ಶಿವಮೊಗ್ಗ ಜಿಲ್ಲೆಯ ಸೊರಬದ ಮನೆಯಲ್ಲಿ ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಯಿಂದ, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಶಾಕ್ ಗೆ ತುತ್ತಾದ ಪತ್ನಿ ರಕ್ಷಿಸಲು ತೆರಳಿದ್ದ ಪತಿಗೂ ವಿದ್ಯುತ್ ಶಾಕ್ ತಗುಲಿ, ದಂಪತಿ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಜೂ. 26 ರ ರಾತ್ರಿ ನಡೆದಿದೆ.
ಪತಿ ಕೃಷ್ಣಪ್ಪ (50) ಹಾಗೂ ಅವರ ಪತ್ನಿ ವಿನೋದ (42) ಮೃತಪಟ್ಟ ದಂಪತಿಗಳು ಎಂದು ಗುರುತಿಸಲಾಗಿದೆ. ಸಂಜೆ ಸರಿಸುಮಾರು 7 ಗಂಟೆ ವೇಳೆ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಮನೆಯಲ್ಲಿ ಬಟ್ಟೆ ಒಣಗಿಸಲು ಸ್ಟೀಲ್ ತಂತಿ ಕಟ್ಟಲಾಗಿತ್ತು. ಸದರಿ ತಂತಿಯ ಸಮೀಪದಿಂದಲೆ ಮನೆಯ ವಿದ್ಯುತ್ ಸಂಪರ್ಕದ ವೈಯರ್, ಇನ್ಸುಲೇಟರ್ ಹಾದು ಹೋಗಿವೆ.ಬಟ್ಟೆ ಒಣಗಿಸಲು ಕಟ್ಟಿದ್ದ ತಂತಿಗೆ ಆಕಸ್ಮಿಕವಾಗಿ ಇನ್ಸುಲೇಟರ್ ಮೂಲಕ ವಿದ್ಯುತ್ ಪ್ರವಹಿಸಿದ್ದು, ಇದನ್ನು ಗಮನಿಸದ ವಿನೋದ ಅವರು ತಂತಿಗೆ ಬಟ್ಟೆ ಹಾಕಿದ್ದಾರೆ ಎನ್ನಲಾಗಿದೆ.

ಈ ವೇಳೆ ವಿದ್ಯುತ್ ಶಾಕ್ ಗೆ ತುತ್ತಾಗಿ ಒದ್ದಾಡಲಾರಂಭಿಸಿದ್ದಾರೆ. ತಕ್ಷಣವೇ ಅವರ ರಕ್ಷಣೆಗೆ ಮುಂದಾದ ಪತಿ ಕೃಷ್ಣಪ್ಪರಿಗೂ ಶಾಕ್ ತಗುಲಿದ್ದು, ಇಬ್ಬರೂ ಸ್ಥಳದಲ್ಲಿಯೇ ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.