ಕೋಲಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಸಮಾರಂಭದಲ್ಲಿ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಪಿ.ವೆಂಕಟಾಚಲಪತಿ ಇವರನ್ನು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಆಮ್ ಆದ್ಮಿ ಪಕ್ಷದ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ವೆಂಕಟಾಚಲಪತಿ, “ಜಿಲ್ಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆಗುತ್ತಿದ್ದು, ಆಮ್ ಆದ್ಮಿ ಪಕ್ಷವು ಅವುಗಳ ವಿರುದ್ಧ ಸತತ ಹೋರಾಟವನ್ನು ನಿರಂತರವಾಗಿ ರೂಪಿಸಲಿದೆ” ಎಂದು ತಿಳಿಸಿದರು.
ಜೊತೆಗೆ ಜಿಲ್ಲೆಯಲ್ಲಿ ಜನಪರ ಮತ್ತು ಪಾರದರ್ಶಕ ಆಡಳಿತ ಹಾಗೂ ಪರ್ಯಾಯ ರಾಜಕಾರಣದ ಬಗ್ಗೆ ಜನತೆಗೆ ಅರಿವು ಮೂಡಿಸುವ ಕಾರ್ಯದಲ್ಲಿ ಸದಾ ನಿರತವಾಗಿರುತ್ತದೆ. ದೀನ ದಲಿತರಿಗೆ, ಕಟ್ಟ ಕಡೆಯ ವ್ಯಕ್ತಿಗೆ ಸಂವಿಧಾನದ ಆಶಯಗಳನ್ನು ತಲುಪುವಂತೆ ಕಾಯಕವನ್ನು ಮಾಡುತ್ತೇನೆ. ಮುಂಬರುವ ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನವನ್ನು ಮಾಡುತ್ತೇನೆ ಹಾಗೂ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುವ ಸಂಪೂರ್ಣ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಬ್ಯಾಂಕಿಂಗ್ ಹಾಗೂ ಜೀವ ವಿಮೆ ಕ್ಷೇತ್ರದಲ್ಲಿ ಸಾಕಷ್ಟು ಪರಿಣತಿಯನ್ನು ಹೊಂದಿರುವ ನಾನು, ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸರ್ಕಾರಿ ಆಸ್ತಿಗಳನ್ನು ಉಳಿಸುವ, ಭ್ರಷ್ಟಾಚಾರದ ವಿರುದ್ಧ ಅನೇಕ ಹೋರಾಟಗಳನ್ನು ಹಾಗೂ ಐಎಎಸ್ ಮತ್ತು ಕೆಎಎಸ್ ಪರೀಕ್ಷಾರ್ಥಿಗಳಿಗೆ ನೆರವನ್ನು ನೀಡುತ್ತಾ ಬಂದಿದ್ದೇನೆ. ವಿವಿಧ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ನಿಸ್ವಾರ್ಥದಿಂದ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, 65 ವರ್ಷಗಳ ನಂತರ ಕೂಡ, ಭಾರತೀಯರು ಬೇರೆ ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಶಿಕ್ಷಣ ಹಾಗೂ ಕುಟುಂಬಕ್ಕೆ ಆರೋಗ್ಯ ಸೇವೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಅರ್ಥ ಮಾಡಿಕೊಂಡಿಲ್ಲ. ಎಎಪಿಯು ಅವೆಲ್ಲವನ್ನೂ ಬದಲಾಯಿಸಿದೆ ಹಾಗೂ ಬದಲಾಯಿಸಲು ಮುನ್ನಡೆಯುತ್ತಿದೆ ಎಂದರು.
ಇಂದು ಭಾರತದ ಪ್ರತಿ ಚುನಾವಣೆಯಲ್ಲೂ ಶಿಕ್ಷಣ ಹಾಗೂ ಆರೋಗ್ಯವು ಪ್ರಮುಖ ವಿಷಯಗಳಾಗಿಸಿ ಕೊಂಡಿರುವ ಆಮ್ ಆದ್ಮಿ ಪಾರ್ಟಿಯೊಂದೇ. ಜವಾಬ್ದಾರಿಯಿಂದ ನಾವು ಜನರಿಗೆ ಏನು ಬೇಕು ಎಂದು ಕೇಳಿದ್ದರಿಂದಾಗಿ ನಮಗೆ ಇವುಗಳ ಮಹತ್ವ ಅರ್ಥವಾಯಿತು. ಸಮಸ್ಯೆಗಳಿಗೆ ಪರಿಹಾರಗಳನ್ನು ಹೇಗೆ ಕಾರ್ಯರೂಪಕ್ಕೆ ತರಬಹುದು ಎಂಬ ಬಗ್ಗೆ ಜನರ ಉಪಾಯಗಳನ್ನು ಕೂಡ ನಾವು ಪರಿಗಣಿಸಿದೆವು. ಈ ರೀತಿ ಜನರ ಜೊತೆ ಕೆಲಸ ಮಾಡುವುದು ಆಡಳಿತ ನಡೆಸಲು ವಿಶೇಷ ಶಕ್ತಿ ಜನರು ಆಮ್ ಆದ್ಮಿ ಪಕ್ಷಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ದಕ್ಷಿಣ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಮುದಿಗೌಡರ್ ಮಾತನಾಡಿ, ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ ಮೂರು ಬಾರಿ ಹಾಗೂ ಪಂಜಾಬ್‌ನಲ್ಲಿ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ. ಗೋವಾ ಚುನಾವಣೆಯಲ್ಲಿ ಶೇ. 6ಕ್ಕಿಂತಲೂ ಹೆಚ್ಚು ಮತ ಪಡೆದಿದ್ದೇವೆ. ಗುಜರಾತ್‌ನಲ್ಲಿ ಐವರು ಶಾಸಕರು ಆಯ್ಕೆಯಾಗಿದ್ದಾರೆ. ಈ ಮೂಲಕ ಆಮ್ ಆದ್ಮಿ ಪಾರ್ಟಿಯು ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಅರ್ಹತೆ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಜಿಲ್ಲೆ ಉಸ್ತುವಾರಿ ಹಾಗೂ ರಾಜ್ಯ ಕಾರ್ಯದರ್ಶಿ ಸಂತೆಹಳ್ಳಿ ಸುರೇಶ್, ಬಾಲಕೃಷ್ಣ, ಕಾರ್ಯದರ್ಶಿ ರವಿಕುಮಾರ್, ರಾಜ್ಯ ಜಂಟಿ ಕಾರ್ಯದರ್ಶಿ ಮಾಲೂರು ನಾಗರಾಜ, ಮುಖಂಡರಾದ ವಿಜಯಕುಮಾರ್, ರೇವಣ್ಣ, ರಿಜ್ವಾನ್, ರಾಮೇಗೌಡ, ಡಾ.ವೆಂಕಟಾಚಲ, ಖಾದಿರ್, ಮುಬಾರಕ್, ರಮೇಶ್ ಮತ್ತು ಕಾರ್ಯಕರ್ತರು ಹಾಜರಿದ್ದರು.