ಈ ದಿನ ಸಂಪಾದಕೀಯ | ಹಿಂದುಗಳೆಲ್ಲ ಒಂದು ಎನ್ನುವ ಆರೆಸ್ಸೆಸ್‌ಗೆ ಜಾತ್ಯತೀತ, ಸಮಾಜವಾದ ಅಂದರೇಕೆ ಅಸಹನೆ?

Date:

Advertisements

ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತ ದೇಶದ ಐಕ್ಯತೆಗೆ ಬಹಳ ಮುಖ್ಯ. ವಿವಿಧತೆಯಲ್ಲಿ ಏಕತೆ ಸಾಧಿಸಿದ ಈ ದೇಶಕ್ಕೆ ಅವೆರಡು ಕಣ್ಣುಗಳಿದ್ದಂತೆ. ಯಾವ ಪಕ್ಷವಾಗಲಿ, ಸಂಘಟನೆಯಾಗಲಿ ಸಂವಿಧಾನ ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿರುವುದು ಸರಿಯಲ್ಲ ಎಂದಾಗಲಿ, ಅವುಗಳನ್ನು ತೆಗೆಯಬೇಕು ಎಂದಾಗಲಿ ಹೇಳಿಲ್ಲ. ಆದರೆ ಬಿಜೆಪಿ ಮತ್ತು ಹಿಂದುತ್ವವಾದಿಗಳಿಗೆ ಮಾತ್ರ ಇವು ಅಪಥ್ಯ ಪದಗಳು.

ಭಾರತದ ಸಂವಿಧಾನದ ಬಗೆಗಿನ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಅಸಮಾಧಾನ ಇನ್ನೂ ಶಮನವಾದಂತಿಲ್ಲ. ಆಗಾಗ ಆರೆಸ್ಸೆಸ್ಸಿನ ಮುಖಂಡರು ಸಂವಿಧಾನದ ಬಗ್ಗೆ ವಿಷ ಹೊರ ಹಾಕುತ್ತಿದ್ದಾರೆ. ಸಂವಿಧಾನದ ಬಗೆಗಿನ ತಮ್ಮ ನಂಜನ್ನು ಕಳೆದ ಎಪ್ಪತ್ತು ವರ್ಷಗಳಿಂದ ಜೀವಂತವಾಗಿಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಅದರ ಭಾಗವಾಗಿ ದತ್ತಾತ್ರೇಯ ಹೊಸಬಾಳೆ ಅವರು 2025ರ ಜೂನ್ 26ರಂದು ತುರ್ತುಪರಿಸ್ಥಿತಿಯ ವಿರುದ್ಧದ ಅಭಿಯಾನದಲ್ಲಿ ಸಂವಿಧಾನದ ಮುನ್ನುಡಿಯ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ತೆಗೆದು ಹಾಕಬೇಕು. ಇವು ತುರ್ತು ಪರಿಸ್ಥಿತಿಯ ಸಮಯದಲ್ಲಿ ಸೇರಿಸಲಾಯಿತು ಎಂದು ಹೇಳಿದ್ದಾರೆ. ಈ ಪದಗಳು ವಿದೇಶ ಮೂಲದ್ದು ಎಂಬುದು ಆರೆಸ್ಸೆನ್‌ ಕೆಲವರು ಹಿಂದಿನಿಂದಲೂ ಹೇಳುತ್ತ ಬಂದಿದ್ದರು. ಆದರೆ, ಅವರಿಗೆ ಈ ಪದಗಳನ್ನು ಸೇರಿಸಿದ್ದು ಯಾವಾಗ, ಯಾರು ಎಂಬುದಕ್ಕಿಂತ ಒಟ್ಟು ಎಲ್ಲರನ್ನೂ ಒಳಗೊಳ್ಳುವಿಕೆಯ ಬಗ್ಗೆ ಆಳವಾಗಿ ಬೇರೂರಿರುವ ಅಸಹನೆ ಎದ್ದು ಕಾಣುತ್ತದೆ.

ಸಮಾಜವಾದಿ ಮತ್ತು ಜಾತ್ಯತೀತ ಸಿದ್ಧಾಂತ ದೇಶದ ಐಕ್ಯತೆಗೆ ಬಹಳ ಮುಖ್ಯ. ವಿವಿಧತೆಯಲ್ಲಿ ಏಕತೆ ಸಾಧಿಸಿದ ಈ ದೇಶಕ್ಕೆ ಅವೆರಡು ಕಣ್ಣುಗಳಿದ್ದಂತೆ. ಯಾವ ಪಕ್ಷವಾಗಲಿ, ಸಂಘಟನೆ, ಸಿದ್ಧಾಂತವಾಗಲಿ ಸಂವಿಧಾನ ಪೀಠಿಕೆಯಲ್ಲಿ ಈ ಎರಡು ಪದಗಳನ್ನು ಸೇರಿಸಿರುವುದು ಸರಿಯಲ್ಲ ಎಂದಾಗಲಿ, ಅವುಗಳನ್ನು ತೆಗೆಯಬೇಕು ಎಂದಾಗಲಿ ಹೇಳಿಲ್ಲ. ಆದರೆ ಬಿಜೆಪಿ ಮತ್ತು ಹಿಂದುತ್ವವಾದಿಗಳಿಗೆ ಮಾತ್ರ ಇವು ಅಪಥ್ಯ ಪದಗಳು. ಅವರ ನಡೆನುಡಿಗಳಲ್ಲಿ, ಆಡಳಿತದಲ್ಲಿ ಇವು ಇಲ್ಲ. ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂದು ಹೊರಟವರಿಗೆ ಈ ಎರಡು ಪದಗಳು ಬೇಡ. ಅಂಥವರು ಈಗ ಸಂವಿಧಾನ ಹತ್ಯಾ ದಿನ ಎಂದು ತುರ್ತುಪರಿಸ್ಥಿತಿಯನ್ನು ಬಣ್ಣಿಸುತ್ತಿರುವುದೇ ಹಾಸ್ಯಾಸ್ಪದ. ಜಾತ್ಯತೀತ ಮತ್ತು ಸಮಾಜವಾದಿಯಾಗಿರುವುದೆಂದರೆ ಅತ್ಯಂತ ಜೀವಪರ. ಅದರ ಬಗ್ಗೆ ಅಸಮಾಧಾನ ಹೊರ ಹಾಕಿ ಆರೆಸ್ಸೆಸ್‌, ಬಿಜೆಪಿ ನಾಯಕರು ತಾವು ಜೀವ ವಿರೋಧಿಗಳು ಎಂದು ಹೇಳಲು ಹೊರಟಂತಿದೆ.

Advertisements

ನಿಜವಾಗಿಯೂ ಆರೆಸ್ಸೆಸ್‌ ಮತ್ತು ಹಿಂದೂ ರಾಷ್ಟ್ರವಾದಿಗಳ ಅಜೆಂಡಾ ಜಾರಿಗೆ ತರಲು ಅಡ್ಡಿಯಾಗಿರುವುದೇ ಸಂವಿಧಾನ. ಇದು ಅವರ ಅಸಮಾಧಾನಕ್ಕೆ ಕಾರಣ ಎಂಬುದು ಸ್ಪಷ್ಟ. ಇತ್ತೀಚೆಗೆ ಅದರಲ್ಲೂ ಮೋದಿ ಅಧಿಕಾರವಾಧಿಯಲ್ಲಿ ಪದೇ ಪದೇ ಬಿಜೆಪಿ ನಾಯಕರು ದೇಶದ ಉದ್ದಗಲದಲ್ಲೂ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಮೋದಿ ಅವರ ಮೊದಲನೆ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಹೆಗಡೆ ಅವರು “ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು” ಎಂದು ಹೇಳಿದ್ದರು. ಮೋದಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಬಹಳ ಸಂದರ್ಭಗಳಲ್ಲಿ ನಡೆದುಕೊಂಡಿದೆ. ಈ ಒಂದು ದಶಕದಲ್ಲಿ ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಆದಿವಾಸಿಗಳು, ಬುಡಕಟ್ಟು ಸಮುದಾಯಗಳ ಮೇಲೆ ಇನ್ನಿಲ್ಲದ ದೌರ್ಜನ್ಯ ನಡೆದಿದೆ. ಆದರೆ ಆ ಕಾರಣದಿಂದಾಗಿಯೇ ಅಂಬೇಡ್ಕರ್‌ ಮತ್ತು ಸಂವಿಧಾನದ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಸಂವಿಧಾನದ ಓದು, ಅರಿವಿನ ಕಾರ್ಯಕ್ರಮಗಳು ಹೆಚ್ಚಿವೆ. ಐವತ್ತು ವರ್ಷಗಳಲ್ಲಿ ಸಂವಿಧಾನದ ಬಗ್ಗೆ ಇಲ್ಲದ ಅರಿವು -ಒಲವು ಈಗ ಸಮಾಜದಲ್ಲಿ ಮೂಡಿದೆ. ಅಲ್ಪಸಂಖ್ಯಾತರು, ದಲಿತರು, ತಳ ಸಮುದಾಯಗಳು ಸಂವಿಧಾನವೊಂದೇ ನಮ್ಮ ರಕ್ಷಾಕವಚ ಎಂಬ ಅರಿವು ಮೂಡಿದೆ. ಅವರು ಸಂವಿಧಾನ ನಮ್ಮದು ಎಂದು ಹೆಮ್ಮೆಯಿಂದ ಅಪ್ಪಿಕೊಂಡಿದ್ದಾರೆ. ಇದು ಮನುವಾದಿ ಮನಸ್ಥಿತಿಯವರ ನಿದ್ದೆ ಕೆಡಿಸಿದೆ.

1949ರ ನವೆಂಬರ್ 26ರಂದು ಭಾರತೀಯ ಸಂವಿಧಾನ ಜಾರಿಗೆ ಬಂದಾಗ, RSS ಇದನ್ನು ವಿರೋಧಿಸಿತ್ತು. ಏಕೆಂದರೆ ಇದು ಹಿಂದೂ ಕೇಂದ್ರಿತ ಕಾನೂನಿನ ದೃಷ್ಟಿಕೋನಕ್ಕೆ ಸರಿಹೊಂದಲ್ಲ ಎಂಬುದಾಗಿತ್ತು. ಆರೆಸ್ಸೆಸ್‌ನ ಮುಖವಾಣಿಯಾದ ಆರ್ಗನೈಸರ್ ಪತ್ರಿಕೆಯ 1949 ನವೆಂಬರ್ 30ರ ಸಂಪಾದಕೀಯವು “ಸಂವಿಧಾನದಲ್ಲಿ ಭಾರತೀಯ ತತ್ವಗಳ ಕೊರತೆಯಿದೆ” ಎಂದು ಟೀಕಿಸಿತ್ತು. ವಿಶೇಷವಾಗಿ ಮನುಸ್ಮೃತಿಯ ಕಾನೂನುಗಳನ್ನು ಒಳಗೊಂಡಿಲ್ಲವೆಂದು ಖೇದ ವ್ಯಕ್ತಪಡಿಸಿತ್ತು. “ಭಾರತದ ಹೊಸ ಸಂವಿಧಾನದ ಕೆಟ್ಟ ಅಂಶವೆಂದರೆ ಇದರಲ್ಲಿ ಯಾವುದೇ ಭಾರತೀಯತೆ ಇಲ್ಲ. ಮನುವಿನ ಕಾನೂನುಗಳು ವಿಶ್ವದ ಗೌರವವನ್ನು ಗಳಿಸಿವೆ. ಆದರೆ ನಮ್ಮ ಸಂವಿಧಾನದ ಪಂಡಿತರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ” ಎಂದಿತ್ತು. ಆರೆಸ್ಸೆಸ್‌ ಚಿಂತಕ ಎಂ.ಎಸ್. ಗೋಲ್ವಾಲ್ಕರ್ ಸಂವಿಧಾನವನ್ನು “ಪಾಶ್ಚಿಮಾತ್ಯ ದೇಶಗಳ ಸಂವಿಧಾನಗಳಿಂದ ಕಾಪಿ ಮಾಡಿದ ಒಂದು ಗೊಂದಲಮಯ ಸಂಗ್ರಹ” ಎಂದು ಕರೆದಿದ್ದರು.

ಆರೆಸ್ಸೆಸ್‌ ಸಂವಿಧಾನದ ಕೆಲವು ತತ್ವಗಳನ್ನು, ವಿಶೇಷವಾಗಿ ಎಲ್ಲರಿಗೂ ಸಮಾನತೆಯನ್ನು ವಿರೋಧಿಸಿತ್ತು. ಏಕೆಂದರೆ ಇದು ಮನುಸ್ಮೃತಿಯ ಜಾತಿ ಶ್ರೇಣೀಕರಣಕ್ಕೆ ವಿರುದ್ಧವಾಗಿತ್ತು. ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಜಾತಿ ತಾರತಮ್ಯ ನಿಷೇಧದಂತಹ ನಿಬಂಧನೆಗಳನ್ನು ಆರೆಸ್ಸೆಸ್‌ ಟೀಕಿಸಿತ್ತು. ವಿ.ಡಿ. ಸಾವರ್ಕರ್ ಮನುಸ್ಮೃತಿಯನ್ನು ಹಿಂದೂ ಕಾನೂನಿನ ಆಧಾರವೆಂದು ಕೊಂಡಾಡಿದ್ದರು. ಇದರ ಜೊತೆಗೆ, ಆರೆಸ್ಸೆಸ್‌ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳಲು ಹಿಂಜರಿದಿತ್ತು. ಇದನ್ನು ಜಾತ್ಯತೀತ ರಾಷ್ಟ್ರದ ಸಂಕೇತವೆಂದು ಭಾವಿಸಿತು. 2002 ರವರೆಗೆ, ಫ್ಲಾಗ್ ಕೋಡ್‌ನಲ್ಲಿ ಬದಲಾವಣೆಯಾದ ನಂತರವೇ ಆರೆಸ್ಸೆಸ್‌ ತನ್ನ ಕೇಂದ್ರ ಕಚೇರಿಯಲ್ಲಿ ಧ್ವಜವನ್ನು ಹಾರಿಸಿತು.

1948ರಲ್ಲಿ, ಮಹಾತ್ಮ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಆರೆಸ್ಸೆಸ್‌ ಸದಸ್ಯ ನಾಥೂರಾಂ ಗೋಡ್ಸೆ ಕಾರಣಕ್ಕೆ ಆರೆಸ್ಸೆಸ್‌ ಮೇಲೆ ನಿಷೇಧ ಹೇರಲಾಯಿತು. ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾರತೀಯ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡಲು ಮತ್ತು ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳಲು ಆದೇಶಿಸಿದರು. ಆರೆಸ್ಸೆಸ್‌ ಈ ಷರತ್ತುಗಳನ್ನು ಒಪ್ಪಿಕೊಂಡಿತು.

“1975–77ರ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಇಂದಿರಾ ಗಾಂಧಿ ಸಂವಿಧಾನದ ಹಕ್ಕುಗಳನ್ನು ತಡೆಹಿಡಿದಾಗ, ಆರೆಸ್ಸೆಸ್‌ ಪ್ರಜಾಪ್ರಭುತ್ವವನ್ನು ಪುನರ್‌ ಸ್ಥಾಪಿಸಲು ಭೂಗತ ಚಳವಳಿಯನ್ನು ಮುನ್ನಡೆಸಿತು. ಅನೇಕ ಕಾರ್ಯಕರ್ತರು ಬಂಧನಕ್ಕೊಳಗಾಗಿ, ಚಿತ್ರಹಿಂಸೆಗೆ ಒಳಗಾದರು” ಎಂದು ಹೇಳಿಕೊಳ್ಳುತ್ತದೆ. ಕೆಲವರು ಈ ಸಂದರ್ಭದಲ್ಲಿ ಆರೆಸ್ಸೆಸ್‌ ಸಂವಿಧಾನವನ್ನು ರಕ್ಷಿಸಿತು ಎಂದು ಕೊಂಡಾಡುತ್ತಾರೆ. ಆದರೆ, 42ನೇ ತಿದ್ದುಪಡಿಯನ್ನು (1976), ಇದು ಸಂವಿಧಾನದ ಮುನ್ನುಡಿಗೆ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿದಾಗ ಆರೆಸ್ಸೆಸ್‌ ವಿರೋಧಿಸಿತು. ಇವುಗಳನ್ನು ಅಪ್ರಜಾಪ್ರಭುತ್ವದಿಂದ ಸೇರಿಸಲಾಯಿತು ಎಂದು ವಾದಿಸಿತು. ಈಗಲೂ ಅದೇ ಚಾಳಿ ಮುಂದುವರಿದಿದೆ. ಅವರಿಗೆ ಸಂವಿಧಾನ ಎಂಬುದು ನುಂಗಲೂ ಆಗದ, ಉಗುಳಲೂ ಆಗದ ತುತ್ತಿನಂತಾಗಿದೆ.

1976ರ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ತಂದು ಸಮಾಜವಾದ ಮತ್ತು ಜಾತ್ಯತೀತ ಪದಗಳನ್ನು ಸೇರಿಸಿದ್ದನ್ನು ಪ್ರಶ್ನಿಸಿ ಬಲರಾಮ್ ಸಿಂಗ್, ಹಿರಿಯ ಬಿಜೆಪಿ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ 2024ರ ನವೆಂಬರ್‌ 24ರಂದು ವಜಾಗೊಳಿಸಿದೆ. “ಸಮಾಜವಾದವು ಮೂಲಭೂತವಾಗಿ ಕಲ್ಯಾಣ ರಾಜ್ಯವನ್ನು ಅರ್ಥೈಸುತ್ತದೆ. ಇದರರ್ಥ ರಾಜ್ಯವು ಕಲ್ಯಾಣ ರಾಜ್ಯವಾಗಿದೆ ಮತ್ತು ಜನರ ಕಲ್ಯಾಣಕ್ಕಾಗಿ ನಿಲ್ಲಬೇಕು ಮತ್ತು ಅವಕಾಶ ವಿಚಾರಕ್ಕೆ ಬಂದಾಗ ಸಮಾನತೆಯನ್ನು ಎತ್ತಿ ಹಿಡಿಯಬೇಕು” ಎಂದು ನ್ಯಾ. ಸಂಜೀವ್‌ ಖನ್ನಾ ಅಭಿಪ್ರಾಯಪಟ್ಟಿದ್ದರು. ಹೀಗಾದರೂ ಆರೆಸ್ಸೆಸ್‌ ಈ ವಿಚಾರವನ್ನು ಜೀವಂತವಾಗಿಡುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X