ಗಡಿ ಭಾಗದ ಮಕ್ಕಳಲ್ಲಿ ಕನ್ನಡ ಭಾಷೆಯ ಬೀಜ ಬಿತ್ತುವುದು ಇಂದು ಅನಿವಾರ್ಯವಾಗಿದೆ. ಭಾಷೆ ಉಳಿದರೆ ಮಾತ್ರ ನುಡಿ, ಸಂಸ್ಕೃತಿ ಪರಂಪರೆಗೆ ಉಳಿಗಾಲವಿದೆ ಎಂದು ಶಿಕ್ಷಕ, ಸಾಹಿತಿ ಜಗನ್ನಾಥ ಮೂಲಗೆ ಹೇಳಿದರು.
ಬೀದರ್ ಜಿಲ್ಲೆಯ ಔರಾದ ತಾಲೂಕಿನ ಗಡಿಯ ಮಾನೂರ(ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ ‘ಸಾಹಿತ್ಯ ಸೊಬಗು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕನ್ನಡ ಎನ್ನುವುದು ಭಾವೈಕ್ಯತೆಯ ಸಂಬಂಧ ಬೆಸೆದು, ಬದುಕನ್ನು ಕಟ್ಟಿ ಕೊಡುವ ಭಾಷೆಯಾಗಿದೆ. ಇಂಥ ಬಹುತ್ವ ಭಾಷೆಯನ್ನು ಉಳಿಸಿ ಬೆಳೆಸುವುದು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶುರುವಾಗಬೇಕು” ಎಂದು ತಿಳಿಸಿದರು.
ಔರಾದ ತಾಲೂಕು ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ ಮಾತನಾಡಿ, “ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಗಡಿ ಭಾಗದ ಮಕ್ಕಳಲ್ಲಿ ಕನ್ನಡ ಪ್ರೇಮ ಹುಟ್ಟಿಸುವ ಕಾರ್ಯಕ್ರಮವೇ ಸಾಹಿತ್ಯ ಸೊಬಗು. ಮೂರು ರಾಜ್ಯಗಳ ಗಡಿ ಭಾಗದಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಉಳಿಸುವ ನಿಟ್ಟಿನಲ್ಲಿ ಕಸಾಪ ಶ್ರಮಿಸುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ದೇವಿದಾಸ ಮಡಿವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಡಿ ನೈಮೋದಿನ, ಝರೆಪ್ಪ ಬಿರಾದರ, ಜ್ಞಾನೇಶ್ವರ ವಾಡಿಕಾರ, ಮಧುಕರ ಸುವರ್ಣಕಾರ, ಉದಯಕುಮಾರ ಬಡಚ್ಚಿ, ಸಂಜೀವಕುಮಾರ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.