“ಇಂದಿನ ದಿನಮಾನಗಳಲ್ಲಿ ಯುವಜನತೆ ದುಶ್ಚಟಗಳ ಹಿಂದೆ ಬಿದ್ದಿದೆ. ಸ್ಥಳೀಯವಾಗಿ ವಿದ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗಿದ್ದು, ಮಾನಸಿಕ ಕಾಯಿಲೆಯಾಗಿ ಬದಲಾಗುತ್ತಿದೆ. ಪ್ರತಿವರ್ಷ ಸುಮಾರು ಐವತ್ತು ಸಾವಿರದಷ್ಟು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಎಲ್ಲರೂ ವ್ಯಸನದ ವಿರುದ್ಧ ಹೋರಾಡುವ ದಿಟ್ಟ ನಿರ್ಧಾರ ಮಾಡಬೇಕಾಗಿದೆ” ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ಪಟ್ಟಣದ ವಿಶ್ವಮಾದಕ ವಿರೋಧಿ ದಿನದ ಅಂಗವಾಗಿ ರೋಶನಿ ಸಮಾಜ ಸೇವಾ ಸಂಸ್ಥೆ, ರೋಶನಿ ವ್ಯಸನಮುಕ್ತಿ ಕೇಂದ್ರ ಹಾಗೂ ಪೊಲೀಸ್ ಠಾಣೆ, ರೈಟ್ ಗೈಡೆನ್ಸ್ ಪಿಯು ಕಾಲೇಜು, ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾದಕವಸ್ತು ದಿನಾಚರಣೆಯ ಅಂಗವಾಗಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
“ಮದ್ಯಪಾನದಿಂದ ದೇಶದಲ್ಲಿ ವರ್ಷಕ್ಕೆ ಸುಮಾರು ಹದಿನೆಂಟು ಲಕ್ಷ ಜನರು ಸಾಯುತ್ತಿದ್ದಾರೆ. ಗುಟಕಾದಿಂದ ಸುಮಾರು ಹದಿನಾಲ್ಕು ಲಕ್ಷ ಜನರು ಸಾಯುತ್ತಿದ್ದಾರೆ. ಧೂಮಪಾನದಿಂದ ಮೂವತ್ತು ಲಕ್ಷ ಜನರು ಸಾಯುತ್ತಿದ್ದಾರೆ. ಇದರಿಂದ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ” ಎಂದರು.
ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ರೈಟ್ ಗೈಡೆನ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಆರ್ ರವಿಕುಮಾರ್ ಮಾತನಾಡಿ, “ದುಶ್ಚಟಗಳು ಇಂದಿನ ಸಮಾಜಕ್ಕೆ ಅಂಟಿದ ಜಾಡ್ಯವಾಗಿದೆ. ಸಿಗರೇಟಿನಲ್ಲಿ ಸುಮಾರು ಏಳುಸಾವಿರ ವಿಷಪದಾರ್ಥಗಳಿವೆ. ಗುಟಕಾದಲ್ಲಿ ಸುಮಾರು ನಾಲ್ಕು ಸಾವಿರದಷ್ಟು ವಿಷಪದಾರ್ಥಗಳಿವೆ. ಮದ್ಯಪಾನವು ಅನೇಕ ದೈಹಿಕ ಕಾಯಿಲೆಗಳೊಂದಿಗೆ ಮಾನಸಿಕ ಕಾಯಿಲೆಗಳನ್ನೂ ತರುತ್ತದೆ. ಇದರ ವಿರುದ್ಧ ಜಾಗೃತಿ ಮೂಡದಿದ್ದರೆ ಯುವಜನತೆ ಹಾಳಾಗುವುದು ನಿಶ್ಚಿತ. ದೇಶದ ಪ್ರಗತಿಗೂ ಇದು ಮಾರಕವಾಗುತ್ತಿದೆ” ಎಂದರು.

ಹಾನಗಲ್ಲ ಪೊಲೀಸ್ ಠಾಣೆಯ ಚನ್ನವೀರಸ್ವಾಮಿ ಎಂ ಹಿರೇಮಠ ಮಾತನಾಡಿ, “ಪ್ರತಿ ಹಳ್ಳಿ ಹಳ್ಳಿಯಲ್ಲೂ ವ್ಯಸನದಿಂದಾಗಿ ಯುವಜನತೆ ಹಾಳಾಗುತ್ತಿದೆ. ವ್ಯಸನದಿಂದಾಗಿ ಇಂದು ಅತ್ಯಾಚಾರಗಳು, ಕೊಲೆಗಳು, ದರೋಡೆಗಳಂತಹ ಅಪರಾಧಗಳು ಇಂದು ಹೆಚ್ಚುತ್ತಿವೆ. ಇದರ ವಿರುದ್ಧ ನಾವು ದಿಟ್ಟ ಕ್ರಗಳನ್ನು ಕೈಗೊಳ್ಳುತ್ತಿದ್ದೇವೆ. ಸಮಾಜದ ನಾಗರಿಕರು ಈ ವಿಷಯದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು” ಎಂದರು.
ಆಪ್ತಸಮಾಲೋಚಕ ಸುಮಂತ್ ನಿರ್ದೇಶಿಸಿದ ಬೀದಿ ನಾಟಕವನ್ನು ಮುಖ್ಯ ಸರ್ಕಲ್ ನಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರದಲ್ಲಿ ಸಾಹಿತಿ ಪ್ರಸನ್ನಕುಮಾರ್ ಅರಿವು ಮೂಡಿಸಿದರು. ಅಮಿತಾ ಮಸ್ಕರೇನಸ್ ನಿರೂಪಿಸಿದರು. ಸಿಸ್ಟರ್ ಶಾಂತಿ ಪ್ರತಿಜ್ಞಾವಿಧಿ ಭೋದಿಸಿದರು. ಸುಮಂತ್ ಕೆ ವಂದಿಸಿದರು. ಸಿಸ್ಟರ್ ಬೆನಿಟಾ, ಸಿಸ್ಟರ್ ನಿರ್ಮಲಾ, ಸಿಸ್ಟರ್ ಐರಿನ್, ಸಹಾಯಕ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇಣುಕಾ ಪವಾರ್, ರೈಟ್ ಗೈಡೆನ್ಸ್ ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ರೋಶನಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.