಟೇಟ್ ದಂಧೆ ಚಾಲ್ತಿಯಲ್ಲಿತ್ತು.

ಈಗ, ಜೂ. 25ರಂದು ನಡೆದ ಬೃಹತ್ ದೇವನಹಳ್ಳಿ ಚಲೋದಿಂದ ನಿಜಕ್ಕೂ ಕಂಗಾಲಾಗಿರುವವರು ರಿಯಲ್ ಎಸ್ಟೇಟ್ ಕುಳಗಳೇ. ಅವರು ಸ್ಥಳೀಯ ಪುಢಾರಿಗಳು, ಏಜೆಂಟರನ್ನು ಬಿಟ್ಟು ರೈತರ ಮನವೊಲಿಸುತ್ತಿದ್ದಾರೆಂಬ ಸುದ್ದಿ ಇದೆ. ರಿಯಲ್ ಎಸ್ಟೇಟ್ ಕುಳಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕೂಡ, ಕೈಗಾರಿಕೆ ಬೇಕು, ರೈತರು ಸಹಕರಿಸಬೇಕು ಎಂಬ ರಾಗ ಎಳೆಯುತ್ತಿದ್ದಾರೆ. ಇದಕ್ಕೆ ಕೆಐಎಡಿಬಿ ಅಧಿಕಾರಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ.

ಇದನ್ನು ಓದಿದ್ದೀರಾ?: ಅಧಿಕಾರಸ್ಥರು ಅನ್ನ ತಿನ್ನುವವರೇ ಆದರೆ, ಭೂ ಸ್ವಾಧೀನ ಕೈಬಿಡಲಿ

ಅಕಸ್ಮಾತ್, ರಿಯಲ್ ಎಸ್ಟೇಟ್ ಕುಳಗಳ ದುಷ್ಟ ಯೋಜನೆ ಕಾರ್ಯಗತವಾಗಿ, ಪುಢಾರಿಗಳ ಪುಸಲಾವಣೆಗೆ ರೈತರು ಒಳಗಾಗಿ ಭೂಮಿ ಮಾರಲು ಮುಂದಾದರೆ, ಮಾರುವವರ ಪರ್ಸಂಟೇಜ್ ಹೆಚ್ಚಾದರೆ, ಚಿತ್ರಣವೇ ಬದಲಾಗುತ್ತದೆ. ಆ ಮಾರುವವರ ಪರ್ಸಂಟೇಜನ್ನು ಜು.4ರ ಮುಖ್ಯಮಂತ್ರಿಗಳ ಸಭೆಯ ಮುಂದಿಟ್ಟು, ‘ರೈತರು ಒಪ್ಪಿದ್ದಾರೆ, ವಿರೋಧಿಸುವವರ ಸಂಖ್ಯೆ ಬಹಳ ಕಡಿಮೆ ಇದೆ’ ಎಂಬ ತರ್ಕ ಮಂಡಿಸುವ ಯೋಜನೆ ಇದೆ. ಅದು ರೈತ ಹೋರಾಟವನ್ನು ಮಣಿಸುತ್ತದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಈದಿನ.ಕಾಮ್ ರೈತ ಮುಖಂಡರಾದ ಕಾರಹಳ್ಳಿ ಶ್ರೀನಿವಾಸರನ್ನು ಸಂಪರ್ಕಿಸಿದಾಗ, ‘ಹೌದು, ಈ ತರದ ಸುದ್ದಿಗಳು ಹರಿದಾಡುತ್ತಿವೆ, ನಮ್ಮ ಗಮನಕ್ಕೂ ಬಂದಿವೆ. ಅದರಲ್ಲೂ ನಿನ್ನೆಯ ಬೃಹತ್ ಹೋರಾಟ, ಅದಕ್ಕೆ ಜನ ಸ್ಪಂದಿಸಿದ ರೀತಿ, ಮಾಧ್ಯಮಗಳ ಬೆಂಬಲ ಎಲ್ಲವನ್ನು ನೋಡಿ ಭಯಕ್ಕೆ ಬಿದ್ದ ಭೂಗಳ್ಳರು ಇಂತಹ ಕೆಟ್ಟ ಕೆಲಸಕ್ಕೆ ಕೈಹಾಕಿರಲೂಬಹುದು. ನಮಗೆ ಇದೇನು ಹೊಸದಲ್ಲ. ಈ ಹಿಂದೆಯೂ ನಡೆದಿತ್ತು. ಆದರೆ ನಮ್ಮ ರೈತರು ಒಗ್ಗಟ್ಟಾಗಿದ್ದಾರೆ, ಅಂತಹ ಯಾವ ಆಮಿಷಕ್ಕೂ ಬಲಿಯಾಗುವುದಿಲ್ಲ. ನಮಗೆ ಭೂಮಿ ಬೇಕು, ಅದಕ್ಕಾಗಿಯೇ ಹೋರಾಟ’ ಎಂದರು.

ಅಂದರೆ, ರೈತರ ಮನವೊಲಿಸುವಿಕೆ, ಪುಸಲಾವಣೆ ನಿರಂತರ ಪ್ರಕ್ರಿಯೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇದು ಹಿಂದಿನ ಸರ್ಕಾರದಲ್ಲೂ ಇತ್ತು. ಈಗ ಹೋರಾಟ ತೀವ್ರವಾದಂತೆ, ಇದು ಕೂಡ ಜೋರಾಗಿದೆ. ಹಣವಂತ ರಿಯಲ್ ಎಸ್ಟೇಟ್ ಕುಳಗಳು, ಅಧಿಕಾರಿಗಳು, ಅಧಿಕಾರಸ್ಥ ರಾಜಕಾರಣಿಗಳು- ಯಾವುದಕ್ಕೂ ಹೇಸದವರು. ಇವರ ಬಳಿ ಅಧಿಕಾರ, ಕಾನೂನು, ಪೊಲೀಸ್, ತೋಳ್ಬಲ- ಎಲ್ಲವೂ ಇದೆ. ಈ ವಿಷವರ್ತುಲ ಹೂಡುವ ಹೂಟಕ್ಕೆ ರೈತರು ಬಲಿಯಾಗದಿರಲಿ, ಜನಬೆಂಬಲವೂ ಜೊತೆಗಿರಲಿ.  

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಮಾರ್ಗಸೂಚಿ ಪ್ರಕಟ, ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್‌ ಕೇಸ್‌ ದಾಖಲು

ಬೆಂಗಳೂರು ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಪೂಜಿಸಬೇಕಾಗಿ ಮತ್ತು...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X