ಧಾರವಾಡದಿಂದ ಬೆಂಗಳೂರಿಗೆ ಸಂಚರಿಸುವ ‘ವಂದೇ ಭಾರತ್’ ಎಕ್ಸ್ ಪ್ರೆಸ್ ಶುಕ್ರವಾರ ಮಧ್ಯಾಹ್ನ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ರೈಲಿನ ಚಕ್ರದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಎಂಜಿನ್ ಗೆ ಮಾಹಿತಿ ರವಾನೆಯಾಗಿದ್ದು, ತಕ್ಷಣ ಚಾಲಕ, ರೈಲ್ವೆ ಸಿಬ್ಬಂದಿ, ಕಾರ್ಯಪ್ರವೃತ್ತರಾಗಿ ರೈಲನ್ನು ನಿಲ್ಲಿಸಿ ಸಂಭಾವ್ಯ ಅನಾಹುತ, ಅಪಾಯ ತಪ್ಪಿಸಿದ್ದಾರೆ. ಪರಿಶೀಲನೆ ಬಳಿಕ ವಂದೇ ಭಾರತ್ ರೈಲು ಸಂಚಾರವನ್ನು ರದ್ದುಪಡಿಸಿ ಪ್ರಯಾಣಿಕರಿಗೆ ಬೆಂಗಳೂರಿಗೆ ಹೋಗಲು ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿತು.
‘ವಂದೇ ಭಾರತ್’ ರೈಲಿನ ‘ಸಿ-4’ ಕೋಚ್ನ ಗಾಲಿಯೊಂದರ ‘ಹಾಟ್ ಎಕ್ಸೆಲ್’ನಿಂದ ಬೆಂಕಿ ಕಿಡಿ ಹೊತ್ತಿಕೊಂಡು ಹೊಗೆ ಆವರಿಸಿದೆ . ಈ ಬಗ್ಗೆ ರೈಲಿನಲ್ಲಿ ಸ್ವಯಂ ಚಾಲಿತ ಅವಘಡ ಸಂದೇಶ ವ್ಯವಸ್ಥೆಯಿಂದ ಎಂಜಿನ್ಗೆ ಮಾಹಿತಿ ರವಾನೆಯಾಗಿದೆ. ಮಧ್ಯಾಹ್ನ 3.30ಕ್ಕೆ ಹರಿಹರ ಮತ್ತು ದಾವಣಗೆರೆ ನಡುವೆ ರೈಲು ಸಂಚರಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಈ ವೇಳೆ ವಂದೇ ಭಾರತ್ ರೈಲು ಸುಮಾರು 100 ಕಿಮೀ ವೇಗದಲ್ಲಿ ಸಾಗುತ್ತಿದ್ದು, ರೈಲು ನಿಲ್ಲಿಸಿದ ಬಳಿಕ ಬೆಂಕಿ ನಂದಿಸಲಾಗಿದೆ’.

ಸಿ-4 ಬೋಗಿಯಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ದಾವಣಗೆರೆ ನಿಲ್ದಾಣದವರೆಗೆ ರೈಲನ್ನು ತರಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ರೈಲನ್ನು ಪರಿಶೀಲಿಸಿದ ತಾಂತ್ರಿಕ ತಂಡ ಸಂಚಾರವನ್ನು ರದ್ದುಪಡಿಸಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಜಿಲ್ಲಾ ಯುವ ಕಾಂಗ್ರೆಸ್ ಪದಗ್ರಹಣ ಸಮಾರಂಭದಲ್ಲಿ ನೂಕಾಟ ವಾಗ್ವಾದ; ಬಣ ರಾಜಕೀಯ ಜೋರು
ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ‘ಜನಶತಾಬಿ’, ‘ಜೋದ್ಪುರ ಎಕ್ಸ್ಪ್ರೆಸ್’ ರೈಲುಗಳಲ್ಲಿ ವಂದೇ ಭಾರತ್ ರೈಲಿನಲ್ಲಿದ್ದ 502 ಜನ ಪ್ರಯಾಣಿಕರನ್ನು ಕಳುಹಿಸಿಕೊಡಲಾಗಿದೆ. ನಂತರ ಹರಿಹರದ ದುರಸ್ತಿ ಮತ್ತು ನಿರ್ವಹಣೆ ಕೇಂದ್ರಕ್ಕೆ ರೈಲನ್ನು ಕಳುಹಿಸಲಾಗಿದೆ. ಇದೇ ವಂದೇ ಭಾರತ್ ರೈಲಿನ ಬೋಗಿಗೆ ಆರಂಭದಲ್ಲಿ ಒಂದು ಬಾರಿ ಕಲ್ಲು ತೂರಲಾಗಿತ್ತು. ತನಿಖೆ ಬಳಿಕ ರೈಲ್ವೆ ಪೊಲೀಸರು ಪುಂಡರನ್ನು ಬಂಧಿಸಿದ್ದರು.