ಭೀಕರ ಯುದ್ಧಗಳಿಗೆ ಬಲಿಯಾಗುತ್ತಿದೆ ಜಗತ್ತು; ಪರಿಣಾಮಗಳೂ ವಿನಾಶಕಾರಿ

Date:

Advertisements
ಯುದ್ಧಗಳು ಜನರ ಮನಸ್ಸಿನಲ್ಲಿ ಕರುಣೆ, ಸಹಾನುಭೂತಿ ಹಾಗೂ ಸಾಮರಸ್ಯವನ್ನು ತೊಡೆದು ಹಾಕಿ, ದ್ವೇಷ, ಭಯ, ಹಾಗೂ ಕ್ರೌರ್ಯವನ್ನು ಹುಟ್ಟುಹಾಕುತ್ತವೆ. ಶಾಂತಿಯುತ ಸಹಬಾಳ್ವೆಯನ್ನು ಹಾಳುಮಾಡುತ್ತವೆ. ಜಗತ್ತಿನ ಶಾಂತಿಯು ನಾಶವಾಗುತ್ತದೆ.

ಮಾನವ ಜಗತ್ತಿನಲ್ಲಿ ಅತ್ಯಂತ ಭೀಕರ ಮತ್ತು ವಿನಾಶಕಾರಿ ಕೃತ್ಯಗಳನ್ನು ಪಟ್ಟಿ ಮಾಡಿದರೆ – ಮೊದಲ ಸ್ಥಾನ ಪಡೆಯುವುದು ಯುದ್ಧ. ಕದನ ಅಥವಾ ಯುದ್ಧವು ಕೇವಲ ರಾಷ್ಟ್ರಗಳ ನಡುವಿನ ಸಂಘರ್ಷ ಮತ್ತು ಸಂಬಂಧಗಳ ಮೇಲೆ ಮಾತ್ರವಲ್ಲದೆ, ಸಮಾಜ, ಆರ್ಥಿಕತೆ, ಸಂಸ್ಕೃತಿ ಹಾಗೂ ಮಾನವೀಯತೆಯ ಮೇಲೆ ದೀರ್ಘಕಾಲಿಕ ಮತ್ತು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಯುದ್ಧದ ಭೀಕರತೆಯು ಜಗತ್ತನ್ನು ಅವನತಿಯ ಹಾದಿಗೂ ಕೊಂಡೊಯ್ಯುವಷ್ಟು ಕ್ರೌರ್ಯವನ್ನೂ ಹೊಂದಿದೆ. ಯುದ್ಧದಿಂದ ಉಂಟಾಗುವ ದುರಂತಗಳು ಸಮಾಜ, ಆರ್ಥಿಕತೆ ಹಾಗೂ ಪರಿಸರದ ಮೇಲೆ ಭಾರೀ ಪರಿಣಾಮವನ್ನು ಬೀರುತ್ತದೆ. ಮಾತ್ರವಲ್ಲ, ಮಾನವನ ಮಾನಸಿಕ ಆರೋಗ್ಯದ ಮೇಲೂ ಗಾಢವಾದ ಗಾಯಗಳನ್ನು ಉಂಟುಮಾಡುತ್ತದೆ.

ರಾಷ್ಟ್ರಗಳು, ಗುಂಪುಗಳು ಅಥವಾ ಸಮುದಾಯಗಳ ನಡುವಿನ ಸಶಸ್ತ್ರ ಸಂಘರ್ಷಗಳನ್ನೂ ಯುದ್ಧ ಎಂದೇ ಕರೆಯಲಾಗುತ್ತದೆ. ಜಗತ್ತಿನಲ್ಲಿ ರಾಜಕೀಯ, ಆರ್ಥಿಕ, ಭೌಗೋಳಿಕ ಅಥವಾ ಧಾರ್ಮಿಕ ಉದ್ದೇಶಗಳಿಗಾಗಿ ಯುದ್ಧಗಳು ಘಟಿಸಿವೆ. ಯುದ್ಧವು ಜಾಗತಿಕ ಸಂಘರ್ಷ(ವಿಶ್ವ ಯುದ್ಧ)ದಿಂದ ಹಿಡಿದು, ಗಡಿಯೊಳಗಿನ ಗೆರಿಲ್ಲಾ ಯುದ್ಧಗಳವರೆಗೆ ವ್ಯಾಪಿಸಿದೆ. ಗೆರಿಲ್ಲಾ ಯುದ್ಧವೆಂದು ಕರೆಯಲಾಗುವ ಸಂಘರ್ಷಗಳು ತುಳಿತಕ್ಕೊಳಗಾದ ಸಮುದಾಯಗಳು ತಮ್ಮ ಉಳಿವು ಮತ್ತು ಹಕ್ಕುಗಳಿಗಾಗಿ ಶಸ್ತ್ರಾಸ್ತ್ರ ಹೋರಾಟಗಳಿಗಾಗಿ ಸಂಭವಿಸುತ್ತವೆ. ಆದರೆ, ಬೃಹತ್ ಯುದ್ಧಗಳು ಎದುರಾಳಿಗಳ ದಮನ, ವಿನಾಶಕ್ಕಾಗಿಯೇ ನಡೆಯುತ್ತವೆ. 20ನೇ ಶತಮಾನದಲ್ಲಿ ನಡೆದ ಮೊದಲ ಮತ್ತು ಎರಡನೇ ವಿಶ್ವಯುದ್ಧಗಳು, ಇಂಡೋ-ಪಾಕ್ ಯುದ್ಧ, ಇಂಡೋ-ಚೀನಾ ಯುದ್ಧ, ವಿಯೆಟ್ನಾಂ ಯುದ್ಧ, ಇರಾಕ್-ಇರಾನ್ ಯುದ್ಧ ಹಾಗೂ ಇತ್ತೀಚಿನ ಉಕ್ರೇನ್-ರಷ್ಯಾ, ಹಮಾಸ್‌-ಇಸ್ರೇಲ್ ಹಾಗೂ ಇರಾನ್ ಇಸ್ರೇಲ್‌ ಸಂಘರ್ಷಗಳು ಯುದ್ಧದ ಭೀಕರತೆಯನ್ನು ಚಿತ್ರಿಸಿ-ತೋರಿಸಿವೆ.

ಯುದ್ಧಗಳಿಂದ ಒಂದು ರೀತಿಯ ಪರಿಣಾಮಗಳು ಅಥವಾ ಬಿಕ್ಕಟ್ಟುಗಳು ಎದುರಾಗುವುದಿಲ್ಲ. ಯುದ್ಧದಿಂದಾಗಿ ನಾನಾ ರೀತಿಯ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದ್ದು:

Advertisements

ಮಾನವೀಯ ದುರಂತಗಳು

ಯುದ್ಧದ ಅತಿದೊಡ್ಡ ದುರಂತವೆಂದರೆ – ಅದು ಜನರ ಜೀವಹಾನಿ. ಎರಡನೇ ವಿಶ್ವಯುದ್ಧ ನಡೆದಾಗ ಸುಮಾರು 7ರಿಂದ 8.5 ಕೋಟಿ ಜನರು ಪ್ರಾಣ ಕಳೆದುಕೊಂಡರು. ಇತ್ತೀಚಿನ ಉಕ್ರೇನ್-ರಷ್ಯಾ ಯುದ್ಧದಲ್ಲಿ (2022-2025) ಸಾವಿರಾರು ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಹಮಾಸ್‌-ಇಸ್ರೇಲ್ ಸಂಘರ್ಷದಲ್ಲಿ 63 ಸಾವಿರ ಮಂದಿ ಮತ್ತು ಇಸ್ರೇಲ್-ಇರಾನ್ ಘರ್ಷಣೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಯುದ್ಧಗಳಿಂದ ಗಾಯಗೊಂಡವರ ಸಂಖ್ಯೆ ಇನ್ನೂ ಅಪಾರ. ಲಕ್ಷಾಂತರ ಜನರು ದೈಹಿಕ ಮತ್ತು ಮಾನಸಿಕ ನೋವು-ಗಾಯಗಳಿಂದ ಬಳಲಿದ್ದಾರೆ, ಈಗಲೂ ಬಳಲುತ್ತಿದ್ದಾರೆ. 2ನೇ ಮಹಾಯುದ್ಧದ ಅಂತ್ಯದಲ್ಲಿ ಅಮೆರಿಕ ನಡೆಸಿದ ಅಣುಬಾಂಬ್‌ ದಾಳಿಯಿಂದ ಹಿರೋಶಿಮಾ, ನಾಗಸಾಕಿಯ ಜನರು ಇಂದಿಗೂ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಅಲ್ಲಿ, ಹುಟ್ಟುವ ಮಕ್ಕಳಲ್ಲಿ ಹಲವಾರು ಮಕ್ಕಳು ಅಂಗವೈಕಲ್ಯದಿಂದ ಹುಟ್ಟುತ್ತಿದ್ದಾರೆ.

ಜೊತೆಗೆ, ಯುದ್ಧದಿಂದ ಆಹಾರ, ನೀರು, ವೈದ್ಯಕೀಯ ಸೌಲಭ್ಯ ಹಾಗೂ ವಸತಿಯ ನಾಶವೂ ಆಗುತ್ತದೆ. ಜನರು ನಿರ್ಗತಿಕರಾಗಿ, ನಿರಾಶ್ರಿತರಾಗಿ ಬದುಕುವಂತಾಗುತ್ತದೆ. ಹೊಟ್ಟೆಪಾಡಿಗಾಗಿ ದಿನನಿತ್ಯವೂ ಹೋರಾಟ ನಡೆಸಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.

ಆರ್ಥಿಕ ಅವನತಿ

ಯುದ್ಧದಿಂದ ವಾಣಿಜ್ಯ, ಕೃಷಿ, ಮತ್ತು ಉತ್ಪಾದನೆಯನ್ನು ಸ್ಥಗಿತಗೊಳ್ಳುತ್ತವೆ. ರಸ್ತೆಗಳು, ಸೇತುವೆಗಳು, ಕಟ್ಟಡಗಳು ಹಾಗೂ ಕೈಗಾರಿಕೆಗಳನ್ನು ಧ್ವಂಸಗೊಳಿಸುತ್ತದೆ. 2022ರಿಂದ ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಿಂದಾಗಿ ಶಾಲೆಗಳು, ಆಸ್ಪತ್ರೆಗಳು ಹಾಗೂ ವಿದ್ಯುತ್ ಸ್ಥಾವರಗಳು ನಾಶವಾಗಿವೆ. ಅಂತೆಯೇ, ಗಾಜಾ ಮೇಲೆ ಇಸ್ರೇಲ್‌ ನಡೆಸಿದ ಪೈಶಾಚಿಕ ದಾಳಿಯಲ್ಲಿ ಇಡೀ ಗಾಜಾ ಪ್ರದೇಶವೇ ನಾಶವಾಗಿದೆ. ಆಸ್ಪತ್ರೆ, ಶಾಲೆಗಳು ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳ ನಾಶಗೊಂಡಿವೆ. ಇವುಗಳು ಆ ದೇಶಗಳ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿವೆ. ಸಾಮೂಹಿಕ ಮತ್ತು ಭಾರೀ ವಲಸೆಗೂ ಕಾರಣವಾಗಿವೆ. 2022ರಲ್ಲಿ ಯುದ್ಧದ ದಾಳಿಯ ಭೀರಕತೆಯಿಂದ 80 ಲಕ್ಷ ಜನರು ಯುರೋಪಿಯನ್ ದೇಶಗಳಿಗೆ ವಲಸೆ ಹೋಗಿದ್ದಾರೆ.

ಮಾತ್ರವಲ್ಲದೆ, ಜಾಗತಿಕ ವಹಿವಾಟುಗಳ ಮೇಲೂ ಪ್ರಭಾವ ಬೀರಿವೆ. ಉಕ್ರೇನ್-ರಷ್ಯಾ ಯುದ್ಧವು ಜಾಗತಿಕ ಆಹಾರ ಪೂರೈಕೆ ಸರಪಳಿಯನ್ನು ಕಡಿತಗೊಳಿಸಿದೆ. ವಿಶೇಷವಾಗಿ ಗೋಧಿ ರಫ್ತಿನ ಮೇಲೆ ಭಾರೀ ಪರಿಣಾಮ ಬೀರಿದ್ದರಿಂದ, ಆಫ್ರಿಕಾದ ರಾಷ್ಟ್ರಗಳಲ್ಲಿ ಆಹಾರ ಸಂಕಷ್ಟ ಎದುರಾಗಿತ್ತು. ಅಂತೆಯೇ, ಇರಾನ್-ಇಸ್ರೇಲ್ ಯುದ್ಧದಿಂದ ಇಂಧನ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದೆ. ಭಾರತದ ಬಾಸ್ಮತಿ ಅಕ್ಕಿ ಖರೀದಿದಾರ ರಾಷ್ಟ್ರಗಳಲ್ಲಿ ಇರಾನ್ ಪ್ರಮುಖ 2ನೇ ರಾಷ್ಟ್ರವಾಗಿದ್ದು, ಇರಾನ್‌ನಿಂದ ಅಕ್ಕಿ ಖರೀದಿ ಸ್ಥಗಿತಗೊಂಡಿದೆ. ಭಾರತದಲ್ಲಿ ಬಾಸ್ಮತಿ ದಾಸ್ತಾನು ಹೆಚ್ಚಾಗುವ ಭೀತಿ ಎದುರಾಗಿದ್ದು, ಬೆಲೆ ಕುಸಿತದ ಸವಾಲನ್ನು ದೇಶದ ರೈತರು ಮತ್ತು ವ್ಯಾಪಾರಿಗಳು ಎದುರಿಸುತ್ತಿದ್ದಾರೆ.

ಪರಿಸರ ವಿನಾಶ – ಮಾನಸಿಕ ಅನಾರೋಗ್ಯ

ಯುದ್ಧದಲ್ಲಿ ಬಳಸುವ ರಾಸಾಯನಿಕ ಶಸ್ತ್ರಾಸ್ತ್ರಗಳು, ಬಾಂಬ್‌ಗಳು ಭೂಮಿ ಮತ್ತು ಕಾಡನ್ನು ನಾಶ ಮಾಡುತ್ತವೆ. ನೀರು ಮತ್ತು ಗಾಳಿಯನ್ನು ಮಾಲಿನ್ಯಗೊಳಿಸುತ್ತವೆ. ಇದು ಪರಿಸರ ಮತ್ತು ಜೈವಿಕ ವೈವಿಧ್ಯದ ಅವನತಿಗೆ ಕಾರಣವಾಗುತ್ತದೆ. ಜೊತೆಗೆ, ಕಾರ್ಬನ್ ಹೊರಸೂಸುವಿಕೆಯು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಇದು ಜಗತ್ತಿನಾದ್ಯಂತ ದೀರ್ಘಕಾಲೀನ ಪರಿಣಾಮ ಬೀರುತ್ತದೆ. 2003ರ ಇರಾಕ್ ಯುದ್ಧದ ಸಂದರ್ಭದಲ್ಲಿ ತೈಲ ನಿಕ್ಷೇಪಗಳಿಗೆ ಬೆಂಕಿಬಿದ್ದು, ಗಂಭೀರ ಪರಿಸರ ಹಾನಿಯಾಯಿತು. ವಿಯೆಟ್ನಾಂ ಯುದ್ಧದಲ್ಲಿ (1960-1975) ಅಮೆರಿಕ ಎಸಗಿದ ರಾಸಾಯನಿಕ ದಾಳಿಯಿಂದ ಕಾಡುಗಳು ಮತ್ತು ಕೃಷಿಭೂಮಿಗಳು ಧ್ವಂಸಗೊಂಡವು.

ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ | ದಾಳಿ ಮಾಡಿ ನಲುಗಿದ ಇಸ್ರೇಲ್; ನೋವುಂಡರೂ ಬಲಗೊಂಡ ಇರಾನ್

ಯುದ್ಧಕ್ಕೆ ತುತ್ತಾಗಿ, ಬದುಕುಳಿದ ಸಂತ್ರಸ್ತರು, ವಿಶೇಷವಾಗಿ ಮಕ್ಕಳು ಹಾಗೂ ಯುವಕರು ‘ಪೋಸ್ಟ್-ಟ್ರಾಮ್ಯಾಟಿಕ್ ಸ್ಟ್ರೆಸ್ ಡಿಸಾರ್ಡರ್’ಗೆ (PTSD) ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆಫ್ಘಾನಿಸ್ತಾನ ಯುದ್ಧದ (2001-2021) ಸಂದರ್ಭದಲ್ಲಿ ಸಾವಿರಾರು ಜನರು ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಮಾತ್ರವಲ್ಲದೆ, ಸಾಮಾಜಿಕ ಸಂಬಂಧಗಳೂ ಕಡಿತಗೊಳ್ಳುತ್ತವೆ. 1980-1990ರ ಅವಧಿಯಲ್ಲಿ, ಉಗಾಂಡಾದಲ್ಲಿ ನಡೆದ ಆಂತರಿಕ ಯುದ್ಧದಿಂದಾಗಿ ಅಲ್ಲಿನ ಸಾಮಾಜಿಕ ರಚನೆಯೇ ಧ್ವಂಸಗೊಂಡಿತು.

ರಾಜಕೀಯ ಮತ್ತು ಜಾಗತಿಕ ಅವನತಿ

ಜಾಗತಿಕ ಅಥವಾ ಆಂತರಿಕ ಯುದ್ಧದಿಂದಾಗಿ ರಾಷ್ಟ್ರಗಳ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿತವನ್ನು ಎದುರಿಸಬೇಕಾಗುತ್ತದೆ. ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಕೂಡ ಹಾಳುಮಾಡುತ್ತದೆ. 2003ರಲ್ಲಿ ಅಮೆರಿಕವು ಇರಾಕ್‌ ಮೇಲೆ ದಾಳಿ ಮಾಡಿ, ಸದ್ದಾಂ ಹುಸೇನ್ ಆಡಳಿತವನ್ನು ಕೆಡವಿದ್ದರಿಂದ, ಆ ದೇಶವು ದೀರ್ಘಕಾಲಿಕ ಅಸ್ಥಿರತೆಗೆ ತುತ್ತಾಯಿತು. ಇತ್ತೀಚಿನ, ಉಕ್ರೇನ್-ರಷ್ಯಾ ಯುದ್ಧವು ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವಿನ ಸಂಬಂಧವನ್ನು ಹಾಳುಮಾಡಿದರೆ, ಇಸ್ರೇಲ್-ಇರಾನ್ ಸಂಘರ್ಷವು ಅಮೆರಿಕ ಸೇರಿದಂತೆ ನಾನಾ ರಾಷ್ಟ್ರಗಳ ನಡುವಿನ ಒಡಕನ್ನು ಮತ್ತಷ್ಟು ಹೆಚ್ಚಿಸಿತು.

ಈ ಯುದ್ಧಗಳು ಜನರ ಮನಸ್ಸಿನಲ್ಲಿ ಕರುಣೆ, ಸಹಾನುಭೂತಿ ಹಾಗೂ ಸಾಮರಸ್ಯವನ್ನು ತೊಡೆದು ಹಾಕಿ, ದ್ವೇಷ, ಭಯ, ಹಾಗೂ ಕ್ರೌರ್ಯವನ್ನು ಹುಟ್ಟುಹಾಕುತ್ತವೆ. ಶಾಂತಿಯುತ ಸಹಬಾಳ್ವೆಯನ್ನು ಹಾಳುಮಾಡುತ್ತವೆ. ಜಗತ್ತಿನ ಶಾಂತಿಯು ನಾಶವಾಗುತ್ತದೆ.

ಯುದ್ಧವನ್ನು ತಡೆಯಲು, ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗಾಗಿ ವಿಶ್ವಸಂಸ್ಥೆ ರಚನೆಯಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ವಿವಿಧ ರಾಷ್ಟ್ರಗಳ ನಡುವೆ ಸಂಘರ್ಷಗಳು ನಡೆಯುತ್ತಲೇ ಇವೆ. ವಿಶ್ವಸಂಸ್ಥೆಯ ಮಧ್ಯಸ್ಥಿಕೆಯು ಕಡಿಮೆಯಾಗುತ್ತಿದೆ ಎಂಬ ಆರೋಪಗಳಿವೆ. ಬದಲಾಗಿ, ಎಲ್ಲೆಡೆ ಟ್ರಂಪ್ ಆವರಿಸಿಕೊಳ್ಳುತ್ತಿದ್ದಾರೆ. ಎಲ್ಲ ರೀತಿಯ ಮೈಲೇಜ್‌ಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ. ವಿಶ್ವಸಂಸ್ಥೆ, ಟ್ರಂಪ್ ಏನೇ ಇರಲಿ, ಯಾರೇ ಇರಲಿ, ಜಗತ್ತಿನ ಜನರು ಶಾಂತಿ ಬಯಸುತ್ತಿದ್ದಾರೆ. ಶಾಂತಿ-ಸಹಬಾಳ್ವೆಯೇ ಮುಖ್ಯ ಎನ್ನುತ್ತಿದ್ದಾರೆ. ಯುದ್ಧ ಬೇಡ ಎನ್ನುತ್ತಿದ್ದಾರೆ. ಇದನ್ನು ಆಳುವವರು ಅರಿತುಕೊಳ್ಳಬೇಕಷ್ಟೇ…

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X