ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಸಮೀಕ್ಷೆ ಪೂರ್ಣಗೊಳ್ಳಲು ನಾಲ್ಕು ದಿನಗಳಷ್ಟೇ ಬಾಕಿ ಇದೆ. ನಿರೀಕ್ಷೆಗೂ ಮೀರಿ ಸಮೀಕ್ಷೆ ನಡೆದಿರುವುದು ಸದ್ಯದ ವಿವರಗಳಿಂದ ಸ್ಪಷ್ಟವಾಗುತ್ತಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕೇವಲ ಶೇ. 51ರಷ್ಟು ಸಮೀಕ್ಷೆಯಾಗಿದ್ದರೂ ರಾಜ್ಯದ ಇತರೆ ಜಿಲ್ಲೆಗಳು ಗರಿಷ್ಠ ಮಟ್ಟದಲ್ಲಿ ಸರ್ವೇಯಲ್ಲಿ ಪಾಲ್ಗೊಂಡಿವೆ.
ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣಕ್ಕಾಗಿ ನೇಮಕವಾಗಿರುವ ಏಕಸದಸ್ಯ ಆಯೋಗದ ಜಸ್ಟಿಸ್ ಎಚ್.ಎನ್.ನಾಗಮೋಹನ್ ದಾಸ್ ಅವರು ‘ಈದಿನ ಡಾಟ್’ಗೆ ಪ್ರತಿಕ್ರಿಯಿಸಿದ್ದು, ಇಂದು (27-06-2025) ಮಧ್ಯಾಹ್ನ 12ಗಂಟೆಯವರೆಗೆ ದಾಖಲಾಗಿರುವ ಅಂಕಿ- ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ.
2011ರ ಜನಗಣತಿಯ ವೇಳೆ ದಾಖಲಿಸಲಾಗಿರುವ ಪರಿಶಿಷ್ಟ ಜಾತಿ (ಎಸ್‌ಸಿ) ಜನರ ಜಿಲ್ಲಾವಾರು ಪ್ರಮಾಣ ಮತ್ತು 2025ರ ವೇಳೆಗೆ ಆಗಿರಬಹುದಾದ ಅಂದಾಜು ಎಸ್‌ಸಿ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮೀಕ್ಷಾ ಪ್ರಗತಿಯನ್ನು ಲೆಕ್ಕಹಾಕಲಾಗಿದೆ. ಆ ಪ್ರಕಾರ 12 ಜಿಲ್ಲೆಗಳಲ್ಲಿ ಅಂದಾಜಿಗಿಂತ ಹೆಚ್ಚಿನ ಪ್ರಮಾಣದ ಜನರು ತಮ್ಮ ಜಾತಿಗಳನ್ನು ನಮೂದಿಸಿಕೊಂಡಿದ್ದಾರೆ.
ಹಾವೇರಿ ಜಿಲ್ಲೆಯು ನಿರೀಕ್ಷೆಗೂ ಮೀರಿ ಸ್ಪಂದಿಸಿದ್ದು, ಹೆಚ್ಚು ಜನರನ್ನು ನೋಂದಾಯಿಸಿರುವ ಮೊದಲ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ 2011ರ ಜನಗಣತಿಯ ಪ್ರಕಾರ 2,19,976 ಮಂದಿ ಪರಿಶಿಷ್ಟ ಜಾತಿಯ ಜನರಿದ್ದರು. 2025ರ ವೇಳೆಗೆ 2,33,001 ಜನರು ಇರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಒಳಮೀಸಲಾತಿ ಸಮೀಕ್ಷೆಯಲ್ಲಿ 2,59,513 ಮಂದಿ ನೋಂದಾಯಿಸಿಕೊಂಡಿದ್ದಾರೆ. ಆ ಪ್ರಕಾರ ಶೇ. 111ರಷ್ಟು ಸಮೀಕ್ಷೆ ಈ ಜಿಲ್ಲೆಯಲ್ಲಾಗಿದೆ. (ಎಲ್ಲಾ ಜಿಲ್ಲೆಗಳ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೋಷ್ಟಕ ನೋಡಿರಿ)
ಹಾವೇರಿ ಜಿಲ್ಲೆಯಂತೆಯೇ ಉಳಿದ ಜಿಲ್ಲೆಗಳ ಪ್ರಗತಿಯನ್ನು ನೋಡುವುದಾದರೆ- ಗದಗ 108 %, ದಾವಣಗೆರೆ 108 %, ಉಡುಪಿ 106 %, ಬಾಗಲಕೋಟೆ 105 %, ಉತ್ತರ ಕನ್ನಡ 104 %, ಧಾರವಾಡ 104 %, ಮಂಡ್ಯ 103 %, ಹಾಸನ 102%, ತುಮಕೂರು 101 %, ಚಾಮರಾಜನಗರ 101 %, ವಿಜಯಪುರ 100 % ಸಮೀಕ್ಷೆ ಆಗಿರುವುದಾಗಿ ಸದ್ಯದ ವಿವರಗಳು ಹೇಳುತ್ತಿವೆ.
ಇದನ್ನೂ ಓದಿರಿ: ಇರಾನ್- ಇಸ್ರೇಲ್ ಕದನ; ಭಾರತದ ತಟಸ್ಥ ನಿಲುವು ಸರಿಯೇ?
ಎಂಟು ಜಿಲ್ಲೆಗಳಲ್ಲಿ ಶೇ. 95ರಿಂದ ಶೇ. 99ರಷ್ಟು ಸಮೀಕ್ಷೆಯಾಗಿದೆ. ಚಿಕ್ಕಮಗಳೂರು 99 %, ಚಿತ್ರದುರ್ಗ 97 %, ಕೊಪ್ಪಳ 97 %, ಶಿವಮೊಗ್ಗ 97%, ರಾಯಚೂರು 97 %, ಬೆಳಗಾವಿ 96 %, ಕೊಡಗು 96 %, ಬಳ್ಳಾರಿ 96 %, ವಿಜಯನಗರ 95 % ಸಮೀಕ್ಷಾ ಪ್ರಗತಿ ಸಾಧಿಸಿವೆ.
8 ಜಿಲ್ಲೆಗಳಲ್ಲಿ ಶೇ. 89ರಿಂದ ಶೇ. 94ರಷ್ಟು ಗಣಕೀಕರಣ ಆಗಿದೆ. ಮೈಸೂರು 94 %, ಕಲಬುರಗಿ 93 %, ಬೆಂಗಳೂರು ಗ್ರಾಮಾಂತರ 93 %, ಕೋಲಾರ 93 %, ಚಿಕ್ಕಬಳ್ಳಾಪುರ 91 %, ಯಾದಗಿರಿ 90 %, ಬೀದರ್ 90 %, ದಕ್ಷಿಣ ಕನ್ನಡ 89 % ಜನ ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಅಂದರೆ ಶೇ. 51ರಷ್ಟು ಜನರಷ್ಟೇ ತಮ್ಮ ಜಾತಿಗಳನ್ನು ಬರೆಸಿದ್ದಾರೆ. ಆದರೆ ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿದ ಬೆಂಗಳೂರು ನಗರ ಭಾಗದಲ್ಲಿ ಶೇ. 80ರಷ್ಟು ಸಮೀಕ್ಷೆ ಆಗಿದೆ. ಇನ್ನುಳಿದಂತೆ ರಾಮನಗರ ಜಿಲ್ಲೆಯಲ್ಲಿ ಶೇ. 86ರಷ್ಟು ಗಣಕೀಕರಣ ಸಾಧಿಸಲಾಗಿದೆ.
ಜಿಲ್ಲಾವಾರು ಸಂಪೂರ್ಣ ವಿವರ (ಕೋಷ್ಟಕ)

2011ರ ಜನಗಣತಿಯ ಪ್ರಕಾರ ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ 1,04,74,992 (ಒಂದು ಕೋಟಿ ನಾಲ್ಕು ಲಕ್ಷದ ಎಪ್ಪತ್ತನಾಲ್ಕು ಸಾವಿರದ ಒಂಬೈನೂರ ಎರಡು) ಜನರಿದ್ದರು; 2025ರ ವೇಳೆಗೆ 1,16,67,039 (ಒಂದು ಕೋಟಿ ಹದಿನಾರು ಲಕ್ಷದ ಅರವತ್ತೇಳು ಸಾವಿರದ ಮೂವತ್ತ ಒಂಬತ್ತು) ಮಂದಿ ಇರಬಹುದೆಂದು ಅಂದಾಜಿಸಲಾಗಿತ್ತು. ಸಮೀಕ್ಷೆಯಲ್ಲಿ 1,06,63,036 (ಒಂದು ಕೋಟಿ ಆರು ಲಕ್ಷದ ಅರವತ್ತಮೂರು ಸಾವಿರದ ಮೂವತ್ತಾರು) ಜನರು ಪಾಲ್ಗೊಂಡಿದ್ದಾರೆ. ಆ ಮುಖೇನ ಇಂದು ಮಧ್ಯಾಹ್ನ 12 ಗಂಟೆಯ ವೇಳೆಗೆ ಶೇ. 91ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
‘ಈ ದಿನ’ಕ್ಕೆ ಪ್ರತಿಕ್ರಿಯಿಸಿರುವ ಜಸ್ಟಿಸ್ ನಾಗಮೋಹನ ದಾಸ್ ಅವರು, “ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ. ಬೆಂಗಳೂರು ನಗರವನ್ನು ದೃಷ್ಟಿಯಲ್ಲಿಟ್ಟುಕೊಂಡು, ಸಮೀಕ್ಷಾ ಅವಧಿಯನ್ನು ವಿಸ್ತರಿಸಿದೆವು. ಆದರೆ ಜೂನ್ 30ರ ನಂತರ ಮತ್ತೆ ವಿಸ್ತರಣೆ ಮಾಡುವುದಿಲ್ಲ. ಸಮುದಾಯಗಳ ಮುಖಂಡರು, ಸಚಿವರು, ಉದ್ಯೋಗಾಕಾಂಕ್ಷಿಗಳು ಬೇಗನೇ ಸಮೀಕ್ಷಾ ಕಾರ್ಯ ಮುಗಿಸಲು ಕೋರುತ್ತಿದ್ದಾರೆ. ಒಳಮೀಸಲಾತಿ ನಿರ್ಣಯಕ್ಕೆ ಈಗ ಲಭ್ಯವಿರುವ ಅಂಕಿ-ಅಂಶಗಳು ಸಾಕಾಗುತ್ತವೆ. ಬೆಂಗಳೂರು ನಗರ ಹೊರತುಪಡಿಸಿ ಲೆಕ್ಕ ಹಾಕಿದರೆ ರಾಜ್ಯದಲ್ಲಿ ಶೇ. 95ರಷ್ಟು ಗಣತಿಯಾಗಿದೆ. ಬೆಂಗಳೂರು ನಗರವನ್ನು ಒಳಗೊಂಡರೆ ಶೇ.91ರಷ್ಟು ಮಂದಿ ನೋಂದಣಿಯಾಗಿದ್ದಾರೆ. ಇನ್ನುಳಿದ ನಾಲ್ಕು ದಿನಗಳಲ್ಲಿ ಇನ್ನೊಂದಿಷ್ಟು ಜನ ಸೇರ್ಪಡೆಯಾಗಬಹುದು” ಎಂದು ತಿಳಿಸಿದರು.

ಇದನ್ನೂ ಓದಿರಿ: ಬಿಪಿಎಲ್ ಕುಟುಂಬಗಳಿಗೆ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಸರ್ಕಾರ ಚಿಂತನೆ; ತಗ್ಗುವುದೇ ಮಧ್ಯವರ್ತಿಗಳ ಹಾವಳಿ
“ಬೆಂಗಳೂರು ನಗರದಲ್ಲಿ ವಾಸಿಸುವ ದಲಿತರಿಗೆ ಸಾಮಾಜಿಕ ಒತ್ತಡಗಳಿವೆ ಎಂಬುದನ್ನು ಅಲ್ಲಗಳೆಯಲಾಗದು. ಹೀಗಾಗಿ ಅನೇಕರು ತಮ್ಮ ಜಾತಿಯನ್ನು ಹೇಳಿಕೊಂಡಿಲ್ಲ. ಸಮೀಕ್ಷೆ ಸಮಯದಲ್ಲಿ ಉಂಟಾದ ಮಳೆ ಮತ್ತು ಆರ್‌ಸಿಬಿ ಕಾಲ್ತುಳಿತದ ವಿದ್ಯಮಾನಗಳಿಂದಲೂ ಕೊಂಚ ಹಿನ್ನಡೆಯಾಯಿತು. ಬೆಂಗಳೂರಿಗೆ ವಲಸೆ ಬಂದವರು ನೋಂದಣಿ ಮಾಡಿಕೊಳ್ಳದೆ ಇರುವ ಸಾಧ್ಯತೆ ಇದೆ” ಎಂದರು.
“ಆದರೆ ಹಿಂದೆಂದೂ ಆಗಿರದಷ್ಟು ಉತ್ತಮ ಮಟ್ಟದಲ್ಲಿ ಸಮೀಕ್ಷೆ ನಡೆದಿದೆ. ಪರಿಶಿಷ್ಟ ಜಾತಿಗಳ ಸಂಘಸಂಸ್ಥೆಗಳು, ಕಾರ್ಯಕರ್ತರು, ಮುಖಂಡರು ದೊಡ್ಡ ಮಟ್ಟದಲ್ಲಿ ಅಭಿಯಾನಗಳನ್ನು ನಡೆಸಿದರು. ಸಮೀಕ್ಷೆಯು ನಿರೀಕ್ಷೆಗೂ ಮೀರಿ ನಡೆದಿರುವುದಕ್ಕೆ ಇವರೆಲ್ಲರೂ ಕಾರಣವಾಗಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.