ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ʼರಂಗಿತರಂಗʼ ಚಿತ್ರ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಎಚ್ ಕೆ ಪ್ರಕಾಶ್ ನಿರ್ಮಾಣದ, ಅನೂಪ್ ಭಂಡಾರಿ ನಿರ್ದೇಶನದ ಬ್ಲಾಕ್‌ಬಸ್ಟರ್ ‘ರಂಗಿತರಂಗ’ 2015ರ ಜುಲೈ 3 ರಂದು ತೆರೆಕಂಡು, ಇಂಡಸ್ಟ್ರಿ ಹಿಟ್ ಲಿಸ್ಟಿಗೆ ಸೇರಿತ್ತು. ಇದೀಗ 10 ವರ್ಷಗಳ ಬಳಿಕ ಚಿತ್ರವನ್ನು ಮತ್ತೆ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಚಿತ್ರದ ಅನುಭವದ ಕುರಿತು ನಿರ್ಮಾಪಕ ಎಚ್ ಕೆ ಪ್ರಕಾಶ್ ಹೀಗೆನ್ನುತ್ತಾರೆ… “ನಾನು, ನಿರೂಪ್ ನಟಿಸಿದ್ದ ಒಂದು ಟೆಲಿಫಿಲಂ ನೋಡಿ ಮೆಚ್ಚಿಕೊಂಡಿದ್ದೆ. ಅವರೊಂದಿಗೆ ಸಿನಿಮಾ ಮಾಡಬೇಕೆಂದು ನಿರೂಪ್ ಅವರ ತಂದೆ ಸುಧಾಕರ್ ಭಂಡಾರಿ ಅವರನ್ನು ಸಂಪರ್ಕಿಸಿದಾಗ, ಅವರು ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದ ಪ್ರೀ-ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಂಡಿದ್ದರು. ಆಗ ಅನೂಪ್ ಅವರ ಬಳಿ ಕಥೆ ಕೇಳಿದೆ. ಹಾಡುಗಳನ್ನು ಕೇಳಿದ ಕೂಡಲೇ ಈ ಸಿನಿಮಾ ನಾನೇ ಮಾಡಬೇಕು ಎಂದು ತೀರ್ಮಾನಿಸಿದೆ. ಆ ಚಿತ್ರವೇ ‘ರಂಗಿತರಂಗ’. ಯಶಸ್ಸಿನ ಉತ್ತುಂಗಕ್ಕೇರಿ ಈಗ 10ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಈ ಚಿತ್ರದಿಂದಾಗಿ, ಹತ್ತು ವರ್ಷಗಳ ನಂತರವೂ ನನ್ನನ್ನು ‘ರಂಗಿತರಂಗ’ ಪ್ರಕಾಶ್ ಎಂದೇ ಗುರುತಿಸುತ್ತಾರೆ. ನಿಮ್ಮೆಲ್ಲರ ಪ್ರೋತ್ಸಾಹದೊಂದಿಗೆ, 2025ರ ಜುಲೈ 4 ರಂದು ‘ರಂಗಿತರಂಗ’ ಚಿತ್ರವನ್ನು ಮರು-ಬಿಡುಗಡೆ ಮಾಡುತ್ತಿದ್ದೇವೆ” ಎಂದರು.
ನಿರ್ದೇಶಕ ಅನೂಪ್ ಭಂಡಾರಿ: “ಅಮೆರಿಕಾದಲ್ಲಿ ಕನ್ನಡಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಸಿತು!”
“ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ನಾನು ಹಾಲಿವುಡ್ ಸ್ಟಾರ್ ರಸೆಲ್ ಹಾರ್ವರ್ಡ್ ಅವರೊಂದಿಗೆ ಅಂತಾರಾಷ್ಟ್ರೀಯ ಕಿರುಚಿತ್ರಗಳನ್ನು ಮಾಡಿದ್ದೆ. ‘ರಂಗಿತರಂಗ’ದ ಪ್ರೀ-ಪ್ರೊಡಕ್ಷನ್ ಕಾರ್ಯದಲ್ಲಿರುವಾಗ, ಈ ಚಿತ್ರ ನಾನೇ ಮಾಡಬೇಕೆಂದು ಎಚ್.ಕೆ. ಪ್ರಕಾಶ್ ಅವರ ಆಸೆ ನೋಡಿ ಅವರ ಉತ್ಸಾಹಕ್ಕೆ ಕೈಜೋಡಿಸಿದೆ. ಸಾಯಿಕುಮಾರ್ ಅವರನ್ನು ಹೊರತುಪಡಿಸಿ, ಬಹುತೇಕ ಎಲ್ಲ ಕಲಾವಿದರು ಹೊಸಬರಾಗಿದ್ದರು. ನಿರೂಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಅರವಿಂದ್ – ಎಲ್ಲರ ಸಂಘಟಿತ ಶ್ರಮವೇ ಚಿತ್ರ ಉತ್ತಮವಾಗಿ ಮೂಡಿಬರಲು ಕಾರಣ. ಛಾಯಾಗ್ರಾಹಕ ವಿಲಿಯಂ ಡೇವಿಡ್ ನನ್ನ ಕಲ್ಪನೆಗೆ ಸೂಕ್ತ ದೃಶ್ಯಗಳನ್ನು ಸಂಯೋಜಿಸಿ ಯಶಸ್ಸಿಗೆ ಕಾರಣರಾದರು.
2015ರ ಜುಲೈ 3ರಂದು ನಮ್ಮ ಚಿತ್ರ ಬಿಡುಗಡೆಯಾದಾಗ, ಕಪಾಲಿ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬಂದ ಕೆಲವರು ನಮ್ಮ ನಿರ್ಮಾಪಕರಿಗೆ ‘ನಿಮಗೆ ಪೋಸ್ಟರ್ ಖರ್ಚು ಕೂಡ ಬರುವುದಿಲ್ಲ’ ಎಂದು ಹೆದರಿಸಿದ್ದರು. ಆದರೆ, ನಮ್ಮ ನಿರ್ಮಾಪಕರಿಗೆ ಚಿತ್ರ ಗೆಲ್ಲುತ್ತದೆ ಎಂಬ ಬಲವಾದ ನಂಬಿಕೆ ಇತ್ತು, ಅದು ಸುಳ್ಳಾಗಲಿಲ್ಲ. ಜನ ನಮ್ಮ ಕೈ ಹಿಡಿದರು. ‘ಬಾಹುಬಲಿ’, ‘ಭಜರಂಗಿ ಭಾಯಿಜಾನ್’, ‘ಶ್ರೀಮಂತುಡು’ ನಂತಹ ದೊಡ್ಡ ಚಿತ್ರಗಳ ಜೊತೆ ಬಿಡುಗಡೆಯಾದರೂ ನಮ್ಮ ಕನ್ನಡ ಚಿತ್ರ ಸೂಪರ್ ಹಿಟ್ ಆಯಿತು. ‘ರಂಗಿತರಂಗ’ದ ಮೂಲಕ ಅಮೆರಿಕದಲ್ಲಿ ಕನ್ನಡಕ್ಕೆ ಒಂದು ಹೊಸ ಮಾರುಕಟ್ಟೆ ಸೃಷ್ಟಿಯಾಯಿತು. ಆ ವರ್ಷದ ಬಹುಪಾಲು ಪ್ರಶಸ್ತಿಗಳನ್ನು ಬಾಚಿಕೊಂಡ ‘ರಂಗಿತರಂಗ’ ಈ ಜುಲೈ 4 ರಂದು ಮರು-ಬಿಡುಗಡೆಯಾಗುತ್ತಿದೆ. ಮತ್ತೆ ನಮ್ಮ ಚಿತ್ರವನ್ನು ಕನ್ನಡಿಗರು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ” ಎಂದು ನಿರ್ದೇಶಕ ಅನೂಪ್ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ನಟ ಸಾಯಿಕುಮಾರ್, “ʼಪೊಲೀಸ್ ಸ್ಟೋರಿʼ ಮತ್ತು ʼರಂಗಿತರಂಗʼ ಚಿತ್ರಗಳು ನನ್ನ ಎರಡು ಕಣ್ಣುಗಳು. ಇಂತಹ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ಈಗಲೂ ನಾನು ಹೋದ ಕಡೆ ‘ರಂಗಿತರಂಗ’ದ ನನ್ನ ಪಾತ್ರಕ್ಕೆ ಜನ ಮೆಚ್ಚುಗೆ ಸೂಚಿಸುತ್ತಾರೆ. ಚಿತ್ರ ಮರು-ಬಿಡುಗಡೆಯಲ್ಲೂ ದಾಖಲೆ ಬರೆಯಲಿ” ಎಂದು ಹಾರೈಸಿದರು.
ನಾಯಕ ನಿರೂಪ್ ಭಂಡಾರಿ: “ಅಣ್ಣನ ಮೊದಲ ಚಿತ್ರಕ್ಕೆ ನಾನೇ ಹೀರೋ ಎಂದಾಗ ಖುಷಿ ಅಷ್ಟಿಷ್ಟಲ್ಲ!”
“ನಾನು ಐಟಿ ಉದ್ಯೋಗಿಯಾಗಿದ್ದರೂ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದೆ. ರತನ್ ಠಾಕೂರ್ ಗ್ರಾಂಟ್ ಅವರ ನಟನಾ ಶಾಲೆಯಲ್ಲಿ ನಟನೆ ಅಭ್ಯಾಸ ಮಾಡಿದೆ. ಅಣ್ಣನ ನಿರ್ದೇಶನದ ಕಿರುಚಿತ್ರಗಳಿಗೆ ನಾನೇ ಹೀರೋ. ಬೆಳ್ಳಿತೆರೆಯ ಮೇಲೆ ಅನೂಪ್ ನಿರ್ದೇಶನದ ಮೊದಲ ಚಿತ್ರಕ್ಕೂ ನಾನೇ ನಾಯಕ ಎಂದು ತಿಳಿದಾಗ ಆದ ಖುಷಿ ಅಷ್ಟಿಷ್ಟಲ್ಲ. ಮೊದಲ ದೃಶ್ಯದಲ್ಲೇ ನಾನು ಸಾಯಿಕುಮಾರ್ ಅವರೊಂದಿಗೆ ಫೈಟ್ ಮಾಡಬೇಕಿತ್ತು. ಆಗ ನನಗಾದ ಭಯ ಈಗಲೂ ಕಣ್ಣ ಮುಂದೆ ಇದೆ. ಅಮೆರಿಕಾಗೆ ಹೋದಾಗ ಅಲ್ಲಿ ನಮ್ಮ ಚಿತ್ರವನ್ನು ನೋಡಲು ಬಂದಿದ್ದ ಜನಸಾಗರ ಕಂಡು ಬಹಳ ಖುಷಿಪಟ್ಟಿದ್ದೆ. ಇಂತಹ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕನಾದ ಅಣ್ಣನಿಗೆ ಧನ್ಯವಾದಗಳು” ಎಂದು ನಾಯಕ ನಿರೂಪ್ ಭಂಡಾರಿ ತಮ್ಮ ಅನುಭವ ಹಂಚಿಕೊಂಡರು.
ಇದನ್ನೂ ಓದಿ: ನಟ ಪುನೀತ್ ಜೊತೆ ನಟಿಸಿದ್ದ ಬಾಲಿವುಡ್‌ನ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ
ನಾಯಕಿ ರಾಧಿಕಾ ನಾರಾಯಣ್ : “ಇನ್ನೂ ‘ರಂಗಿತರಂಗ’ ಮೂಲಕವೇ ಗುರುತಿಸುತ್ತಾರೆ!”
“ನಾನು ಐಟಿ ಉದ್ಯೋಗಿ. ಅನೂಪ್ ಅವರು ಈ ಚಿತ್ರದ ಕಥೆ ಹೇಳಿದಾಗ ನಟಿಸಲು ಬಹಳ ಇಷ್ಟವಾಯಿತು. ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳಾಗಿದೆ. ಆ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದರೂ, ಈಗಲೂ ನನ್ನನ್ನು ‘ರಂಗಿತರಂಗ’ದ ಮೂಲಕವೇ ಗುರುತಿಸುತ್ತಾರೆ” ಎಂದು ನಾಯಕಿ ರಾಧಿಕಾ ನಾರಾಯಣ್ ಖುಷಿ ಹಂಚಿಕೊಂಡರು.
ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಅರವಿಂದ್ ತಮ್ಮ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ವಿಲಿಯಂ ಡೇವಿಡ್ ಛಾಯಾಗ್ರಹಣದ ಬಗ್ಗೆ ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ಸುಧಾಕರ್ ಭಂಡಾರಿ ಅವರು ‘ರಂಗಿತರಂಗ’ ಆರಂಭವಾದಾಗಿನಿಂದ ಬಿಡುಗಡೆಯಾಗುವವರೆಗೂ ನಡೆದ ಸ್ವಾರಸ್ಯಕರ ಘಟನೆಗಳ ಕುರಿತು ಮಾಹಿತಿ ನೀಡಿದರು. ವಿತರಕ ಹೇಮಂತ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.