ಕಾಮುಕನೋರ್ವ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದ ಬುಧಾನಾ ಪಟ್ಟಣದಲ್ಲಿ ನಡೆದಿದೆ. ಶುಕ್ರವಾರ ಈ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಎನ್‌ಕೌಂಟರ್ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ವೃತ್ತ ಅಧಿಕಾರಿ(ಸಿಒ) ಗಜೇಂದ್ರ ಪಾಲ್ ಸಿಂಗ್, “ಆರೋಪಿ ರಾಜು(35) ಸಂತ್ರಸ್ತ ಬಾಲಕಿಯ ಮನೆಯ ಸಮೀಪವಿರುವ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವಾತ. ಶುಕ್ರವಾರ ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಉತ್ತರ ಪ್ರದೇಶದ ಬಿಜೆಪಿ ಶಾಸಕ ದೋಷಿ ಎಂದ ನ್ಯಾಯಾಲಯ
ಬಾಲಕಿಯು ಮನೆಗೆ ಬಂದಾಗ ಆಕೆಯ ಗುಪ್ತಾಂಗಗಳಿಂದ ರಕ್ತಸ್ರಾವಾಗುತ್ತಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಆರೋಪಿ ರಾಜು ವಿರುದ್ಧ ಪೊಲೀಸರು ಬಿಎನ್ಎಸ್ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಬೆಳಿಗ್ಗೆ ಪೊಲೀಸರು ಎನ್‌ಕೌಂಟರ್ ನಡೆಸಿ ಆರೋಪಿ ರಾಜು ಬಂಧನ ಮಾಡಿದ್ದಾರೆ. ಆರೋಪಿಯು ತಪ್ಪಿಸಲು ಯತ್ನಿಸಿದ್ದು ಈ ವೇಳೆ ಎನ್‌ಕೌಂಟರ್ ನಡೆಸಲಾಗಿದೆ, ಆರೋಪಿಯ ಕಾಲಿಗೆ ಗುಂಡೇಟು ತಗುಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆಗಾಗಿ ಆರೋಪಿಯನ್ನು ಬುಧಾನಾದಲ್ಲಿರುವ ಸರ್ಕಾರಿ ಆರೋಗ್ಯ ಸಮುದಾಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ರಾಜು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋಕ್ಸೊ ಪ್ರಕರಣ: ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ
ಎನ್‌ಸಿಆರ್‌ಬಿ ಎಂದರೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(National Crime Records Bureau-NCRB) 2020ರ ವರದಿ ಪ್ರಕಾರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆಯಡಿ ದಾಖಲಾದ ಹೆಚ್ಚು ಪ್ರಕರಣಗಳಲ್ಲಿ ಉತ್ತರ ಪ್ರದೇಶವು ಮೊದಲ ಸ್ಥಾನದಲ್ಲಿದೆ. ಯುಪಿಯಲ್ಲಿ 7,955 ಪ್ರಕರಣಗಳು ದಾಖಲಾದರೆ, 7,467 ಪ್ರಕರಣಗಳು ದಾಖಲಾದ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ. ಕೌಟುಂಬಿಕ ಹಿಂಸೆ ವಿಚಾರಕ್ಕೆ ಬಂದಾಗಲೂ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. 2024ರ ವರದಿ ಪ್ರಕಾರವು ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ.
