- ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಒಂದೇ ಒಂದು ಆಟದ ಮೈದಾನವಿಲ್ಲ
- ಬಯಲು ಬಹಿರ್ದೆಸೆಗೆ ಸೂಚಿಸಿದ್ದ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಬದಲಿಸಿದೆ
ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 26 ಸಾವಿರಕ್ಕೂ ಹೆಚ್ಚು ನಿವೇಶನಗಳು ನಿರ್ಮಾಣವಾಗುತ್ತಿವೆ. ಆದರೆ, ಇಲ್ಲಿ ಹಲವಾರು ಕುಂದು ಕೊರತೆಗಳಿವೆ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಆರೋಪಿಸಿದೆ.
ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಈ ಬಗ್ಗೆ ಮಂಗಳವಾರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದು, “26 ಸಾವಿರಕ್ಕೂ ಹೆಚ್ಚು ನಿವೇಶನಗಳು ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಒಂದೇ ಒಂದು ಆಟದ ಮೈದಾನವಿಲ್ಲ” ಎಂದು ದೂರಿದೆ.
“2,694 ಎಕರೆ ಜಾಗದಲ್ಲಿ ಬಡಾವಣೆ ನಿರ್ಮಾಣವಾಗುತ್ತಿದ್ದರೂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಯಲು ಬಹಿರ್ದೆಸೆಗೆ ಸೂಚಿಸಿದ್ದ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಬದಲಿಸಿದೆ. ಕಳೆದ 13 ವರ್ಷಗಳಲ್ಲಿ ಬಿಡಿಎ ಶೇ.60ರಷ್ಟು ಸಿವಿಲ್ ಕಾಮಗಾರಿಗಳನ್ನು ಮಾತ್ರ ಮುಗಿಸಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ” ಎಂದು ತಿಳಿಸಿದೆ.
“ಚರಂಡಿಗಳು, ರಸ್ತೆಗಳು ಹಾಗೂ ವಿದ್ಯುತ್ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವೇದಿಕೆ ಕೆಲವು ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಬಡಾವಣೆ ರಚನೆಗೆ ಅಧಿಸೂಚಿತ 1,400 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಗುತ್ತಿರುವ ವಿಳಂಬವನ್ನು ಪರಿಶೀಲಿಸಿ, ಗುತ್ತಿಗೆದಾರರು ಎತ್ತಿರುವ ಸಮಸ್ಯೆಗಳನ್ನು ಸರಿಪಡಿಸಿ, ಪ್ರಮುಖ ರಸ್ತೆಗಳ ಮೂಲ ಜೋಡಣೆಯನ್ನು ಉಳಿಸಿಕೊಳ್ಳಿ” ಎಂದು ವೇದಿಕೆ ಸದಸ್ಯರು ಸಚಿವ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಇಬ್ಬರು ಕಳ್ಳರಿಂದ 18 ಮೊಬೈಲ್, 11 ದ್ವಿಚಕ್ರ ವಾಹನ ವಶಪಡಿಸಿಕೊಂಡ ಪೊಲೀಸರು
ಇದಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, “ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳಸಹಿತ ಖುದ್ದಾಗಿ ಲೇಔಟ್ ಪರಿಶೀಲನೆ ನಡೆಸಲಾಗುವುದು” ಎಂದು ಹೇಳಿದರು.