ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಲು ಅನುಮತಿ ನೀಡಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ವಿಪಕ್ಷಗಳ ಸದಸ್ಯರು ಬುಧವಾರ ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದರು.
ಸಂಸತ್ತಿನ ಮೇಲ್ಮನೆ ಮಧ್ಯಾಹ್ನದ ಊಟದ ನಂತರದ ಅವಧಿಗೆ ಮತ್ತೆ ಸೇರಿದಾಗ, ಉಪಸಭಾಪತಿ ಹರಿವಂಶ್ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಕರೆದು ಸಂವಿಧಾನ (ಪರಿಶಿಷ್ಟ ಪಂಗಡ) ಆದೇಶ (ಮೂರನೇ ತಿದ್ದುಪಡಿ) ಮಸೂದೆ, 2022 ಅನ್ನು ಮಂಡಿಸಲು ಒತ್ತಾಯಿಸಿದರು.
ನಂತರ ಅವರು ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು, ಆಗ ಖರ್ಗೆ ಅವರು ತಮಾಷೆಯಾಗಿ ‘ಮೈಕ್ ಆಫ್ ಮಾಡಬೇಡಿ’ ಎಂದು ಉಪಸಭಾಪತಿಗೆ ಹೇಳಿದರು. ಹರಿವಂಶ್ ಅವರು, ‘ನೀವು ಮಾತನಾಡಿದ ನಂತರ ನನ್ನ ಮಾತನ್ನೂ ಕೇಳಿ’ ಎಂದು ಖರ್ಗೆ ಅವರಿಗೆ ಹೇಳಿದರು.
“ಮಣಿಪುರ ವಿಷಯದ ಬಗ್ಗೆ ಚರ್ಚೆ ಮತ್ತು ಆ ಕುರಿತ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪ್ರತಿಪಕ್ಷಗಳು ಬಯಸಿವೆ ಮತ್ತು ನಾವೆಲ್ಲ ಅದಕ್ಕಾಗಿ ಕಾಯುತ್ತಿದ್ದೇವೆ. ಐದು ದಿನಗಳ ನಂತರವೂ, ಪ್ರಧಾನಿ ಸದನಕ್ಕೆ ಬಂದಿಲ್ಲ ಮತ್ತು ಅವರು ತಮ್ಮ ಕಚೇರಿಯಲ್ಲಿ ಕುಳಿತು ಕಲಾಪವನ್ನು ನೋಡುತ್ತಿದ್ದಾರೆ” ಎಂದು ಖರ್ಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಮಂತ್ರಾಲಯದಲ್ಲಿ ರಾಮನ ವಿಗ್ರಹ; ಆಂಧ್ರದಲ್ಲಿ ಬಿಜೆಪಿಯ ಪ್ರತಿಮಾ ರಾಜಕಾರಣ
“ಇದರ ಪರಿಣಾಮವಾಗಿ, ಇಡೀ ದೇಶವೇ ಕಾಯುತ್ತಿದ್ದರೂ, ಪ್ರತಿಪಕ್ಷಗಳಿಗೆ ಮಣಿಪುರದ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರವು ವಿರೋಧ ಪಕ್ಷಗಳಿಗೆ ವಿಷಯ ಮಂಡನೆಗೆ ಅವಕಾಶವನ್ನೂ ನೀಡುತ್ತಿಲ್ಲ ಮತ್ತು ತಮ್ಮ ಬೇಡಿಕೆಗೆಳಿಗೆ ಕಿವಿಗೊಡುತ್ತಿಲ್ಲ. ಸರ್ಕಾರದ ನಿಲುವನ್ನು ವಿರೋಧಿಸಿ, ನಾವು ಸಭಾತ್ಯಾಗ ಮಾಡುತ್ತಿದ್ದೇವೆ” ಎಂದು ಖರ್ಗೆ ಹೇಳಿದರು.