ನಕಲಿ ಹಿಂದುತ್ವವಾದಿಗಳು ಮತ್ತು ಗೋರಕ್ಷಕರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗೋರಕ್ಷಣೆಯ ಹೆಸರಿನಲ್ಲಿ ದಾಳಿಗಳು, ಹಲ್ಲೆಗಳು, ಕೊಲೆಗಳು ಹಾಗೂ ಸುಲಿಗೆಗಳು ನಡೆಯುತ್ತಿರುವುದು ವರದಿಯಾಗುತ್ತಿದೆ. ಅಂತದ್ದೇ ಪ್ರಕರಣವೊಂದರಲ್ಲಿ ಹಿಂದುತ್ವ ಸಂಘಟನೆ ಮತ್ತು ಜಾನುವಾರು ಸಂರಕ್ಷಣೆ ಹೆಸರಿನಲ್ಲಿ ಹಣ ವಸೂಲಿ ದಂಧೆ ನಡೆಸುತ್ತಿರುವುದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹಿಂದುತ್ವವಾದಿ ಸಂಘಟನೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹುಣಸೂರಿನಲ್ಲಿ ದಾಂಧಲೆ, ಸುಲಿಗೆ ನಡೆಸುತ್ತಿರುವ ಗುಂಪು, ಹಸು-ಎಮ್ಮೆಗಳನ್ನು ಸಾಗಿಸುವ ವಾಹನಗಳನ್ನು ತಡೆದು ಹಣ ವಸೂಲಿ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿತ್ತು. ಆ ಗುಂಪು ಹುಣಸೂರು ಬಳಿಯ ಕಟ್ಟೆಮಳಲವಾಡಿ ಗ್ರಾಮದಲ್ಲಿ ಹಣ ವಸೂಲಿ ನಡೆಸುತ್ತಿತ್ತು. ಈ ವೇಳೆ, ಆ ಗುಂಪಿನ ಆರು ಮಂದಿಯನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಅವರಿಂದ ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಹಿಂದು ರಾಷ್ಟ್ರ ರಕ್ಷಣಾ ವೇದಿಕೆ ರಾಷ್ಟ್ರೀಯ ಅಧ್ಯಕ್ಷ ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ರಾಮಕೃಷ್ಣ, ಬೆಂಗಳೂರಿನವರೇ ಆದ ಶಿವಕುಮಾರ್, ಲಿಂಗರಾಜು, ಕಿಶೋರ್, ಪ್ರೇಮಕುಮಾರ್, ಪುಷ್ಪಲತಾ ಹಾಗೂ ಕೆಆರ್ ಪೇಟೆ ತಾಲೂಕಿನ ಮಾರಗೌಡನಹಳ್ಳಿಯ ಸ್ವಾಮಿ ಎಂದು ಹೆಸರಿಸಲಾಗಿದೆ.
ಬುಧವಾರ ಚುಂಚನಕಟ್ಟೆ ಸಂತೆ ಇತ್ತು. ಸಂತೆಯಲ್ಲಿ ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ಕಿರಣ್ ಅವರು ಮೂರು ಜಾನುವಾರುಗಳನ್ನು ಖರೀದಿಸಿ, ತಮ್ಮೂರಿಗೆ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಈ ವೇಳೆ, ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ಕಟ್ಟೆಮಳಲವಾಡಿ ಬಳಿ ವಾಹನವನ್ನು ಅಡ್ಡಗಟ್ಟಿ ದಾಂಧಲೆ ನಡೆಸಿದ್ದಾರೆ.
ಜಾನುವಾರುಗಳನ್ನು ಹತ್ಯೆಗೈಯಲು ಕಸಾಯಿಖಾನೆಗೆ ಸಾಗಿಸುತ್ತಿದ್ದೀರಾ ಎಂದು ಚಾಲಕ ಕಿರಣ್‌ನನ್ನು ಬೆದರಿಸಿ, ರಾದ್ಧಾಂತ ನಡೆಸಿದ್ದಾರೆ. ಅಲ್ಲದೆ, 25 ಸಾವಿರ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕಿರಣ್, ತಾವು ವ್ಯವಸಾಯಕ್ಕಾಗಿ ಜಾನುವಾರುಗಳನ್ನು ಖರೀದಿಸಿ, ಕೊಂಡೊಯ್ಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಆದರೂ, ಅವರನ್ನು ಬಿಡದ ಹಿಂದುತ್ವವಾದಿ ದುಷ್ಕರ್ಮಿಗಳು, ಹಣ ಕಟ್ಟರೆ ಮಾತ್ರವೇ ಬಿಡುತ್ತೇವೆ. ಇಲ್ಲವೇ ಪೊಲೀಸರಿಗೆ ಒಪ್ಪಿಸುತ್ತೇವೆಂದು ಧಮ್ಕಿ ಹಾಕಿದ್ದಾರೆ.
ಹಿಂದುತ್ವವಾದಿ ಪುಂಡರ ದಾಂಧಲೆಯನ್ನು ಗಮನಿಸಿದ ಸಾರ್ವಜನಿಕರು ಸ್ಥಳಕ್ಕೆ ಬಂದು, ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಹಿಡಿದು ಥಳಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಿರಣ್ ಅವರು ಹಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ.
ಈ ಹಿಂದೆ, ಇದೇ ತಂಡ ಕೆ.ಆರ್.ನಗರದಲ್ಲೂ ದಾಂಧಲೆ ನಡೆಸಿ, ಹಣ ವಸೂಲಿ ಮಾಡಿತ್ತು ಎಂದು ಆರೋಪಿಸಲಾಗಿದೆ. ಕೆ.ಆರ್ ನಗರದ ಗ್ಯಾಸ್ ಅಂಗಡಿಯೊಂದರ ಮಾಲೀಕನನ್ನು ಬೆದರಿಸಿ 20 ಸಾವಿರ ರೂ. ಸುಲಿಗೆ ಮಾಡಿತ್ತು. ಮಾತ್ರವಲ್ಲದೆ, ಎರಡು ವರ್ಷಗಳ ಹಿಂದೆ, ಚಾಮರಾಜನಗರ ಜಿಲ್ಲೆಯಲ್ಲಿಯೂ ಇಂಥದ್ದೇ ಹಲವಾರು ಸುಲಿಗೆಗಳನ್ನು ಮಾಡಿದೆ. ಆರೋಪಿಗಳ ವಿರುದ್ಧ ಬೆಂಗಳೂರು, ಹುಣಸೂರು ಹಾಗೂ ಕೆ.ಆರ್ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈ ಲೇಖನ ಓದಿದ್ದೀರಾ?: ಕಲ್ಲಡ್ಕ ಭುಜಕ್ಕೆ ಭುಜ ತಾಗಿಸಿ ನಿಂತರು ಜಾತ್ಯತೀತವಾದಿ ದೇವೇಗೌಡರು!
ಆರೋಪಿಗಳು ತಾವು ಕೃತ್ಯಕ್ಕೆ ಬಳಸುತ್ತಿದ್ದ ಕಾರಿಗೆ ಹಿಂದುರಾಷ್ಟ್ರ, ಹಿಂದು ರಾಷ್ಟ್ರ ರಕ್ಷಣಾ ಪಡೆ ಎಂಬ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ‘ಜೆ.ಕೆ 24*7’ ಕನ್ನಡ ನ್ಯೂಸ್ ಚಾನಲ್ ಎಂಬ ಸ್ಟಿಕರ್‌ಅನ್ನೂ ಹಾಕಿಕೊಂಡಿದ್ದಾರೆ. ಆರೋಪಿಗಳು ಪತ್ರಿಕೆ ಮತ್ತು ಹಿಂದುತ್ವದ ಹೆಸರೇಳಿಕೊಂಡು ವಸೂಲಿ ದಂಧೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಅಲ್ಲದೆ, ಆರೋಪಿ ರಾಮಕೃಷ್ಣ ಎಂಬಾತನ ಮೊಬೈಲ್‌ನಲ್ಲಿ ಆತ ಮತ್ತೊಬ್ಬ ಹಿಂದುತ್ವವಾದಿ ಸುಲಿಗೆಕೋರ ಎಂದೇ ಕುಖ್ಯಾತಿ ಪಡೆದಿರುವ ಪುನೀತ್ ಕೆರೆಹಳ್ಳಿಯ ಜೊತೆಗಿರುವ ಫೋಟೋಗಳಿದ್ದು, ಅವುಗಳನ್ನು ಜಾನುವಾರು ಸಾಗಿಸುವವರಿಗೆ ತೋರಿಸಿ, ಬೆದರಿಕೆ ಹಾಕಿ, ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಪುನೀತ್ ಕೆರೆಹಳ್ಳಿ ಕೂಡ ಗೋರಕ್ಷಣೆಯ ಹೆಸರಿನಲ್ಲಿ ದಾಂಧಲೆ ನಡೆಸುತ್ತಿದ್ದರು. ರಾಮನಗರ ಜಿಲ್ಲೆಯ ಸಾತನೂರು ಬಳಿ, ಜಾನುವಾರು ಸಾಗಿಸುತ್ತಿದ್ದ ಆರೋಪದ ಮೇಲೆ ಇದ್ರೀಸ್ ಪಾಷಾ ಅವರನ್ನು ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡ ಅಮಾನುಷವಾಗಿ ಥಳಿಸಿ, ಕೊಂದಿತ್ತು. ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿಯನ್ನು ರಾಜಸ್ತಾನದಲ್ಲಿ ರಾಮನಗರ ಪೊಲೀಸರು ಬಂಧಿಸಿದ್ದರು. ಈಗ, ಆತನ ಹೆಸರು ಹೇಳಿಕೊಂಡು ಹುಣಸೂರು ಬಳಿ, ಹಿಂದುತ್ವವಾದಿಗಳ ಗ್ಯಾಂಗ್ ಸುಲಿಗೆ ಮಾಡಿ, ಸಿಕ್ಕಿಬಿದ್ದಿದೆ.