ಅಸ್ಸಾಂನಲ್ಲಿ ಸರ್ಕಾರಿ ಭೂಮಿ ಮತ್ತು ಇತರ ಅನಧಿಕೃತ ಹಿಡುವಳಿ ಎಂಬ ಹೆಸರಿನಲ್ಲಿ ಭೂಮಿಯಿಂದ ಹೊರಹಾಕುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ದುರದೃಷ್ಟವಶಾತ್ ಅವರೆಲ್ಲ ಮುಸ್ಲಿಂ ರೈತರೇ ಆಗಿದ್ದಾರೆ...
ಅಸ್ಸಾಂ ಸರ್ಕಾರವು ಕೃಷಿ ಭೂಮಿಯಿಂದ ಮುಸ್ಲಿಂ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮತ್ತು ಅವರು ವಾಸಿಸುವ ಮನೆಯಿಂದ ಹೊರಹಾಕಲು ಹವಣಿಸುತ್ತಿದೆ. ಅದರಲ್ಲೂ, ಪಶ್ಚಿಮ (ಕೆಳ) ಅಸ್ಸಾಂ ಜಿಲ್ಲೆಗಳ ಬಂಗಾಳಿ ಜನಾಂಗದ ಮುಸ್ಲಿಮರನ್ನು ಹೊರಹಾಕುವುದು ಅಸ್ಸಾಂ ಸರ್ಕಾರದ ಮುಖ್ಯ ಗುರಿಯೂ ಆಗಿದೆ. ಅದಕ್ಕಾಗಿ, ನಾನಾ ಪ್ರಯತ್ನಗಳನ್ನು ಮಾಡುತ್ತಿದೆ. ಆ ಪ್ರಯತ್ನದ ಭಾಗವಾಗಿ, ಜೂನ್ 16ರಂದು ಗೋಲ್‌ಪಾರ ಜಿಲ್ಲೆಯ ಹಸೀಲಾಬೀಲ್ ಗ್ರಾಮದಲ್ಲಿ ಬೃಹತ್ ಹೊರಹಾಕುವಿಕೆ ಕ್ರೌರ್ಯಗಳು ನಡೆದಿವೆ.
ಹಸೀಲಾಬೀಲ್ ಗ್ರಾಮದಲ್ಲಿ ನಡೆದ ಮನೆಗಳ ಧ್ವಂಸಗೊಳಿಸುವಿಕೆ ಮತ್ತು ಹೊರಹಾಕುವಿಕೆಯಿಂದ 650ಕ್ಕೂ ಹೆಚ್ಚು ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಮಾತ್ರವಲ್ಲದೆ, ಆ ಪ್ರದೇಶದಲ್ಲಿದ್ದ 5 ಸರ್ಕಾರಿ ಶಾಲೆಗಳನ್ನು ನೆಲಸಮಗೊಳಿಸಲಾಗಿದ್ದು, ನೂರಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಆದರೆ, ಈ ಕುಟುಂಬಗಳು ಗೋಲ್‌ಪಾರ ಮತ್ತು ಬೊಂಗೈಗಾಂವ್ ಜಿಲ್ಲೆಗಳಿಗೆ ಸಂಪರ್ಕ ಒದಗಿಸುವ, ಬ್ರಹ್ಮಪುತ್ರ ನದಿಗೆ ಕಟ್ಟಲಾಗಿರುವ ನರನಾರಾಯಣ ಸೇತುವೆ ಬಳಿಯ ಹಳ್ಳಿಗಳಿಂದ 1997ರಲ್ಲಿ ಇಲ್ಲಿಗೆ ಸ್ಥಳಾಂತರಗೊಂಡಿದ್ದಾಗಿ ಹೇಳಿಕೊಂಡಿವೆ. ಅಂದು ನರನಾರಾಯಣ ಸೇತುವೆ ಬಳಿಯಿಂದ ಇಲ್ಲಿಗೆ ಒಕ್ಕಲೆಬ್ಬಿಸಲಾಗಿತ್ತು. ಈಗ ಇಲ್ಲಿಂದಲೂ ಹೊರಹಾಕಲಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
1997ರಲ್ಲಿ ಹಸೀಲಾಬೀಲ್ ಗ್ರಾಮಕ್ಕೆ ಸ್ಥಳಾಂತರಗೊಂಡಾಗ, ನಮಗೆ ಯಾವುದೇ ಪರ್ಯಾಯ ವಸತಿ-ಭೂಮಿಯನ್ನು ನೀಡಲಿಲ್ಲ. ನಮ್ಮ ಭೂಮಿಯನ್ನು ಕಳೆದುಕೊಂಡು, ನಾವು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ ಎಂದು ನಿರಾಶ್ರಿತ ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಸ್ಥಳಾಂತರದ ಮೇಲೆ ಸ್ಥಳಾಂತರ
ಅಸ್ಸಾಂನಲ್ಲಿ ಸರ್ಕಾರಿ ಭೂಮಿ ಮತ್ತು ಇತರ ಅನಧಿಕೃತ ಹಿಡುವಳಿ ಎಂಬ ಹೆಸರಿನಲ್ಲಿ ಭೂಮಿಯಿಂದ ಹೊರಹಾಕುವ ಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ನದಿ ಸವೆತ ಮತ್ತು ಆಗಾಗ್ಗೆ ಸಂಭವಿಸುವ ಪ್ರವಾಹಗಳಿಂದಾಗಿ ರಾಜ್ಯವು ಈಗಾಗಲೇ ಪರಿಸರ ಮತ್ತು ಗ್ರಾಮೀಣ ಜೀವನೋಪಾಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿಯೇ ಈ ಒಕ್ಕಲೆಬ್ಬಿಸುವ ದೌರ್ಜನ್ಯಗಳೂ ನಡೆಯುತ್ತಿವೆ.
ಅಸ್ಸಾಂನಲ್ಲಿ ಪ್ರವಾಹ ಮತ್ತು ನದಿ ಸವೆತದಿಂದಾಗಿ 4,000 ಚದರ ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶವು ನಾಶವಾಗಿದೆ. ಇದರಿಂದಾಗಿ ಅಂದಾಜು 5 ಲಕ್ಷ ಕುಟುಂಬಗಳು ಸ್ಥಳಾಂತರಗೊಂಡಿವೆ. ಜೊತೆಗೆ, ಸರ್ಕಾರಿ ಮತ್ತು ಖಾಸಗಿ ಯೋಜನೆಗಳಿಗಾಗಿಯೂ ಜನರನ್ನು ತಮ್ಮ ಹೊಲಗಳು ಮತ್ತು ಮನೆಗಳಿಂದ ಸ್ಥಳಾಂತರಿಸುವ ಕ್ರೌರ್ಯಗಳೂ ನಡೆದಿವೆ.
2021ರಲ್ಲಿ ದರ್ರಾಂಗ್ ಜಿಲ್ಲೆಯ ಗೋರುಖುತಿಯಲ್ಲಿ ಬಂಗಾಳಿ ಜನಾಂಗದ 2,000ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಯಿತು. ಅವರ ಮನೆಗಳನ್ನು ಧ್ವಂಸಗೊಳಿಸಿ, ಭೂಮಿಯನ್ನು ಕಸಿದುಕೊಳ್ಳಲಾಯಿತು. ಈ ವೇಳೆ ನಡೆದ ಪ್ರತಿಭಟನೆಯಲ್ಲಿ ಇಬ್ಬರು ರೈತರ ಹತ್ಯೆಯೂ ನಡೆದುಹೋಯಿತು.
ಗೋರುಖುತಿಯಲ್ಲಿ ರೈತರನ್ನು ಹೊರಹಾಕಿ, ಅಲ್ಲಿ ಕೃಷಿ ಯೋಜನೆಯನ್ನು ನಿರ್ಮಿಸಿತು. ಹಿಮಾಂತ ಬಿಸ್ವಾ ಶರ್ಮಾ ಸರ್ಕಾರವು ಅಸ್ಸಾಂ ವಿಧಾನಸಭೆಯಲ್ಲಿ ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, ಸರ್ಕಾರವು ವಾರ್ಷಿಕ 16.1 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ ಕೇವಲ 1.51 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. ಆದರೆ, ಅಲ್ಲಿನ ರೈತರು ತಮ್ಮ ಆ ಭೂಮಿಯನ್ನು ಸಾಗುವಳಿ ಮಾಡಿಯೇ, ರಾಜ್ಯದ ದೇಶೀಯ ಉತ್ಪನ್ನಕ್ಕೆ ಇದಕ್ಕಿಂತ ಹೆಚ್ಚಿನ ಆದಾಯ ಒದಗಿಸುತ್ತಿದ್ದರು.
ಕಾಮರೂಪ್‌ನ ಕಚುತಾಲಿ ಒಕ್ಕಲೆಬ್ಬಿಸುವಿಕೆ
ಕಾಮರೂಪ್ ಜಿಲ್ಲೆಯ ಸೋನಾಪುರ್ ಪ್ರದೇಶದ ಕಚುತಾಲಿಯಲ್ಲಿ ಮತ್ತೊಂದು ಪ್ರಮುಖ ಒಕ್ಕಲೆಬ್ಬಿಸುವಿಕೆ ನಡೆದಿದೆ. 2024ರ ಸೆಪ್ಟೆಂಬರ್‌ನಲ್ಲಿ ವಿವಿಧ ಸ್ಥಳಗಳಿಂದ ಬಂದ ಬಂಗಾಳಿ ಜನಾಂಗದ 1,200ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಅವರ ಭೂಮಿ ಮತ್ತು ಮನೆಗಳಿಂದ ಹೊರಹಾಕಲಾಯಿತು.
ಅಧಿಕಾರಿಗಳು ಬಹಿರಂಗವಾಗಿ ಗುಂಡು ಹಾರಿಸುವ ಮೂಲಕ ಹಿಂಸಾತ್ಮಕ ಕಾರ್ಯಾಚರಣೆ ನಡೆಸಿದರು. ಅಧಿಕಾರಿಗಳ ದಾಳಿಗೆ ಇಬ್ಬರು ರೈತರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡರು. ಕಚುತಾಲಿಯಿಂದ ಆ ಕುಟುಂಬಗಳನ್ನು ಕೂಡ ಹಸೀಲಾಬೀಲ್ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ, ಅವರು ಮಣ್ಣಿನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು.
ಅಧಿಕಾರಿಗಳು ಹೇಳುವಂತೆ, ಕಚುತಾಲಿಯಲ್ಲಿ ಈ ಕುಟುಂಬಗಳು ಬುಡಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರು. ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. 1886ರ ಅಸ್ಸಾಂ ಭೂ ಮತ್ತು ಕಂದಾಯ ನಿಯಂತ್ರಣ ಕಾಯ್ದೆಯು ಬುಡಕಟ್ಟು ಜನಾಂಗದವರಿಗೆ ಭೂ ಮಾಲೀಕತ್ವವನ್ನು ನಿರ್ಬಂಧಿಸುತ್ತದೆ. ಮಾತ್ರವಲ್ಲದೆ, ಬುಡಕಟ್ಟು ಸಮುದಾಯಕ್ಕೆ ಸೇರದ ವ್ಯಕ್ತಿಗಳು ಕೂಡ ಈ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸುವುದನ್ನು ನಿಷೇಧಿಸಿದೆ.
ಸವೆತ ಸಂತ್ರಸ್ತರು vs ಬುಡಕಟ್ಟು ಭೂ ಕಾನೂನು
ಒಕ್ಕಲೆಬ್ಬಿಸಲಾದ ಕುಟುಂಬಗಳು ನದಿ ಸವೆತದಿಂದಾಗಿ ಮೋರಿಗಾಂವ್ ಮತ್ತು ಬಾರ್ಪೇಟಾ ಜಿಲ್ಲೆಗಳಲ್ಲಿ ತಮ್ಮ ಮೂಲ ಭೂಮಿಯನ್ನು ಕಳೆದುಕೊಂಡು ಹಸೀಲಾಬೀಲ್ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದರು. 1980ರ ದಶಕದಲ್ಲಿ ಈ ಪ್ರದೇಶವನ್ನು ಬುಡಕಟ್ಟು ಪ್ರದೇಶ ಎಂದು ಘೋಷಿಸುವುದಕ್ಕೂ ಮೊದಲು, ಅವರೆಲ್ಲರೂ ಬುಡಕಟ್ಟು ಜನಾಂಗದವರಿಂದ ಈ ಭೂಮಿಯನ್ನು ಖರೀದಿಸಿದ್ದರು.
”ಬುಡಕಟ್ಟು ಸಮುದಾಯದವರು ಭೂಮಿಯನ್ನು ಸಾಗುವಳಿ ಮಾಡುತ್ತಿರಲಿಲ್ಲ. ಆ ಭೂಮಿಯನ್ನು ನಮ್ಮ ಪೂರ್ವಜರು ಖರೀದಿಸಿದ್ದರು. ಆದರೆ, ಈಗ ಬುಡಕಟ್ಟು ಸಮುದಾಯದ ಕೆಲವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ನಾವು ಅವರಿಗೆ ಹಣ ನೀಡಲು ನಿರಾಕರಿಸಿದ ಕಾರಣ, ಅವರು ಆಡಳಿತಕ್ಕೆ ದೂರು ನೀಡಿದ್ದು, ಭೂಮಿಯನ್ನು ತಮಗೆ ಮರಳಿ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ” ಎಂದು ಸ್ಥಳಾಂತರಗೊಂಡ ಯುವಕನೊಬ್ಬ ತಿಳಿಸಿದ್ದಾನೆ.
ಈ ಲೇಖನ ಓದಿದ್ದೀರಾ?: ರೈತರೊಂದಿಗೆ ಸಿಎಂ ಸಭೆ ಜು. 4ಕ್ಕೆ ಏಕೆ, ಭೂದಾಹಿಗಳ ಮಸಲತ್ತೇನು?
ಈ ಬಡ ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸುವಂತೆ ಅಲ್ಲಿನ ಬುಡಕಟ್ಟು ಸಮುದಾಯಗಳು ಸರ್ಕಾರವನ್ನು ಒತ್ತಾಯಿಸುತ್ತಿವೆ. ಅಲ್ಲದೆ, ಬಂಗಾಳಿ ಜನಾಂಗೀಯ ಮುಸ್ಲಿಂ ರೈತರನ್ನು ‘ಭೂ ಬಾಕ ಮುಸ್ಲಿಮರು’ ಎಂದು ಆರೋಪಿಸಲಾಗಿದೆ. ಆದರೂ, ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಕೈಗಾರಿಕೆಗಳಿಗೆ ಇಂತಹ ಹಣೆಪಟ್ಟಿ ಕಟ್ಟಲಾಗಿಲ್ಲ.
ವಲಸೆ ಮಾತ್ರವಲ್ಲ, ಹವಾಮಾನ ಬಿಕ್ಕಟ್ಟು
ಒಕ್ಕಲೆಬ್ಬಿಸುವಿಕೆ, ಭೂಮಿ ಮೇಲಿನ ಹಕ್ಕುಗಳು ಹಾಗೂ ಪ್ರತಿ-ಹಕ್ಕುಗಳ ಜೊತೆಗೆ ನದಿ ಸವೆತ ಮತ್ತು ಆಗಾಗ್ಗೆ ಸಂಭವಿಸುವ ಪ್ರವಾಹಗಳು ಭೂಮಿ ಮತ್ತು ಆದಾಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಿದೆ. ಅಸ್ಸಾಂ ಸರ್ಕಾರದ ಪ್ರಕಾರ, ರಾಜ್ಯದ ಒಟ್ಟು 78.523 ಲಕ್ಷ ಹೆಕ್ಟೇರ್ ಭೂಮಿಯ ಪೈಕಿ, 31.05 ಲಕ್ಷ ಹೆಕ್ಟೇರ್ (39.58%) ಭೂಮಿಯು ಪ್ರವಾಹ ಪೀಡಿತ ಪ್ರದೇಶವಾಗಿದೆ. 1950ರಿಂದ ಈವರೆಗೆ ನದಿ ಸವೆತದಿಂದಾಗಿ ರಾಜ್ಯದಲ್ಲಿ 4.27 ಲಕ್ಷ ಹೆಕ್ಟೇರ್ (7.40%) ಭೂಮಿ ನಾಶವಾಗಿದೆ. ನದಿ ಸವೆತ ಮತ್ತು ಪ್ರವಾಹಗಳು ರಾಜ್ಯಕ್ಕೆ ವಾರ್ಷಿಕವಾಗಿ ಸರಾಸರಿ 200 ಕೋಟಿ ರೂ. ನಷ್ಟ ಉಂಟು ಮಾಡುತ್ತಿವೆ. ಅದರಲ್ಲೂ ಹೆಚ್ಚಿನ ನಷ್ಟ ಸಂಭವಿಸುವುದು ಬಂಗಾಳಿ ಮುಸ್ಲಿಮರು ಹೆಚ್ಚಾಗಿ ಕೃಷಿ ಮಾಡುತ್ತಿರುವ ನದಿ ದಂಡೆಯ ಭೂಮಿಗಳಲ್ಲಿ.
ಈ ನಡುವೆ, ಬಂಗಾಳಿ ಮುಸ್ಲಿಮರಿಗೆ ‘ಬಾಂಗ್ಲಾದೇಶದ ಒಳನುಸುಳುಕೋರರು’, ‘ಅಕ್ರಮ ವಲಸಿಗರು’ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೂ, ನದಿ ಸವೆತ ಮತ್ತು ಪುನರಾವರ್ತಿತ ಪ್ರವಾಹಗಳಿಂದ ಉಂಟಾಗುವ ಪರಿಸರ, ಗ್ರಾಮೀಣ ಜೀವನೋಪಾಯ ಹಾಗೂ ಬಲವಂತದ ವಲಸೆ ಬಿಕ್ಕಟ್ಟುಗಳನ್ನು ಸರ್ಕಾರವು ಪರಿಹರಿಸದಿದ್ದರೆ, ಗಂಭೀರ ಪರಿಣಾಮಗಳನ್ನು ರಾಜ್ಯವು ಎದುರಿಸಬೇಕಾಗುತ್ತದೆ.
ಜೊತೆಗೆ, ಯಾರ್ಲುಂಗ್ ತ್ಸಾಂಗ್ಪೊ (ಬ್ರಹ್ಮಪುತ್ರ) ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಚೀನಾ ಯೋಜಿಸುತ್ತಿದೆ. ಇದು, ಅಸ್ಸಾಂನ ಚಾರ್ ಪ್ರದೇಶದಲ್ಲಿ ವಾಸಿಸುವ ಮತ್ತು ಕೃಷಿ ಮಾಡುವ ಸಮುದಾಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಈ ಸವಾಲನ್ನು ಅಸ್ಸಾಂ ಮತ್ತು ಭಾರತ ಸರ್ಕಾರಗಳು ಎದುರಿಸಿ, ನಿಭಾಯಿಸುತ್ತವೆಯೇ ಅಥವಾ ಹೆಚ್ಚುತ್ತಿರುವ ಬಡತನ, ಕ್ಷೀಣಿಸುತ್ತಿರುವ ಆದಾಯ ಹಾಗೂ ಹವಾಮಾನ ಬಿಕ್ಕಟ್ಟನ್ನು ಸಹಿಸಿಕೊಂಡು, ಬಡ ಬಂಗಾಳಿ ಮುಸ್ಲಿಮರನ್ನು ಹೊರಹಾಕುವುದನ್ನು ಮುಂದುವರಿಸುತ್ತವೆಯೇ? ಸರ್ಕಾರಗಳೇ ಉತ್ತರಿಸಬೇಕಿದೆ.
ಅಂದಹಾಗೆ ಇದೆಲ್ಲವೂ ನಡೆಯುತ್ತಿರುವುದು ಬಿಜೆಪಿ ಆಡಳಿತದ ಹಿಮಾಂತ ಬಿಸ್ವಾ ಶರ್ಮಾ ಸರ್ಕಾರದಲ್ಲಿ, ಅಸ್ಸಾಂನಲ್ಲಿ.
ಮೂಲ: ದಿ ಕ್ವಿಂಟ್