ಮೋದಿ 3.0 | ಒಂದೇ ವರ್ಷದಲ್ಲಿ 947 ಹೇಟ್‌ ಕ್ರೈಮ್; ಆತಂಕ ಹುಟ್ಟಿಸುತ್ತೆ APCR ವರದಿ

Date:

Advertisements
ಗಣೇಶ ಚತುರ್ಥಿ, ನವರಾತ್ರಿ, ರಾಮನವಮಿ ಮತ್ತು ಹೋಳಿಯಂತಹ ಹಿಂದೂ ಹಬ್ಬಗಳು ಕೋಮು ದ್ವೇಷ ಬಿತ್ತಲು ವೇದಿಕೆಗಳಾಗಿ ಮಾರ್ಪಡುತ್ತಿವೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಟ್ಟುಕೊಂಡು ಧಾರ್ಮಿಕ ಆಚರಣೆಗಳ ವೇಳೆ ಹೇಗೆ ಹಿಂಸಾಚಾರ ಸೃಷ್ಟಿಸಲಾಗಿದೆ ಎಂಬುದನ್ನು 'ಹೇಟ್ ಕ್ರೈಮ್ ಟ್ರ್ಯಾಕರ್' ವರದಿತೆರೆದಿಟ್ಟಿದೆ.

ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR)ವು “ಮೋದಿ ಅವರ ಮೂರನೇ ಅವಧಿಯ ಸರ್ಕಾರದ ಮೊದಲ ವರ್ಷದ ನಕ್ಷೆ” ಎಂಬ ಶೀರ್ಷಿಕೆಯಡಿ ನಡೆಸಿದ ಅಧ್ಯಯನ ಆಘಾತಕಾರಿ ಸಂಗತಿಗಳನ್ನು ಹೊರಗಿಟ್ಟಿದೆ. “ಮುಸ್ಲಿಮರು, ದಲಿತರು, ಆದಿವಾಸಿಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ಯೋಜಿತವಾಗಿ, ಕೆಲವೊಮ್ಮೆ ಪ್ರತೀಕಾರದ ಉದ್ದೇಶದಿಂದ ಹಾಗೂ ಅವರು ತಪ್ಪಿಸಿಕೊಳ್ಳಲಾಗದ ರೀತಿಯಲ್ಲಿ ಹಿಂಸಾತ್ಮಕ ದಾಳಿಗಳನ್ನು ನಡೆಸಲಾಗಿದೆ” ಎನ್ನುತ್ತದೆ ಈ ಅಧ್ಯಯನದ ವರದಿ.

2024ರ ಜೂ.7 ರಿಂದ 2025ರ ಜೂ.7ರವರೆಗೆ ಅಂದರೆ, ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೆ ಬಂದ 1 ವರ್ಷದ ಕಾಲಾವಧಿಯನ್ನು ದೃಷ್ಟಿಯನ್ನಿಟ್ಟುಕೊಂಡು ನಡೆಸಿದ ಈ ಅಧ್ಯಯನವು, ಈ ಅವಧಿಯಲ್ಲಿ ನಡೆದ ದ್ವೇಷ ಅಪರಾಧಗಳ ನಕ್ಷೆ ರಚಿಸಿ, ಅಪರಾಧಿಗಳನ್ನು, ಬಲಿಪಶುಗಳನ್ನು, ಅಪರಾಧದ ಕಾರಣಗಳನ್ನು ಮತ್ತು ಹಿಂಸೆಯ ಗಂಭೀರತೆಯನ್ನು ವಿವರವಾಗಿ ತೆರೆದಿಟ್ಟಿದೆ.

ಮೇಲೆ ಉಲ್ಲೇಖಿಸಲಾದ ಅವಧಿಯಲ್ಲಿ ಒಟ್ಟು 947 ಕೋಮು ದ್ವೇಷದ ಅಪರಾಧಗಳು ನಡೆದಿವೆ. ಈ ಪೈಕಿ 345 ದ್ವೇಷ ಭಾಷಣಗಳಾದರೆ 602 ದ್ವೇಷದ ಅಪರಾಧಗಳಾಗಿವೆ. 173 ಪ್ರಕರಣಗಳು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದ ದೈಹಿಕ ಹಿಂಸಾಚಾರಗಳು. ಇವುಗಳಲ್ಲಿ 25 ಪ್ರಕರಣಗಳಲ್ಲಿ ಬಲಿಪಶುಗಳು ಸಾವನ್ನಪ್ಪಿದ್ದಾನೆ. ಈ ಎಲ್ಲಾ ಬಲಿಪಶುಗಳು ಮುಸ್ಲಿಮರೇ! ಈ ಅಪರಾಧ ಕೃತ್ಯಗಳ ಪರಿಣಾಮಗಳು ಹಿಂದುಗಳನ್ನೇನೂ ಹೊರತುಪಡಿಸಿಲ್ಲ. ಈ ದ್ವೇಷ ಅಪರಾಧಗಳಿಂದ 25 ಹಿಂದು ವ್ಯಕ್ತಿಗಳೂ ತಟ್ಟಿದೆ. ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿಲ್ಲದಿದ್ದರೂ ಕೃತ್ಯ ನಡೆಯುವ ಸಂದರ್ಭದಲ್ಲಿ ಹಾಜರಿದ್ದ ಕಾರಣದಿಂದಾಗಿ ಹಾನಿಗೆ ಒಳಗಾಗಿದ್ದಾರೆ. ಈ ಘಟನೆಯಲ್ಲಿ ಪುರುಷರಿಗಿಂತ ಹಿಂದು ಮಹಿಳೆಯರು ಹೆಚ್ಚು ಬಾಧಿತರಾಗಿದ್ದಾರೆ ಎಂಬುದನ್ನು ವರದಿ ವಿಶ್ಲೇಷಿಸಿದೆ.

Advertisements
WhatsApp Image 2025 06 28 at 6.55.49 PM
ಮೂಲ: APCR, ‘ದ್ವೇಷ ಅಪರಾಧ ವರದಿ: ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದ ಮೊದಲ ವರ್ಷದ ನಕ್ಷೆ’.

2024-25ರ ಅವಧಿಯಲ್ಲಿ ದಾಖಲಾಗಿದ 345 ದ್ವೇಷ ಭಾಷಣಗಳಲ್ಲಿ 178 ಭಾಷಣಗಳು— ಅಂದರೆ ಶೇಕಡಾ 50ಕ್ಕಿಂತ ಹೆಚ್ಚಿನವು— ಭಾರತೀಯ ಜನತಾ ಪಕ್ಷದ ಸದಸ್ಯರು, ನಾಯಕರು ಅಥವಾ ಬೆಂಬಲಿಗರಿಂದಲೇ ಪ್ರೇರೇಪಣೆ ಪಡೆದಿವೆ ಎಂದು ಅಧ್ಯಯನವು ಸ್ಪಷ್ಟಪಡಿಸುತ್ತದೆ. ದ್ವೇಷ ಅಪರಾಧಗಳು ಎಷ್ಟರ ಮಟ್ಟಿಗೆ ನಿಯಮಿತವಾಗಿವೆಯೆಂದರೆ, ದೇಶದಲ್ಲಿ ಒಂದು ತಿಂಗಳಲ್ಲಿ ಇಂತಹ ಸುಮಾರು 80 ಘಟನೆಗಳು ದಾಖಲಾಗುವುದು ಸಾಮಾನ್ಯವಾಗಿದೆ. ಈ ಭಾಷಣಗಳು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಪರಿಸ್ಥಿತಿ ನಿರ್ಮಿಸಿ, ಆ ಬಳಿಕ ನಡೆಯುವ ಅಪರಾಧ ಕೃತ್ಯಗಳಿಗೆ ಕಾರಣವಾಗಿರುವ ಸಾಧ್ಯತೆಗಳನ್ನೂ ವರದಿ ಹೇಳುತ್ತದೆ. ಇದೇ ಸಮಯದಲ್ಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದ್ವೇಷ ಅಪರಾಧಗಳ ಸಂಖ್ಯೆ ಸ್ಪಷ್ಟವಾಗಿ ಹೆಚ್ಚಾಗಿದೆ ಎನ್ನುವುದು ಮತ್ತೊಂದು ಗಂಭೀರ ಅಂಶ. ಈ ರಾಜ್ಯಗಳಲ್ಲಿ ಸರ್ಕಾರದ ನಿಲುವು, ಪೊಲೀಸರ ನಿಷ್ಕ್ರಿಯತೆ ಅಥವಾ ಕೆಲವೊಮ್ಮೆ ಸಹಕಾರ ಕೂಡ ಈ ದ್ವೇಷದ ವಾತಾವರಣಕ್ಕೆ ನೆರವಾಗಿರುವ ಶಂಕೆ ಇದೆ.

2024ರ ಅಕ್ಟೋಬರ್ ಮತ್ತು ಕಳೆದ ಏಪ್ರಿಲ್‌ನಲ್ಲಿ ದೇಶಾದ್ಯಂತ ಅತಿ ಹೆಚ್ಚು ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣಗಳು ನಡೆದಿವೆ. ಕಳೆದ ಅಕ್ಟೋಬರ್‌ನಲ್ಲಿ ದಾಖಲಾಗಿದ್ದ 80 ದ್ವೇಷ ಅಪರಾಧಗಳಲ್ಲಿ ಬಹುಪಾಲು ಎರಡು ಕಾರಣಕ್ಕೆ ನಡೆದಿವೆ. ಮೊದಲನೆಯದ್ದು, ‘ಮುಸ್ಲಿಂ ಪುರುಷರು ದಾಂಡಿಯಾ (ನವರಾತ್ರಿಯ ಸಮಯದಲ್ಲಿ ಆಯೋಜಿಸಲಾದ ನೃತ್ಯ) ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ’ ಎಂಬುದಾದರೆ, ಎರಡನೆಯದ್ದು ಹಿಂದುತ್ವವಾದಿಗಳ ಕಲ್ಪಿತ ಸಿದ್ಧಾಂತವಾದ ‘ಲವ್ ಜಿಹಾದ್ ಆರೋಪಗಳಿಗೆ’ ಸಂಬಂಧಿಸಿದೆ ಎಂದು ವರದಿ ಹೇಳುತ್ತದೆ. ಜೊತೆಗೆ, ಮುಸ್ಲಿಂ ಉದ್ಯಮಗಳ ಆರ್ಥಿಕ ಬಹಿಷ್ಕಾರದ ಅಭಿಯಾನವೂ ಬಲಪಂಥೀಯ ಸಂಘಟನೆಗಳ ಮೂಲಕ ನಡೆದಿದೆ.

ಇದನ್ನೂ ಓದಿರಿ: ಸಾರ್ವಕಾಲಿಕ ಶ್ರೇಷ್ಠ ದಾಖಲೆ ಬರೆದ ಕೊಬ್ಬರಿ ಧಾರಣೆ; ರೇಟ್‌ ಎಷ್ಟು ಗೊತ್ತಾ?

ಉತ್ತರ ಪ್ರದೇಶದಲ್ಲಿ ನವರಾತ್ರಿ ವೇಳೆ ಮುಸ್ಲಿಂ ಯುವಕರನ್ನು ಆಚರಣೆಯಲ್ಲಿ ಭಾಗವಹಿಸುವುದನ್ನು ತಡೆಯಲಾಗಿದೆ ಹಾಗೂ ಅವರ ಮೇಲೆ ಕಿರುಕುಳ, ಹಲ್ಲೆ ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸುತ್ತದೆ. ಅಲ್ಲದೆ, ಹಿಂದುತ್ವ ಸಂಘಟನೆಗಳು ಧಾರ್ಮಿಕ ಮತಾಂತರದ ಆರೋಪದಡಿ ಪಾದ್ರಿಗಳ ವಿರುದ್ಧ ಅಭಿಯಾನ ನಡೆಸಿದ್ದು, ಅವರನ್ನು ಬೆದರಿಸುವ ಅಥವಾ ಬಂಧಿಸುವ ಘಟನೆಗಳು ಕ್ರಿಶ್ಚಿಯನ್ ಸಮುದಾಯದಲ್ಲಿ ಅಶಾಂತಿಯನ್ನುಂಟು ಮಾಡಿತ್ತು.

ಈ ವರ್ಷದ ಏಪ್ರಿಲ್‌ನಲ್ಲಿ 96 ದ್ವೇಷ ಅಪರಾಧಗಳು ವರದಿಯಾಗಿದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (27) ಪ್ರಕರಣಗಳು ದಾಖಲಾಗಿವೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ದ್ವೇಷ ಅಪರಾಧಗಳಲ್ಲಿ ಏರಿಕೆಯಾಗುತ್ತಿರುವ ಅಂಶವನ್ನು ವರದಿ ಬಹಿರಂಗಪಡಿಸಿದೆ. ಪಹಲ್ಗಾಮ್ ದಾಳಿಯ ಕಾರಣಕ್ಕೆ ದೇಶದ ಅಮಾಯಕ ಮುಸ್ಲಿಮರನ್ನು ಗುರಿಯಾಗಿಸಲಾಗಿದೆ ಎಂದೂ ಅದು ಹೇಳಿದೆ.

ಏಪ್ರಿಲ್‌ನಲ್ಲಿ ರಾಮ ನವಮಿ ಮತ್ತು ಈಸ್ಟರ್ ಆಚರಣೆಗಳು ನಡೆದವು. ಅಹಮದಾಬಾದ್ ಮತ್ತು ರಾಯ್‌ಗಢದಲ್ಲಿ ಈಸ್ಟರ್ ಆಚರಣೆಗಳಿಗೆ ಅಡ್ಡಿಪಡಿಸಿದ ವರದಿಗಳಾಗಿದ್ದರೆ, ಮುಂಬೈ ಮತ್ತು ಜೋಧ್‌ಪುರದಂತಹ ವಿವಿಧ ನಗರಗಳಲ್ಲಿ ರಾಮ ನವಮಿ ಮೆರವಣಿಗೆಗಳ ಸಂದರ್ಭದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದ್ವೇಷದ ಅಪರಾಧಗಳನ್ನು ಎಸಗಲಾಗಿದೆ. ಅದೇ ತಿಂಗಳಲ್ಲಿ, ನೈನಿತಾಲ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯವು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೋಮು ಹಿಂಸಾಚಾರಕ್ಕೆ ಕಾರಣವಾಯಿತು. ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಅಂಗೀಕಾರಗೊಂಡಿದ್ದು ಮತ್ತು ಮುಸ್ಲಿಮರಿಂದ ಅದರ ವಿರುದ್ಧ ಆಂದೋಲನವೂ ಕಂಡುಬಂದಿತು.

WhatsApp Image 2025 06 28 at 6.35.30 PM

ನಮ್ಮ ದೇಶದಲ್ಲಿ ಗಣೇಶ ಚತುರ್ಥಿ, ನವರಾತ್ರಿ, ರಾಮನವಮಿ ಮತ್ತು ಹೋಳಿಯಂತಹ ಹಿಂದೂ ಹಬ್ಬಗಳು, ಕೋಮು ದ್ವೇಷ ಬಿತ್ತಲು ವೇದಿಕೆಗಳಾಗಿ ಮಾರ್ಪಡುತ್ತಿವೆ. ರಾಜಕೀಯ ನಾಯಕರ ವಾಕ್ಚಾತುರ್ಯ, ಮಾಧ್ಯಮಗಳ ಬಿಟ್ಟಿ ಪ್ರಚಾರ ಮತ್ತು ಪೊಲೀಸರ ಜಾಣ ಕುರುಡುತನಗಳು ಇಂತಹ ಕೃತ್ಯಗಳಿಗೆ ಬ್ಯಾಕ್‌ ಸಪೋರ್ಟ್‌ ನೀಡುತ್ತವೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಟ್ಟುಕೊಂಡು ಧಾರ್ಮಿಕ ಆಚರಣೆಗಳ ವೇಳೆ ಹಿಂದುತ್ವ ಸಂಘಟನೆಗಳು ಹೇಗೆ ಹಿಂಸಾಚಾರ ಸೃಷ್ಟಿಸಿವೆ ಎಂಬುದನ್ನು ‘ಹೇಟ್ ಕ್ರೈಮ್ ಟ್ರ್ಯಾಕರ್’ ವರದಿ ತೆರೆದಿಟ್ಟಿದೆ.

ಕಳೆದ ಏಪ್ರಿಲ್‌ನಲ್ಲಿ ನಡೆದ ರಾಮನವಮಿಯು ಮುಸ್ಲಿಂ ದ್ವೇಷದ ಕೃತ್ಯಕ್ಕೆ ಅತ್ಯಂತ ಕೆಟ್ಟ ಉದಾಹಣೆಯಾಯಿತು. ಸರಪಳಿಯಿಂದ ಕಟ್ಟಲಾಗಿರುವ ಮುಸ್ಲಿಂ ವ್ಯಕ್ತಿಯ ಪ್ರತಿಕೃತಿಯನ್ನು ರಾಜಸ್ಥಾನದ ಜೋಧ್‌ಪುರದಲ್ಲಿ ಮೆರವಣಿಗೆಗೆ ಬಳಸಲಾಯಿತು. ಅದೇ ತಿಂಗಳಲ್ಲಿ ಬಾರ್ಮರ್‌ನಲ್ಲಿ ಮಸೀದಿಯೊಂದನ್ನು ಹಾಗೂ ತೆಲಂಗಾಣದಲ್ಲಿ ಮದರಸಾವೊಂದನ್ನು ಧ್ವಂಸಗೊಳಿಸಲಾಯಿತು. ರಾಜಸ್ಥಾನದ ಕೆಲವು ಹಳ್ಳಿಗಳಲ್ಲಿ ಮುಸ್ಲಿಮರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಹೋಳಿ ಹಬ್ಬದ ವೇಳೆ ಭಾಗವಹಿಸಲು ನಿರಾಕರಿಸಿದ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಯಿತು. ಬರೇಲಿಯಲ್ಲಿ ಹೋಳಿ ವೇಳೆ ಮುಸ್ಲಿಂ ಯುವಕರಿಗೆ ಉದ್ಯಾನವನ ಪ್ರವೇಶ ನಿರಾಕರಿಸಲಾಯಿತು. ಈ ಎಲ್ಲ ಘಟನೆಗಳನ್ನು “ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ” ಎಂಬ ಕಾರಣದಿಂದ ಸಮರ್ಥಿಸಲಾಗುತ್ತಿರುವುದು ದೌರ್ಭಾಗ್ಯ.

ಇದನ್ನೂ ಓದಿ: ಭೀಕರ ಯುದ್ಧಗಳಿಗೆ ಬಲಿಯಾಗುತ್ತಿದೆ ಜಗತ್ತು; ಪರಿಣಾಮಗಳೂ ವಿನಾಶಕಾರಿ

ಇಂತಹ ಘಟನೆಗಳಲ್ಲಿ ಪೊಲೀಸರ ಪ್ರತಿಕ್ರಿಯೆ ಹೆಚ್ಚಾಗಿ ನಿಷ್ಕ್ರಿಯ ಅಥವಾ ಸಹಭಾಗಿತ್ವದ್ದಾಗಿತ್ತು ಎಂದು APCR ವರದಿ ಆರೋಪಿಸಿದೆ. ವರ್ಷದಲ್ಲಿ ದಾಖಲಾದ ದ್ವೇಷ ಅಪರಾಧಗಳಲ್ಲಿ, ಕೇವಲ 13% ಪ್ರಕರಣಗಳಿಗೆ ಮಾತ್ರ ಪ್ರಥಮ ಮಾಹಿತಿ ವರದಿ (FIR) ಸಲ್ಲಿಸಿರುವುದು ಕಂಡುಬಂದಿದೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ, ಸಹಾಯ ಪಡೆಯಲು ಪೊಲೀಸ್ ಠಾಣೆಗೆ ಹೋಗಿದ್ದ ಕ್ರಿಶ್ಚಿಯನ್ ಪಾದ್ರಿಯೊಬ್ಬರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದರು. ಇನ್ನು ಮಾಧ್ಯಮಗಳ ಪಾತ್ರ ಹೇಳುವುದೇ ಬೇಡ!

ಈ ವರ್ಷ ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ದೆಹಲಿ ಹಾಗೂ ಉತ್ತರಾಖಂಡದಲ್ಲಿ ಚುನಾವಣೆಗಳು ನಡೆದವು. ಈ ಆರು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕರಲ್ಲಿ ಜಯ ಗಳಿಸಿತು. ಅಧ್ಯಯನದ ಪ್ರಕಾರ, ಬಿಜೆಪಿ ಗೆದ್ದ ಈ ನಾಲ್ಕು ರಾಜ್ಯಗಳಲ್ಲಿ ದ್ವೇಷ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಪ್ರಮಾಣ ಇತರೆ ರಾಜ್ಯಗಳಿಗಿಂತ ಹೆಚ್ಚಿನದಾಗಿತ್ತು.

ಅಧ್ಯಯನದ ಪ್ರಕಾರ, ದ್ವೇಷ ಅಪರಾಧಗಳು ಮತ್ತು ಭಾಷಣಗಳು, “ಬಿಜೆಪಿಗೆ ಚುನಾವಣೆಯಲ್ಲಿ ಲಾಭವಾಗುವಂತಹ ವಾತಾವರಣ ಸೃಷ್ಟಿಸಲು ಉದ್ದೇಶಪೂರ್ವಕವಾಗಿ ರೂಪಿಸಲಾಗಿವೆ”. “ಬಿಜೆಪಿ ಅಧಿಕಾರಕ್ಕೆ ಬಂದಾಗ ಧರ್ಮಾಧಾರಿತ ಹಿಂಸಾಚಾರವೂ ಹೆಚ್ಚಾಗುತ್ತದೆ’ ಎನ್ನುವ ರಾಜಕೀಯ ವಿಜ್ಞಾನಿಗಳು ಮತ್ತು ಹಕ್ಕುಗಳ ಕಾರ್ಯಕರ್ತರ ಅಭಿಪ್ರಾಯವನ್ನು ಈ ವರದಿ ಎತ್ತಿಹಿಡಿದಿದೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ವಿಪರೀತ ದ್ವೇಷ ಭಾಷಣ ಮಾಡಿದ್ದನ್ನು ನೋಡಿದ್ದೇವೆ. ಅವರು ನಡೆಸಿದ ಇಡೀ ಚುನಾವಣಾ ಪ್ರಚಾರ ಮತೀಯ ದ್ವೇಷದಿಂದ ಕೂಡಿತ್ತು. ಇವೆಲ್ಲವೂ ಈ ವರ್ಷ ಕಂಡು ಬಂದಿರುವ ಹೇಟ್ ಕ್ರೈಮ್ ಹೆಚ್ಚಳಕ್ಕೆ ಬರೆದ ಮುನ್ನುಡಿ ಎನ್ನಬಹುದು.

WhatsApp Image 2025 06 28 at 5.21.53 PM 1
2024ರಲ್ಲಿ ಅತಿಹೆಚ್ಚು ದ್ವೇಷ ಭಾಷಣ ಮಾಡಿದ ಬಿಜೆಪಿ ನಾಯಕರ ಪಟ್ಟಿ

ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಮಾಡಿದ ಕೆಲವು ಭಾಷಣಗಳ ಸ್ಯಾಂಪಲ್ ಹೀಗಿವೆ:

“ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಅವರು (ಕಾಂಗ್ರೆಸ್ ಪಕ್ಷದವರು) ಅಧಿಕಾರದಲ್ಲಿದ್ದಾಗ ಹೇಳಿದ್ದರು. ಇದರರ್ಥ ನಿಮ್ಮ ಸಂಪತ್ತು ಸಂಗ್ರಹಿಸಿ ಹೆಚ್ಚು ಮಕ್ಕಳನ್ನು ಹೆರುವವರಿಗೆ ನೀಡುತ್ತಾರೆ. ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ನುಸುಳುಕೋರರಿಗೆ ನೀಡಲು ಬಯಸುತ್ತೀರಾ? ಆದರೆ ನಮ್ಮ ತಾಯಂದಿರ, ಸಹೋದರಿಯರ ಮಂಗಳಸೂತ್ರವನ್ನು ಕಸಿಯಲು ಈ ನಗರ ನಕ್ಸಲರು ಹೊರಟಿದ್ದಾರೆ.”
(ಏಪ್ರಿಲ್ 21ರಂದು ರಾಜಸ್ಥಾನದ ಬನ್ಸ್‌ವಾಡದಲ್ಲಿ ಮಾಡಿದ ಭಾಷಣ)

“ನಾನು ಲ್ಯಾಂಡ್ ಜಿಹಾದ್ ಮತ್ತು ಲವ್ ಜಿಹಾದ್ ಬಗ್ಗೆ ಕೇಳಿದ್ದೆ, ಆದರೆ, ಈಗ ನನಗೆ ವೋಟ್ ಜಿಹಾದ್ ಬಗ್ಗೆ ಆತಂಕವಾಗುತ್ತಿದೆ.”
(ಮೇ 2 ರಂದು ಗುಜರಾತ್ನ ಆನಂದ್ನಲ್ಲಿ ಮಾಡಿದ ಭಾಷಣ)

“ಪ್ರತಿಪಕ್ಷಗಳು ಎಲ್ಲ ಮೀಸಲಾತಿಗಳನ್ನು ಕಿತ್ತು ಮುಸ್ಲಿಮರಿಗೆ ನೀಡಬೇಕೆಂದು ಹೇಳುತ್ತಿವೆ. ಇದು ನಮ್ಮ ದೇಶದ ದಲಿತರು ಮತ್ತು ಒಬಿಸಿಗಳಿಗೆ ಮಾಡುತ್ತಿರುವ ಅನ್ಯಾಯ.”
(ಮೇ 7ರಂದು ಮಹಾರಾಷ್ಟ್ರದ ಬೀಡ್‌ನಲ್ಲಿ ಮೋದಿ ಮಾಡಿದ ಭಾಷಣ)

ಇದನ್ನೂ ಓದಿರಿ: Exclusive: ಒಳಮೀಸಲಾತಿ ಸಮೀಕ್ಷೆ- ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಗತಿ? ಇಲ್ಲಿದೆ ಸಂಪೂರ್ಣ ವಿವರ

“ಇಂದು ಜಾರ್ಖಂಡ್‌ನಲ್ಲಿ ನಮ್ಮ ಧಾರ್ಮಿಕ ಶ್ರದ್ಧೆ ಮತ್ತು ಆಸ್ತಿಕ ನಂಬಿಕೆ ಸಂಪ್ರದಾಯಗಳನ್ನು ಆಚರಿಸುವುದು ಕಷ್ಟಕರವಾಗಿದೆ. ನಮ್ಮ ದೇವರುಗಳ ವಿಗ್ರಹಗಳನ್ನು ನಾಶಪಡಿಸಲಾಗುತ್ತಿದೆ. ಜಿಹಾದಿ ಮನಸ್ಥಿತಿ ಹೊಂದಿರುವ ನುಸುಳುಕೋರರು ಗುಂಪುಗೂಡಿ ದಾಳಿ ಮಾಡುತ್ತಿದ್ದಾರೆ. ಆದರೆ ಜಾರ್ಖಂಡ್ ಸರ್ಕಾರ ಸುಮ್ಮನೆ ನಿಂತು ನೋಡುತ್ತಿದೆ. ದೂರ ನಿಂತುಕೊಂಡೇ ನುಸುಳುಕೋರರನ್ನು ಬೆಂಬಲಿಸುತ್ತಿದೆ. ಈ ನುಸುಳುಕೋರರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಭದ್ರತೆಗೆ ಬೆದರಿಕೆ ಹಾಕಿದ್ದಾರೆ.”
(ಮೇ 14ರಂದು ಜಾರ್ಖಂಡ್‌ನಲ್ಲಿ ಮಾಡಿದ ಭಾಷಣ)

“ಒಂದು ಕಡೆ ವಿಕಾಸ [ಅಭಿವೃದ್ಧಿ] ಇದೆ, ಮತ್ತೊಂದೆಡೆ ವೋಟ್ ಜಿಹಾದ್ ಇದೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ? ಅಭಿವೃದ್ಧಿ ಅಥವಾ ವೋಟ್ ಜಿಹಾದ್? ಜಿಹಾದ್‌ಗೆ ಮತ ಹಾಕುವ ಜನರನ್ನು ಮೆಚ್ಚಿಸಲು, ಅವರು ರಾಮ ಮಂದಿರ ತೀರ್ಪನ್ನು ವಿಳಂಬ ಮಾಡುತ್ತಲೇ ಇದ್ದರು.”
(ಮೇ 17ರಂದು ಹರಿಯಾಣದ ಸೋನಿಪತ್‌ನಲ್ಲಿ ಮಾಡಿದ ಭಾಷಣ)

ಇದನ್ನೂ ಓದಿ: ಬಿಜೆಪಿ ವರಿಷ್ಠರಿಂದ ಬಿಎಸ್‌ವೈಗೆ ಉಸ್ತುವಾರಿ ಹೊಣೆ; ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!

ಹೀಗೆ ಮುಂದುವರಿಯುತ್ತಲೇ ಇತ್ತು ಮೋದಿಯವರ ದ್ವೇಷ ಭಾಷಣಗಳ ಸರಣಿ. ಅಭಿವೃದ್ಧಿ ಗೌಣವಾಗಿತ್ತು. ಮುಸ್ಲಿಂ ದ್ವೇಷ ಮಿತಿ ಮೀರಿತ್ತು. ಲೋಕಸಭಾ ಚುನಾವಣಾ ಅವಧಿಯಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ನಂತರದಲ್ಲಿ, ಅತಿಹೆಚ್ಚು ದ್ವೇಷ ಭಾಷಣ ಮಾಡಿದವರು ಪ್ರಧಾನಿ ಮೋದಿ! ‘ಸೆಂಟರ್ ಫಾರ್ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್’ ಸಂಸ್ಥೆಯ ‘ದಿ ಇಂಡಿಯಾ ಹೇಟ್ ಲ್ಯಾಬ್’ ಹೊರಬಿಟ್ಟಿರುವ ‘Hate Speech Events in India – Report 2024’ ಈ ಸಂಗತಿಗಳನ್ನು ತೆರೆದಿಟ್ಟಿತ್ತು.

ಈಗ ನೋಡುತ್ತಿರುವುದು ಈ ಘಟನೆಗಳ ಮುಂದುವರಿಕೆಯಷ್ಟೇ. ವಿಷಬೀಜವನ್ನು ಬಿತ್ತಿ ಅಮೃತ ಫಲವನ್ನು ನಿರೀಕ್ಷಿಸುವುದು ತಪ್ಪಾದೀತು. ಆಳುವವರೇ ದ್ವೇಷವನ್ನು ಉದ್ಧೀಪಿಸಿದ ಮೇಲೆ ಅದನ್ನು ತಡೆಯುವುದು ಬಹಳ ಕಷ್ಟ. ಈಗ ಅದರ ನಿಜ ಫಲಗಳು ಗೋಚರಿಸುತ್ತಿವೆ.

ಮತದಾನ, ಧಾರ್ಮಿಕ ಹಬ್ಬಗಳು, ಮತ್ತು ಸಾಂಸ್ಕೃತಿಕ ಸಂದರ್ಭಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಪ್ರವೃತ್ತಿ, ಕೋಮು ಸಂಘರ್ಷಕ್ಕೆ ಹಾದಿ ಮಾಡುತ್ತಿರುವುದನ್ನು ಈ ವರದಿ ಬಹಿರಂಗಪಡಿಸಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ ಮತ್ತು ದ್ವೇಷ ಭಾಷಣಗಳು, ರಾಜಕೀಯ ಕುತಂತ್ರಗಳು ಹೇಗೆ ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಿಗೆ ಧಕ್ಕೆ ತರುತ್ತಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾದ ಕಾಲ ಇದು.

ಮಾಹಿತಿ ಕೃಪೆ:
ʼದಿ ವೈರ್ʼ
ʼದಿ ಕ್ವಿಂಟ್ʼ

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

Download Eedina App Android / iOS

X