ಚಾಮರಾಜಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಷನವೇ ಕಾರಣ ಅನ್ನೋದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳು ಸತ್ತ ಹಸುವಿನ ಕಳೇಬರದಲ್ಲಿ ವಿಷವಿಕ್ಕಿ ತಾಯಿ ಹಾಗೂ 4 ಮರಿ ಹುಲಿಗಳನ್ನು ಕೊಂದಿರುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಖಚಿತಪಡಿಸಿದ್ದಾರೆ. ಈ ನಡುವೆ ತನಿಖೆ ಚುರುಕುಗೊಳಿಸಿದ್ದ ಅರಣ್ಯಾಧಿಕಾರಿಗಳು ಹುಲಿಗಳಿಗೆ ವಿಷ ಹಾಕಿದ್ದ ದುಷ್ಕರ್ಮಿಯೊಬ್ಬ ಸೇರಿ 6 ಜನರನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತನ್ನ ದನದ ಮೇಲೆ ಹುಲಿ ದಾಳಿಯಿಂದ ಕೋಪಗೊಂಡ ಮಾಲೀಕ ಕಳ್ಳಬ್ಬೆದೊಡ್ಡಿ ಗ್ರಾಮದ ಶಿವಣ್ಣ ಹಸುವಿನ ಕಳೇಬರಕ್ಕೆ ವಿಷ ಸಿಂಪಡಣೆ ಮಾಡಿದ್ದ. ಈ ಕೃತ್ಯದಲ್ಲಿ ಶಿವಣ್ಣನ ಮಗನೂ ಭಾಗಿಯಾಗಿದ್ದ ಎನ್ನಲಾಗಿದೆ. ವಿಷ ಸಿಂಪಡಿಸಿದ್ದ ಕಳೇಬರವನ್ನು ತಿಂದು ಐದು ಹುಲಿಗಳು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಆರೋಪಿ ಶಿವಣ್ಣನನ್ನ ವಶಕ್ಕೆ ಪಡೆಯುತ್ತಿದ್ದಂತೆ ಮಗ ಗ್ರಾಮದಿಂದ ಪರಾರಿಯಾಗಿದ್ದಾನೆ. ಶಿವಣ್ಣ ಎಂಬಾತನ ಜೊತೆಗೆ ಅದೇ ಗ್ರಾಮದ ಐವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ತಾಯಿ ಹುಲಿಗೆ 8 ವರ್ಷ ಆಗಿದ್ದರೆ ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತಪಟ್ಟಿದೆ. ಯಾವ ಪ್ರಮಾಣದ ವಿಷ ಹಾಕಲಾಗಿದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದುಬರಲಿದೆ
ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ: ಹುಲಿಗಳ ಅಂತ್ಯಕ್ರಿಯೆ ನಡೆಸಿದ ಅಧಿಕಾರಿಗಳು
ಮಲೆ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯದಲ್ಲಿ ಸಂಭವಿಸಿದ ಐದು ಹುಲಿಗಳ ಸಾವಿನ ಘಟನಾ ಸ್ಥಳಕ್ಕೆ ಶುಕ್ರವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
“ಮಲೆ ಮಹದೇಶ್ವರ ಬೆಟ್ಟದ ಹೂಗ್ಯಂ ವಲಯದಲ್ಲಿ ಸಂಭವಿಸಿದ ಐದು ಹುಲಿಗಳ ಸಾವಿನ ಘಟನೆ ಅತೀವ ನೋವು ತಂದಿದೆ. ಒಂದು ದಿನದಲ್ಲೇ 5 ಹುಲಿಗಳು ಸಾವಿಗೀಡಾಗಿರುವುದು ಹೃದಯ ವಿದ್ರಾವಕ ಘಟನೆ. ಈ ದುರ್ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ವಿಷಪ್ರಾಷನದಿಂದ ಸಾವನ್ನಪ್ಪಿದ್ದ ಲಕ್ಷಣಗಳು ತಜ್ಞರಿಂದ ವ್ಯಕ್ತವಾಗಿವೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (NTCA) ಅಧಿಕಾರಿಗಳು, ವನ್ಯಜೀವಿ ತಜ್ಞರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ” ಎಂದು ಖಂಡ್ರೆ ಮಾಹಿತಿ ನೀಡಿದರು.

“ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಆದೇಶ ನೀಡಲಾಗಿದೆ. ಮರಣೋತ್ತರ ಪರೀಕ್ಷೆ ನೆರವೇರಿದ್ದು, ಪ್ರೋಟೋಕಾಲ್ ಪ್ರಕಾರ ಹುಲಿಗಳ ಅಂತಿಮ ಸಂಸ್ಕಾರವೂ ಆಗಿದೆ. ವರದಿ ಬಂದ ಬಳಿಕ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು. ವನ್ಯಜೀವಿ ಸಂರಕ್ಷಣೆಯತ್ತ ನಮ್ಮ ನಿಷ್ಠೆ ಬದ್ಧವಾಗಿದೆ. ಎಲ್ಲರ ಸಹಕಾರದಿಂದ ಅರಣ್ಯ ಸಂರಕ್ಷಣೆಯನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಸರ್ಕಾರದ ಕರ್ತವ್ಯ” ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಹುಲಿಗಳ ಸಂಖ್ಯೆಗೆ ದೊಡ್ಡ ಹೊಡೆತ
ದೇಶದಲ್ಲೇ ಒಂದೇ ದಿನ ಐದು ಹುಲಿಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಅಲ್ಲದೇ ಈ ಘಟನೆ ಕರ್ನಾಟಕದ ಹುಲಿಗಳ ಸಂಖ್ಯೆಗೆ ದೊಡ್ಡ ಹೊಡೆತ ನೀಡಿದೆ.
ಸದ್ಯ ಕರ್ನಾಟಕ ಅತಿ ಹೆಚ್ಚು ಹುಲಿಗಳಿರುವ ರಾಜ್ಯಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇತ್ತೀಚಿನ ಹುಲಿ ಗಣತಿಯ ವರದಿ ಪ್ರಕಾರ, ಮಧ್ಯಪ್ರದೇಶದಲ್ಲಿ 785, ಕರ್ನಾಟಕದಲ್ಲಿ 563, ಉತ್ತರಾಖಂಡದಲ್ಲಿ 560 ಹುಲಿಗಳಿವೆ.
ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆ. 2006ರಲ್ಲಿ 290, 2010ರಲ್ಲಿ 300, 2014ರಲ್ಲಿ 406, 2018ರಲ್ಲಿ 524, 2022ರಲ್ಲಿ 563 ಹುಲಿಗಳು ಇರುವುದು ಗಣತಿಯಲ್ಲಿ ಪತ್ತೆಯಾಗಿದ್ದವು.
ಏನಿದು ಘಟನೆ?
ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಮೀಣ್ಯಂ ವಲಯದಲ್ಲಿ ಐದು ಹುಲಿಗಳು ಮೃತಪಟ್ಟಿರುವ ಘಟನೆ ಗುರುವಾರ ಬೆಳಕಿಗೆ ಬಂದಿತ್ತು. ಹುಲಿಗಳ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ದೌಡಾಯಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.

ವಿಷಪ್ರಾಷನದಿಂದಲೇ ಸಾವು ಎಂದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾದ ನಂತರ ಅಗ್ನಿಸ್ಪರ್ಶದ ಮೂಲಕ ಹುಲಿ, ಹಸು ಅಂತ್ಯಕ್ರಿಯೆ ಮಾಡಲಾಗಿದೆ. ಮೃತ ಹುಲಿಗಳ ದೇಹದ ಪ್ರಮುಖ ಅಂಗಾಂಗ ಸಂಗ್ರಹಿಸಿ ಲ್ಯಾಬ್‌ಗೆ ಕಳಿಸಲಾಗಿದೆ. ಮೂರು ಗುಂಪುಗಳಲ್ಲಿ ಮಾದರಿ ಸಂಗ್ರಹಿಸಿದ್ದು, ಪ್ರತ್ಯೇಕವಾಗಿ ಮೂರು ಲ್ಯಾಬ್‌ಗಳಿಗೆ ಸ್ಯಾಂಪಲ್‌ಗಳನ್ನು ರವಾನಿಸಲಾಗಿದೆ.
ಇದನ್ನು ಓದಿದ್ದೀರಾ? ದ. ಕನ್ನಡ ಜಿಲ್ಲೆಯ ಕೊರಗ ಸಮುದಾಯಕ್ಕೆ ಭೂಮಿ ಮಂಜೂರು ವಿಚಾರ: ಕಂದಾಯ ಸಚಿವರೊಂದಿಗೆ ಸಮಾಲೋಚನಾ ಸಭೆ
ಇನ್ನೂ ಗಾಜನೂರು, ಕೊಪ್ಪ ಹಾಗೂ ಮೀಣ್ಯಂ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.