ಜುಲೈ 15ರೊಳಗೆ ಶಿವಮೊಗ್ಗದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡದಿದ್ದರೆ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಪಾತ್ರದಿಂದ ನೀರು ಒದಗಿಸಲು ನಮ್ಮ ವಿರೋಧವಿಲ್ಲ. ಆದರೆ ವರ್ಷವಿಡೀ ನದಿಪಾತ್ರದಿಂದ ನೀರು ಪೂರೈಸಲು ಅವಕಾಶವಿಲ್ಲ. ಜುಲೈ 15 ರಿಂದ ಅಣೆಕಟ್ಟಿನಿಂದ ನೀರು ಬಿಡಲಾಗುತ್ತಿದೆ. ಪ್ರಸ್ತುತ ಅಣೆಕಟ್ಟಿನ 71 ಅಡಿ ಟಿಎಂಸಿ ಸಂಗ್ರಹ ಸಾಮರ್ಥ್ಯದಲ್ಲಿ 42% ನೀರು ಸಂಗ್ರಹವಿದೆ” ಎಂದು ತಿಳಿಸಿದರು.
ಭದ್ರಾ ಬಲದಂಡಾ ಯೋಜನೆಯಡಿಯಲ್ಲಿ 1600 ಕೋಟಿ ವೆಚ್ಚದಲ್ಲಿ ದಿನಕ್ಕೆ 30 ದಿನಗಳ ಕಾಲ ವರ್ಷವಿಡೀ 1 ಟಿಎಂಸಿ ನೀರು ಪೂರೈಸಲು ಉದ್ದೇಶಿಸಲಾಗಿದೆ. 8 ಎಕರೆ ಪ್ರದೇಶದಲ್ಲಿ ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಅನುಷ್ಠಾನವನ್ನು ಪಂಚಾಯತ್ ರಾಜ್ ಇಲಾಖೆ ನಿರ್ವಹಿಸುತ್ತಿದೆ ಎನ್ನಲಾಗಿದೆ. ನೀರು ಬಿಡಲು ಸಮಯ ಸಮೀಪಿಸುತ್ತಿದೆ. ಆದರೆ, ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ವಾಲ್ ನಿರ್ಮಿಸಿ ಜಲಜೀವನ ಮಿಷನ್ ಯೋಜನೆಗೆ ನೀರು ಹರಿಸಬೇಕಿತ್ತು. ಆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಯುತ್ತಿದೆ” ಎಂದು ಬಸವರಾಜಪ್ಪ ಆತಂಕ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಶೌಚಾಲಯದಲ್ಲೇ ಕುಳಿತು ಹೈಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ಯುವಕ: ವಿಡಿಯೋ ವೈರಲ್
ಒಂದು ವೇಳೆ ಜುಲೈ 15ರ ನಂತರ ಅಚ್ಚುಕಟ್ಟುದಾರರಿಗೆ ಜಲಾಶಯದಿಂದ ನೀರು ಬಿಡದಿದ್ದರೆ, ಅದರಿಂದ ಉಂಟಾಗುವ ಅನಾಹುತಗಳಿಗೆ ಅಧಿಕಾರಿಗಳೇ ನೇರ ಕಾರಣರಾಗುತ್ತಾರೆ. ರಾಜ್ಯ ರೈತ ಸಂಘ ಈ ನಿರ್ಧಾರದ ವಿರುದ್ಧ ದೇವನಹಳ್ಳಿ ಮಾದರಿಯಲ್ಲೇ ಬೃಹತ್ ಪ್ರತಿಭಟನೆ ನಡೆಸಲು ಸಿದ್ಧವಿದೆ ಎಂದು ಬಸವರಾಜಪ್ಪ ಎಚ್ಚರಿಕೆ ನೀಡಿದರು.