ಅಕ್ರಮ ಅಸ್ತಿ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಐವರು ಮಾಜಿ ಸಚಿವರ ವಿರುದ್ಧ ಪ್ರಾಥಮಿಕ ತನಿಖೆಗೆ ಜಾರ್ಖಂಡ್ ಸರ್ಕಾರ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಉದ್ದೇಶವು ಸಾಕಷ್ಟು ಸಾಕ್ಷ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು, ಇಲಾಖಾ ವಿಚಾರಣೆ ಅಥವಾ ನಿಯಮಿತ ಪ್ರಕರಣಗಳ ನೋಂದಣಿಯನ್ನು ಒಳಗೊಂಡಿರುತ್ತದೆ.
2014 ಮತ್ತು 2019ರ ನಡುವೆ ಮುಖ್ಯಮಂತ್ರಿ ರಘುಬರ್ ದಾಸ್ ಅವರ ಸಂಪುಟದ ಭಾಗವಾಗಿದ್ದ ಐವರಲ್ಲಿ ನಾಲ್ವರು ಪ್ರಸ್ತುತ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಮಾಜಿ ಸಚಿವರಾದ ಅಮರ್ ಕುಮಾರ್ ಬೌರಿ, ರಣಧೀರ್ ಕುಮಾರ್ ಸಿಂಗ್, ನೀರಾ ಯಾದವ್, ಲೂಯಿಸ್ ಮರಾಂಡಿ ಮತ್ತು ನೀಲಕಂಠ ಸಿಂಗ್ ಮುಂಡಾ ವಿರುದ್ಧ ಪ್ರಾಥಮಿಕ ತನಿಖೆಗೆ ಸಂಪುಟದಿಂದ ಅನುಮತಿ ನೀಡಲಾಗಿದೆ ಎಂದು ಸರ್ಕಾರದ ವಕ್ತಾರರು ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಇಡಿ, ಸಿಬಿಐ, ಐಟಿ ಇಲಾಖೆಗಳೇ ಎನ್‌ಡಿಎ ನಿಜವಾದ ಶಕ್ತಿ: ಉದ್ಧವ್ ಠಾಕ್ರೆ ವಾಗ್ದಾಳಿ
2020 ರಲ್ಲಿ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಹಿನ್ನೆಲೆಯಲ್ಲಿ ಐವರು ಮಾಜಿ ಸಚಿವರ ಅಕ್ರಮ ಆಸ್ತಿಗಳ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರವು ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಆದೇಶಿಸಿತ್ತು.
ಕಳೆದ ವರ್ಷ ನವೆಂಬರ್‌ನಲ್ಲಿ ಸೊರೇನ್ ಐವರು ಬಿಜೆಪಿ ನಾಯಕರ ಅಕ್ರಮ ಆಸ್ತಿಗಳ ಬಗ್ಗೆ ಪ್ರಾಥಮಿಕ ತನಿಖೆಯನ್ನು ದಾಖಲಿಸಲು ಎಸಿಬಿಗೆ ಅನುಮತಿ ನೀಡಿದ್ದರು. ಆದಾಗ್ಯೂ, ಎಸಿಬಿ ಐವರು ಮಾಜಿ ಸಚಿವರ ವಿರುದ್ಧ ಪ್ರತ್ಯೇಕ ಪ್ರಾಥಮಿಕ ತನಿಖೆಗೆ ಕೋರಿದೆ.
ಮಾಜಿ ಸಚಿವರ ವಿರುದ್ಧ ಪ್ರಾಥಮಿಕ ತನಿಖೆಗೆ ಸಂಪುಟದ ಒಪ್ಪಿಗೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, ಇದೊಂದು ರಾಜಕೀಯ ತಂತ್ರ ಎಂದಿದ್ದಾರೆ.
“ಸ್ವತಃ ಮುಖ್ಯಮಂತ್ರಿಯೆ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವ ಕಾರಣ, ಬಿಜೆಪಿಗೆ ಕಳಂಕ ತರಲು ಬಯಸುತ್ತಿದ್ದಾರೆ. ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ” ಎಂದು ತನಿಖೆ ಎದುರಿಸುತ್ತಿರುವ ಮಾಜಿ ಕೃಷಿ ಸಚಿವ ರಣಧೀರ್ ಕುಮಾರ್ ಸಿಂಗ್ ಹೇಳಿದ್ದಾರೆ.