ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಹಲವಾರು ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಿ, ನಿಯಮಾನುಸಾರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರಕೃತಿ ವಿಕೋಪ ಮತ್ತು ಅಡಿಕೆ ಬೆಳೆಯ ಎಲೆಚುಕ್ಕಿ ರೋಗದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. “ಈ ವರ್ಷ ತಡವಾಗಿ ಮಳೆ ಆರಂಭವಾಗಿದೆ. ಸದ್ಯಕ್ಕೆ ಹೆಚ್ಚು ಪ್ರಾಕೃತಿಕ ಹಾನಿಯಾಗಿಲ್ಲ. ಮಲೆನಾಡು ಭಾಗದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗುತ್ತಿದೆ. ಕೆಲವೆಡೆ ರಸ್ತೆ, ಸೇತುವೆ, ಬೆಳೆ – ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿದ್ದುಕೊಂಡು ಎಲ್ಲವನ್ನು ಗಮನಿಸಬೇಕು. ಎಚ್ಚರಿಕೆಯಿಂದ ಶೀಘ್ರವಾಗಿ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು” ಎಂದು ತಿಳಿಸಿದರು.
“ಹಳೆಯ ಶಾಲೆ ಕೆಡುವುದು ಮತ್ತು ಮರಗಳನ್ನು ಕಟಾವು ಮಾಡುವುದು ಅತಿ ಮುಖ್ಯ. ಇದು ತುಂಬಾ ಗಂಭೀರ ವಿಚಾರವಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶೀಘ್ರ ಕ್ರಮ ಕೈಗೊಳ್ಳಬೇಕು. ಡಿಡಿಪಿಐ ಅವರು ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡ ಕೆಡವಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಪಿಡಬ್ಲ್ಯುಡಿ ಮತ್ತು ಪಿಆರ್‍ಇಡಿ ಅಧಿಕಾರಿಗಳು ಶುಕ್ರವಾರದೊಳಗೆ ವರದಿ ನೀಡಬೇಕು: ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ, ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್‍ಕುಮಾರ್, ಶಾಸಕರಾದ ಆರಗ ಜ್ಞಾನೇಂದ್ರ, ಶಾರದಾ ಪೂರ್ಯ ನಾಯ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.