ಐಫೋನ್ ಕದ್ದು ಉನ್ನತ ಗುಣಮಟ್ಟದ ರೀಲ್ಸ್ ಮಾಡಲು ಬೆಂಗಳೂರು ಮೂಲದ ಯುವಕನ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯನ್ನು ಬೆಂಗಳೂರು ಮೂಲದ ಶಾದಾಬ್ (19) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ.
ಉತ್ತರ ಪ್ರದೇಶದ ಬಹ್ರೈಚ್‌ನ ಉನ್ನತ ನಾಲ್ವರು ಅಪ್ರಾಪ್ತರಿಗೆ ರೀಲ್ಸ್ ಮಾಡುವುದಕ್ಕೆ ಐಫೋನ್ ಬೇಕಾಗಿತ್ತು. ಇದೇ ವೇಳೆ ಮೃತ ಯುವಕ ತಮ್ಮ ಮಾವನ ಮದುವೆಗಾಗಿ ಉತ್ತರ ಪ್ರದೇಶಕ್ಕೆ ತೆರಳಿದ್ದ. ಯುವಕನ ಬಳಿ ಐಫೋನ್ ಇರುವುದನ್ನು ನೋಡಿದ ನಾಲ್ವರು ಅಪ್ರಾಪ್ತರು ಕೊಲೆಗೆ ಸಂಚು ರೂಪಿಸಿದರು.
ಮರುದಿನ ಶಾಬಾದ್‌ನನ್ನು ವಿಡಿಯೋ ಚಿತ್ರೀಕರಿಸಬೇಕೆಂದು ಹೇಳಿ, ಗ್ರಾಮದ ಹೊರಗಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವನ ಕತ್ತು ಸೀಳಿ, ಬಳಿಕ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಜೂ.20ರಂದು ಕೊಳವೆ ಬಾವಿಯ ಬಳಿ ಆತನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರು ಅಪ್ರಾಪ್ತರು ಹಾಗೂ ಕೊಲೆಗೆ ಸಹಕರಿಸಿದ ಆರೋಪಿಗಳ ಸಂಬಂಧಿಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಇಬ್ಬರು ಅಪ್ರಾಪ್ತರು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮೃತ ಯುವಕ ಊರಿಗೆ ಬಂದಾಗ ಆತನ ಬಳಿಯಿರುವ ಐಫೋನ್ ನೋಡಿ, ನಾಲ್ಕು ದಿನಗಳ ಹಿಂದೆಯೇ ಕೊಲೆಗೆ ಸಂಚು ರೂಪಿಸಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಆರೋಪಿಗಳಿಂದ ಐಫೋನ್, ಕೊಲೆಗೆ ಬಳಸಿದ ಚಾಕು ಹಾಗೂ ಇಟ್ಟಿಗೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದು, ನಾಲ್ವರ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಅಪ್ರಾಪ್ತರನ್ನು ಬಾಲಾಪರಾಧಿ ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಓರ್ವ ಸಂಬಂಧಿಯನ್ನು ಜೈಲಿಗೆ ಕಳುಹಿಸಲಾಗಿದೆ.