ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ವರ್ಚಸ್ಸು ಮತ್ತು ಘನತೆಗೆ ಧಕ್ಕೆ ತರುವ ದುರುದ್ದೇಶದಿಂದ ಸಾರ್ವಜನಿಕವಾಗಿ ಆಧಾರರಹಿತ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಚಿವ ಚಲುವರಾಯಸ್ವಾಮಿ ಅವರಿಗೆ ಜಯ ಲಭಿಸಿದೆ.
ಸಚಿವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದ ಸುರೇಶ್ ಗೌಡ, ಇದೀಗ ನ್ಯಾಯಾಲಯದ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡು ಸಚಿವರ ಕ್ಷಮೆ ಯಾಚಿಸಿದ್ದಾರೆ.
ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಚಿವ ಚಲುವರಾಯಸ್ವಾಮಿಯವರು ಸಲ್ಲಿಸಲಾಗಿದ್ದ ದೂರಿನ ಅನ್ವಯ, ಸುರೇಶ್ ಗೌಡ ಅವರು ಚಲುವರಾಯಸ್ವಾಮಿ ಅವರ ಘನತೆ, ಗೌರವ ಮತ್ತು ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದರು.
ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾದ ಮಾಜಿ ಶಾಸಕ ಸುರೇಶ್ ಗೌಡ ಸಲ್ಲಿಸಲಾದ ಜಂಟಿ ಮೆಮೋದಲ್ಲಿ, ಸುರೇಶ್ ಗೌಡ ಅವರು ತಾವು ಮಾಡಿದ ಯಾವುದೇ ಹೇಳಿಕೆಗಳಿಂದ ಸಚಿವ ಚಲುವರಾಯಸ್ವಾಮಿ ಅವರಿಗೆ ನೋವಾಗಿದ್ದರೆ ಅಥವಾ ಅವರ ಘನತೆಗೆ ಧಕ್ಕೆಯಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

“ನನ್ನ ಯಾವುದೇ ಹೇಳಿಕೆಯಿಂದ ದೂರುದಾರರಿಗೆ(ಚಲುವರಾಯಸ್ವಾಮಿಯವರಿಗೆ) ನೋವಾಗಿದ್ದರೆ, ಯಾವುದೇ ದುರುದ್ದೇಶವಿಲ್ಲದೆ ಈ ಹೇಳಿಕೆಯನ್ನು ನೀಡಲಾಗಿದೆ, ಮತ್ತು ದೂರುದಾರರಿಗೆ ಅಥವಾ ದೂರುದಾರರ ಘನತೆಗೆ ಧಕ್ಕೆ ತರುವ ಅಥವಾ ದೂರುದಾರರನ್ನು ಮಾನಹಾನಿ ಮಾಡುವ ಯಾವುದೇ ಉದ್ದೇಶವಿರಲಿಲ್ಲ” ಎಂದು ಉಲ್ಲೇಖಿಸಿದ್ದಾರೆ.
ಆರೋಪಿಯು ನೀಡಿದ ಯಾವುದೇ ಹೇಳಿಕೆ ದೂರುದಾರರಿಗೆ ನೋವುಂಟು ಮಾಡಿದ್ದರೆ, ಆರೋಪಿಯು ದೂರುದಾರರಲ್ಲಿ ವಿಷಾದ ವ್ಯಕ್ತಪಡಿಸುತ್ತಾನೆ ಎಂದು ಮೆಮೋದಲ್ಲಿ ತಿಳಿಸಲಾಗಿದೆ.
ಈ ತೀರ್ಪು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ವಿರುದ್ಧ ಸುಳ್ಳು ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರಿಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಚಿವರ ಪರ ಹೈಕೋರ್ಟ್ ವಕೀಲರಾದ ಸೂರ್ಯ ಮುಕುಂದ್ ರಾಜ್ ವಕಾಲತ್ತು ವಹಿಸಿದ್ದರು.
