ಬಿಜೆಪಿ ಶಾಸಕರೊಬ್ಬರು ದಲಿತ ಸರಪಂಚ್ ಜೊತೆ, ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದು, ವೇದಿಕೆ ಹತ್ತಲು ಬಿಡದೆ, ‘ನೀನು ದಲಿತನಾ. ಹಾಗಿದ್ದರೆ ಅಲ್ಲೇ ನಿಂತುಕೋ’ ಎಂದು ಜಾತಿ ತಾರತಮ್ಯ ಮೆರೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಘಟನೆಯು, ಆಂಧ್ರದ ಅದೋನಿ ವಿಧಾನಸಭಾ ಕ್ಷೇತ್ರದ ಧನಪುರಂನಲ್ಲಿ ನಡೆದಿದೆ. ಕ್ಷೇತ್ರದ ಬಿಜೆಪಿ ಶಾಸಕ ಪಿ.ವಿ ಪಾರ್ಥಸಾರಥಿ ಅವರು ದಲಿತ ಸರಪಂಚ್ ಚಂದ್ರಶೇಖರ್ ಮೇಲೆ ಜಾತಿ ತಾರತಮ್ಯ ಎಸಗಿದ್ದಾರೆ.
ಜೂನ್ 16ರಂದು ಪಾರ್ಥಸಾರಥಿ ಅವರು ಧನಪುರಂಗೆ ಭೇಟಿ ನೀಡಿದ್ದರು. ಆ ಸಂದರ್ಭದ ವಿಡಿಯೋ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಹಿಂದು ದೇವಾಲಯದ ಎದುರು ಹಾಕಲಾಗಿದ್ದ ಎತ್ತರದ ವೇದಿಕೆ ಮೇಲೆ ಶಾಸಕ ಪಾರ್ಥಸಾರಥಿ ನಿಂತಿದ್ದಾರೆ. ಅವರು ಗ್ರಾಮದ ಸರಪಂಚ್ ಚಂದ್ರಶೇಖರ್ ಅವರಿಗೆ, ‘ಹೇ ಸರಪಂಚ್, ನೀವು ಅಲ್ಲಿ ಯಾಕೆ ನಿಂತಿದ್ದೀರಿ? ಇಲ್ಲಿಗೆ ಬನ್ನಿ’ ಎಂದು ವೇದಿಕೆಗೆ ಕರೆದು, ತನ್ನ ಪಕ್ಕದ ಸ್ಥಳವನ್ನು ಸೂಚಿಸುತ್ತಾರೆ. ಆದರೆ, ಶಾಸಕನ ಪಕ್ಕದಲ್ಲಿ ನಿಂತಿದ್ದ ಟಿಡಿಪಿ ನಾಯಕಿ ಕೃಷ್ಣಮ್ಮ ಅವರು ಸರಪಂಚ್‌ಗೆ ವೇದಿಕೆಗೆ ಬಾರದಂತೆ ಸನ್ಹೆ ಮಾಡುತ್ತಾರೆ. ಬಳಿಕ, ಪಾರ್ಥಸಾರಥಿ ‘ಆತ ಕ್ರಿಶ್ಚಿಯನ್ ಸಮುದಾಯವೇ’ ಎಂದು ಪ್ರಶ್ನಿಸುತ್ತಾರೆ. ಯಾರಿಗೂ ಕೇಳದಂತೆ ಟಿಡಿಪಿ ನಾಯಕಿ ಉತ್ತರಿಸಿದಾಗ, ಪಾರ್ಥಸಾರಥಿ ‘ಏಕೆ’ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ಟಿಡಿಪಿ ನಾಯಕಿ, ‘ಅವರು ದಲಿತ’ ಎಂದು ಹೇಳುತ್ತಾರೆ.
ಈ ವೇಳೆಗೆ, ವೇದಿಕೆಯನ್ನು ಸಮೀಪಿಸಿದ್ದ ಸರಪಂಚ್ ಚಂದ್ರಶೇಖರ್ ಅವರಿಗೆ ಅಲ್ಲಿ ನೆರೆದಿದ್ದವರು ವೇದಿಕೆ ಹತ್ತುವಂತೆ ಒತ್ತಾಯಿಸುತ್ತಾರೆ. ಆದರೆ, ವೇದಿಕೆ ಹತ್ತಲು ಸರಪಂಚ್ ನಿರಾಕರಿಸುತ್ತಾರೆ. ಶಾಸಕ ಪಾರ್ಥಸಾರಥಿ ಕೂಡ ‘ನೀನು ದಲಿತನಾ– ಹಾಗಾದರೆ ಅಲ್ಲೇ ನಿಲ್ಲು’ ಎಂದು ಹೇಳುತ್ತಾರೆ.
#Casteism MLA: Hey Sarpanch, come up on stage… why aren’t you coming ?
— The Dalit Voice (@ambedkariteIND) June 18, 2025
TDP leader: "Sir, he’s SC."
MLA: "Oh, SC ha? Okay… stand there."
MLA Parthasarathi publicly humiliated a Dalit sarpanch because of his caste. pic.twitter.com/jZI5hAh6tw
ಅಂದಹಾಗೆ, ಆಂಧ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡ ನೇತೃತ್ವದ ಟಿಡಿಪಿ, ಬಿಜೆಪಿ ಹಾಗೂ ಜನ ಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ವೈರಲ್ ಆಗಿರುವ ಈ ವಿಡಿಯೋ ಸರ್ಕಾರ, ಬಿಜೆಪಿ ವಿರುದ್ಧ ತೀವ್ರ ಟೀಕೆ, ಆಕ್ರೋಶವನ್ನು ಹುಟ್ಟುಹಾಕಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು, ಆಳವಾಗಿ ಬೇರೂರಿರುವ ಜಾತಿವಾದ ಮತ್ತು ಜಾತಿ ದುರಹಂಕಾರದ ಪ್ರದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾರ್ಥಸಾರಥಿ ಅವರು ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಆಂಧ್ರದಲ್ಲಿ ಹಿಂದುಳಿದ ವರ್ಗ (ಬಿಸಿ), ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ ಕೆಲವು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ವರ್ಗದ ಅಡಿಯಲ್ಲಿದೆ. ಆಂಧ್ರಪ್ರದೇಶದಲ್ಲಿ ವಾಲ್ಮೀಕಿ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಬೇಕೆಂದು ಬೇಡಿಕೆಗಳು, ಪ್ರತಿಭಟನೆಗಳು ನಿರಂತರವಾಗಿ ನಡೆಯುತ್ತಿದೆ.
ಆಂಧ್ರದಲ್ಲಿ ಬಿಸಿ ವರ್ಗದ ಅಡಿಯಲ್ಲಿರುವ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶಾಸಕ ಪಾರ್ಥಸಾರಥಿ ಅವರು ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದಾರೆ.
ಈ ಲೇಖನ ಓದಿದ್ದೀರಾ?:‘ನೀನ್ ಮಾದಿಗ ಅಲ್ವಾ? ನಾವ್ ಕುರುಬ್ರು’: ಜಾತಿ ದೌರ್ಜನ್ಯ ಎಸಗಿದವರ ವಿರುದ್ಧ ಕೇಸ್ ದಾಖಲು
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪಾರ್ಥಸಾರಥಿ, ”ಹಿಂದು ದೇವಾಲಯದ ವೇದಿಕೆಗೆ ಬರಲು ಸರ್‌ಪಂಚ್ ಹಿಂಜರಿಯುತ್ತಿರುವಂತೆ ಕಾಣಿಸಿದ ಕಾರಣ, ಅವರು ಮತ್ತೊಂದು ಧರ್ಮಕ್ಕೆ ಸೇರಿರಬಹುದೆಂದು ಭಾವಿಸಿ ಅವರು ಕ್ರಿಶ್ಚಿಯನ್ ಸಮುದಾಯದವರೇ ಎಂದು ಹೇಳಿದೆ. ಆಗ ನೀವು ವೀಡಿಯೊದಲ್ಲಿ ಕಾಣಿಸುತ್ತಿರುವಂತೆ, ಟಿಡಿಪಿ ನಾಯಕಿ ಕೃಷ್ಣಮ್ಮ ನನಗೆ ಉತ್ತರಿಸಿದರು. ಅವರು ದಲಿತನೆಂದು ತಿಳಿಸಿದರು. ಆದರೆ, ಜಾತಿಯ ಆಧಾರದ ಮೇಲೆ ಯಾರ ವಿರುದ್ಧವೂ ತಾರತಮ್ಯ ಮಾಡುವ ಉದ್ದೇಶ ನಮಗಿಲ್ಲ” ಎಂದು ಹೇಳಿಕೊಂಡಿದ್ದಾರೆ.
”ನನಗೆ ಜಾತಿ ತಾರತಮ್ಯದ ಯಾವುದೇ ಆಲೋಚನೆ ಇರಲಿಲ್ಲ. ಆದರೆ, ನನ್ನ ಸಮ್ಮುಖದಲ್ಲಿ ಇಂತಹ ಘಟನೆ ನಡೆದದ್ದಕ್ಕೆ ನಾನು ಹೊಣೆಹೊತ್ತುಕೊಳ್ಳಬೇಕು. ನಾನು ಕೂಡ ಘಟನೆಯನ್ನು ಖಂಡಿಸುತ್ತೇನೆ. ವೀಡಿಯೊ ನೋಡಿದ ನಂತರ ಯಾರಿಗಾದರೂ ನೋವಾಗಿದ್ದರೆ ಅವರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನಾನು ಕೂಡ ಅಂಚಿನಲ್ಲಿರುವ BC ಸಮುದಾಯದಿಂದ ಬಂದಿದ್ದೇನೆ. ಹಲವು ವರ್ಷಗಳಿಂದ BC ಮತ್ತು ದಲಿತರ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇನೆ” ಎಂದು ಪಾರ್ಥಸಾರಥಿ ಹೇಳಿಕೊಂಡಿದ್ದಾರೆ.
ಬಿಜೆಪಿ ನಾಯಕರ ಇಂತಹ ದಲಿತ ವಿರೋಧಿ ಧೋರಣೆಗಳು, ಜಾತಿ ತಾರತಮ್ಯಗಳು ಇದೇ ಮೊದಲೇನೂ ಅಲ್ಲ. ಬಿಜೆಪಿಗರು ಮನುವಾದದ ಆರಾಧಕರು, ಮನುಸ್ಮೃತಿಯನ್ನೇ ತಮ್ಮ ಜೀವಾಳ ಮಾಡಿಕೊಂಡಿರುವವರು. ಶ್ರೇಣಿಕೃತ ವರ್ಗ ವ್ಯವಸ್ಥೆ, ಜಾತಿ ವ್ಯವಸ್ಥೆ ಇರಬೇಕೆಂದು ಪ್ರತಿಪಾದಿಸುವವರು. ಬಿಜೆಪಿಗರು ಜಾತಿ ದೌರ್ಜನ್ಯ ಎಸಗಿರುವ ಹಲವಾರು ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ಇವೆ.
ಇತ್ತೀಚೆಗೆ, ರಾಜಸ್ಥಾನದ ಅಲ್ವಾರ್‌ನಲ್ಲಿ, ದಲಿತ ಕಾಂಗ್ರೆಸ್ ನಾಯಕ ಟಿಕಾರಾಮ್ ಜುಲಿಯವರು ದೇವಾಲಯಕ್ಕೆ ಭೇಟಿ ನೀಡಿದ್ದ ಕಾರಣಕ್ಕಾಗಿ, ಅಲ್ಲಿನ BJP ಶಾಸಕ ಗಿಯಾನ್ ದೇವ್ ಆಹುಜಾ ಅವರು ದೇವಾಲಯವನ್ನು ಗೋಮೂತ್ರ ಹಾಕಿ ‘ಪವಿತ್ರ’ಗೊಳಿಸಿದ್ದರು. ‘ಕೆಲವು ಅಪವಿತ್ರ ವ್ಯಕ್ತಿಗಳು’ ದೇವಾಲಯಕ್ಕೆ ಭೇಟಿ ನೀಡಿದ್ದರಿಂದ ದೇವಾಲಯವನ್ನು ಪವಿತ್ರಗೊಳಿಸಿದ್ದಾರೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು.
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಸ್ಥಳೀಯ BJP ನಾಯಕ ಪ್ರವೇಶ್ ಶುಕ್ಲಾ ಎಂಬಾತ ಆದಿವಾಸಿ ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿ, ದೌರ್ಜನ್ಯ ಎಸಗಿದ್ದ. ಗುಜರಾತ್‌ನ ಉನಾದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಹಿಂದುತ್ವವಾದಿಗಳ ಗುಂಪೊಂದು ನಾಲ್ವರು ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ, ಅಮಾನುಷವಾಗಿ ಥಳಿಸಿತ್ತು.
ಕರ್ನಾಟಕದ ಬಿಜೆಪಿ ಶಾಸಕ ಮುನಿರತ್ನ ಓರ್ವ ದಲಿತ ಗುತ್ತಿಗೆದಾರನಿಗೆ ಕಮಿಷನ್ ಹಣದ ವಿಚಾರವಾಗಿ ಜಾತಿ ನಿಂದನೆ ಮಾಡಿದ್ದ ಘಟನೆಯೂ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಅವಾಚ್ಯ ಶಬ್ದಗಳಿಂದ ದಲಿತ ಗುತ್ತಿಗೆದಾರನನ್ನು ಮುನಿರತ್ನ ನಿಂದಿಸಿರುವ ಆಡಿಯೋ ಕೂಡ ವೈರಲ್ ಆಗಿತ್ತು.
ಬಿಜೆಪಿಗರು ದಲಿತರ ಮೇಲೆ ಜಾತಿ ದೌರ್ಜನ್ಯ ಎಸಗಿರುವ ಇಂತಹ ನೂರಾರು ಘಟನೆಗಳು ದೇಶದಲ್ಲಿ ನಡೆದಿವೆ. ನಡೆಯುತ್ತಲೇ ಇವೆ.