ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮತ್ತೊಂದು ಸರ್ಕಾರಿ ಶಾಲೆ ಅವ್ಯವಸ್ಥೆಯಿಂದ ಕೂಡಿದ್ದು, ನಾಲೂರು ಕೋಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುರುಳಿ ಗ್ರಾಮದ ಬಳಿ ಇರುವ ಗಾರ್ಡ್ ಗದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥಹಳ್ಳಿಯಿಂದ ಸುಮಾರ್ 25 ಕಿಮೀ ದೂರದಲ್ಲಿದೆ.
ತೆಮ್ಮೆಮನೆಯ ಶಾಲೆಯೂ ಸುಮಾರು 70 ವರ್ಷ ಹಳೆಯದು. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿರುವ ಈ ಶಾಲೆ ಕಳೆದ ವರ್ಷದಿಂದ ಶಾಲೆಯ ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದು, ಕಬ್ಬಿಣ ಸಲಾಕೆಗಳು ಮಾತ್ರ ಕಾಣತೊಡಗಿವೆ. ಇದರಿಂದ ವಿದ್ಯಾರ್ಥಿಗಳು ಅಪಾಯದ ಪರಿಸ್ಥಿತಿಯಲ್ಲಿ ಶಾಲೆಗೆ ಬರುವಂತಾಗಿದೆ. ಶಾಲೆಯಲ್ಲಿ ಪ್ರಸ್ತುತ ಒಂದರಿಂದ ಏಳನೇ ತರಗತಿವರೆಗೂ 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ ಸರಿಪಡಿಸಿಕೊಡಿ ಎಂದು ಶಾಲೆಯ ಎಸ್‌ಡಿಎಂಸಿ ಸದಸ್ಯ ಗಿರೀಶ್ ಅವರು ನಾಲ್ಕೈದು ದಿನಗಳ ಹಿಂದೆಯೇ ಕೇಳಿಕೊಂಡಿದ್ದರು.
ಎಸ್‌ಡಿಎಂಸಿ ಸದಸ್ಯ ಗಿರೀಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕಳೆದ ವರ್ಷವೂ ಕೂಡ ಶಾಲೆ ಕಟ್ಟಡ ಅವ್ಯವಸ್ಥೆ ಬಗ್ಗೆ ಬಿಇಒ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಏನೂ ಪ್ರಯೋಜನವಾಗಲಿಲ್ಲ. ಮತ್ತೆ ಈಗ ಅದೇ ರೀತಿ ಆಗುತ್ತಿದೆ. ಹಾಗಾಗಿ ಈ ಬಾರಿಯಾದರೂ ಸರಿಪಡಿಸಿಕೊಡಬೇಕು” ಎಂದು ಒತ್ತಾಯಿಸಿದರು.

ತೀರ್ಥಹಳ್ಳಿ ಬಿಇಒ ಮಾತನಾಡಿ, “ಶಾಲೆಯ ಒಳಭಾಗದ ಆರ್‌ಸಿಸಿಯ ಸಿಮೆಂಟ್ ಕಳಚಿ ಬೀಳುತ್ತಿದೆ. ಹಾಗಾಗಿ ಕಳೆದ ಬಾರಿ ಶಾಲೆಗೆ ಆಗುತ್ತಿರುವ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದೆವು. ಆದರೆ ಸರ್ಕಾರದಿಂದ ಈ ಅನುದಾನ ಬರಲಿಲ್ಲ. ಇದೀಗ ಮಳೆ ಆರಂಭವಾಗಿದೆ. ಸೋಮುವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಸದ್ಯಕ್ಕೆ ಪರ್ಯಾಯ ವ್ಯವಸ್ಥೆ ಎಂದರೆ ಶೀಟ್ ಹಾಕಿಸಬೇಕು. ಇಲ್ಲದಿದ್ದರೆ ಮೇಲ್ಛಾವಣಿಯಿಂದ ಬೀಳುತ್ತಿರುವ ಸಿಮೆಂಟ್ ನಿಯಂತ್ರಿಸುವುದು ಕಷ್ಟವಾಗುತ್ತದೆ” ಎಂದು ಹೇಳಿದರು.
“ಶಾಲೆಗೆ ಆರ್‌ಸಿಸಿ ಹಾಕಿಸಿದ ಮೇಲೆ ಅದ ಮೇಲೆ ಆಗಾಗ ಸ್ವಚ್ಛತೆ ಮಾಡಬೇಕು. ಇಲ್ಲವಾದರೆ ನೀರು ಸಂಗ್ರಹವಾಗುವುದರಿಂದ 10 ವರ್ಷದೊಳಗೆ ಆರ್‌ಸಿಸಿ ಸೀಲಿಂಗ್‌ನಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ” ಎಂದರು.

ಒಟ್ಟಾರೆ ಬಡ, ಮಧ್ಯಮ ಕೃಷಿ ವರ್ಗದ ಕುಟುಂಬದವರು ಸರ್ಕಾರಿ ಶಾಲೆ ನಂಬಿಕೊಂಡು, ಈ ರೀತಿ ಅವ್ಯವಸ್ಥೆ ಇರುವ ಶಾಲೆಗೆ ಕಳುಹಿಸುವುದಾದರೂ ಹೇಗೆ? ಜತೆಗೆ ಊರಿನಿಂದ ಒಳಗೆ ಒಂದು Interior ಅಲ್ಲಿ ಇರುವ ಈ ಶಾಲೆಗೆ ಮರು ಜೀವ ನೀಡುವ ಮೂಲಕ ಸರ್ಕಾರಿ ಶಾಲೆ ಉಳಿಸುಕೊಳ್ಳುವ ಪ್ರಯತ್ನ ಮಾಡುವ ಇಚ್ಛಾಶಕ್ತಿ ತೀರ್ಥಹಳ್ಳಿ ಅಧಿಕಾರಿಗಳಲ್ಲಿ ಇದೆಯೋ ಅಥವಾ ತೀರ್ಥಹಳ್ಳಿಯಲ್ಲಿ ಈಗಾಗಲೇ ಹಲವಾರು ಶಾಲೆಗಳು ಮುಚಲ್ಪಟ್ಟಿವೆ ಎಂಬುದರ ಸಾಲಿಗೆ ಈ ಶಾಲೆಯೂ ಸೇರುತ್ತದೆಯೇ? ಎಂಬುದನ್ನು ಸಂಬಂಧಪಟ್ಟವರು ತಿಳಿಸಬೇಕು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ತವರು ಜಿಲ್ಲೆಯ ಈ ಶಾಲೆ ಕುರಿತಾಗಿ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.