ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ವಂಚನೆಗೆ ಒಳಗಾಗಿರುವ ಘಟನೆ ನಡೆದಿದೆ. ಹಣ ಜಮೆ ಮಾಡಿಕೊಡುವ ನೆಪದಲ್ಲಿ ಪುಸಲಾಯಿಸಿದ ಆರೋಪಿ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದನು.
ಹಿಡಕಲ್ ಗ್ರಾಮದ ರುಕ್ಷ್ಮವ್ವ ಕಾಂಬಳೆ ಎಂಬುವವರ ಬ್ಯಾಂಕ್ ಖಾತೆಗೆ ₹40,000 ಹಣ ಜಮೆಯಾಗಿದೆ ಎಂದು ತಿಳಿಸಿ, ಅದನ್ನು ಅಳಗವಾಡಿ ಬ್ಯಾಂಕ್‌ನಲ್ಲಿ ವಿತ್‌ಡ್ರಾ ಮಾಡಿಕೊಡುತ್ತೇನೆ ಎಂದು ಹೇಳಿ ಮಹಿಳೆಯನ್ನು ಹಿಡಕಲ್ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದ. ನಂತರ “ಕೊರಳಲ್ಲಿ ಚಿನ್ನದ ಸರ ಇದ್ದರೆ ಬ್ಯಾಂಕ್ ಹಣ ಬಿಡುಗಡೆ ಮಾಡುವುದಿಲ್ಲ” ಎಂದು ನಂಬಿಸಿ, ಬೊರಮಾಳ ಸರ ಎಗರಿಸಿ ಪರಾರಿಯಾಗಿದ್ದ.
ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಠಾಣೆಯ ಸಿಪಿಐ ರತನ್ ಕುಮಾರ್ ಜೀರಗ್ಯಾಳ, ಪಿಎಸ್‌ಐ ಮಾಳಪ್ಪ ಪೂಜಾರಿ, ಅಪರಾಧ ವಿಭಾಗದ ಪಿಎಸ್‌ಐ ಶಿವಾನಂದ ಕಾರಜೋಳ ಹಾಗೂ ಸಿಬ್ಬಂದಿ ತಂಡವು ಕೋಲ್ಹಾಪುರ ಮೂಲದ ದಸ್ತಗೀರ ಶೇಖ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಪೊಲೀಸರ ತನಿಖೆ ವೇಳೆ, ದಸ್ತಗೀರ ಶೇಖ್ ಈ ಹಿಂದೆ ಎಂಟು ಕಡೆಗಳಲ್ಲಿ ವಂಚನೆ ಮಾಡಿದಿರುವುದು ಬೆಳಕಿಗೆ ಬಂದಿದೆ. ಈವರೆಗೂ ಹಲವಾರು ಪ್ರಕರಣಗಳಲ್ಲಿ ಆರೋಪಿ ಪಾಲ್ಗೊಂಡಿದ್ದು, ಮೀರಜ್ ಮಾರ್ಗದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಚಿನ್ನದ ತಾಳಿ ಕಳುವಾದ ಪ್ರಕರಣವೂ ಆರೋಪಿಗೆ ಸಂಬಂಧಿಸಿದ್ದಾಗಿದೆ.
ಈ ಸುದ್ದಿ ಓದಿದ್ದಿರಾ?.ಬೆಳಗಾವಿ | ಸವದತ್ತಿ ಯಲ್ಲಮ್ಮನ ಗುಡ್ಡ ದೇವಸ್ಥಾನ ಹುಂಡಿಯಲ್ಲಿ ₹1.4 ಕೋಟಿ ಕಾಣಿಕೆ ಸಂಗ್ರಹ
ಈ ಪ್ರಕರಣದಲ್ಲಿ ಚಿಕ್ಕೋಡಿ ಮೂಲದ ಕುಶಪ್ಪ ತಳವಾರ ಎಂಬ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.