ಸಂವಿಧಾನದ ಪ್ರಸ್ತಾವನೆಯಲ್ಲಿರುವ ಸಮಾಜವಾದ ಮತ್ತು ಜಾತ್ಯತೀತ ಪದಗಳಿಗೆ ಭಾರತದ ನಾಗರೀಕತೆಯಲ್ಲಿ ಯಾವುದೇ ಜಾಗವಿಲ್ಲ ಹೀಗಾಗಿ ಸಂವಿಧಾನ ಪೀಠಿಕೆಯಲ್ಲಿ ಅವೆರಡು ಪದಗಳು ಅಪ್ರಸ್ತುತ ಎಂದು ಅಸ್ಸಾಂ ರಾಜ್ಯದ ಬಿಜೆಪಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವೆರಡು ಪದಗಳು ಪಾಶ್ಚಾತ್ಯ ಪರಿಕಲ್ಪನೆಗಳಾಗಿದ್ದು ಈ ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು’ ಎಂದು ಅವರು ಹೇಳಿದ್ದಾರೆ.
ಸಂವಿಧಾನ ಪ್ರಸ್ತಾವನೆಯಲ್ಲಿ ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಕಿತ್ತುಹಾಕಬೇಕೆಂಬ ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೊಸ ಬೆಂಕಿ ಹಚ್ಚಿರುವುದು ಗಂಭೀರವಾಗಿ ಚರ್ಚೆ ನಡೆಯಬೇಕಾಗಿರುವ ಸಂದರ್ಭದಲ್ಲೇ ಈಗ ಬಿಜೆಪಿಯ ನಾಯಕರು ಸಂವಿಧಾನದ ಪ್ರಸ್ತಾವನೆ ಬಗ್ಗೆ ಕಿಡಿ ಹಚ್ಚುತ್ತಿರುವುದು ಮತ್ತೆ ಸದ್ದಾಗಿದೆ. ಈಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ಕೂಡ ದೊಡ್ಡ ಸುದ್ದಿಗೆ ಎಡೆಮಾಡಿಕೊಟ್ಟಿದೆ.
‘ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾತ್ಯತೀತ ಮತ್ತು ಸಮಾಜವಾದ ಪದಗಳನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದ್ದಾರೆ. ಆದರೆ ಅವು ಭಾರತೀಯ ಸಂಸ್ಕೃತಿಗೆ ಹೊಂದಿಕೆ ಆಗದ ಪದಗಳು. ಈಗ ನಾನೊಬ್ಬ ಕಟ್ಟರ್ ಹಿಂದುತ್ವವಾದಿ, ಹೀಗಿರುವಾಗ ಸಂವಿಧಾನದ ಅಡಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿರುವ ನಾನು ಅದು ಹೇಗೆ ಜಾತ್ಯತೀತನಾಗಲಿ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೊಹರಂ ನಿಷೇಧ; ರಾಯಚೂರು ಜಿಲ್ಲಾಧಿಕಾರಿ ಕೊಟ್ಟ ಸಂದೇಶವೇನು?
ಭಾರತದ ಜಾತ್ಯತೀತ ಎಂಬ ಪದದ ಅರ್ಥ ತಟಸ್ಥವಾಗಿರುವುದಲ್ಲ, ಬದಲಿಗೆ ಸಕಾರಾತ್ಮವಾಗಿ ಆಲೋಚಿಸುವುದಾಗಿದೆ. ಆದರೆ ಜಾತ್ಯತೀತ ಪದವನ್ನು ಸಂವಿಧಾನದ ಪ್ರಸ್ತಾವನೆಯಲ್ಲಿ ಸೇರಿಸಿದ. ಇಂದಿರಾ ಗಾಂಧಿ ಪಾಶ್ಚಾತ್ಯ ದೃಷ್ಟಿಕೋನದಿಂದ ಭಾರತವನ್ನು ನೋಡಿದವರು. ಹೀಗಾಗಿ ಇದನ್ನು ಪ್ರಸ್ತಾವನೆಯಿಂದ ತೆಗೆದುಹಾಕಬೇಕು’ ಎಂದು ಒತ್ತಿ ಹೇಳಿದ್ದಾರೆ.
ಗುವಾಹಟಿಯಲ್ಲಿ ‘ದಿ ಎಮರ್ಜೆನ್ಸಿ ಡೈರೀಸ್: ಇಯರ್ಸ್ ದಟ್ ಫೋರ್ಜ್ ಎ ಲೀಡರ್ ಎಂಬ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಕೃತಿಯಲ್ಲಿ ತಾವು ಆರ್‌ಎಸ್‌ಎಸ್ ಪ್ರಚಾರಕರಾಗಿದ್ದ ಸಂದರ್ಭದಲ್ಲಿನ ಕೆಲವೊಂದು ದಾಖಲೆಗಳು, ನರೇಂದ್ರ ಮೋದಿ ಅವರೊಂದಿಗೆ ಮಾಡಿದ ಕೆಲಸಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ. 1975ರಿಂದ 77ರವರೆಗಿನ ತುರ್ತುಪರಿಸ್ಥಿತಿ ಸಂದರ್ಭ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇದರ ವಿರುದ್ಧ ನಡೆಸಿದ ಹೋರಾಟವನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.
ತುರ್ತು ಪರಿಸ್ಥಿತಿ ಭವಿಷ್ಯದಲ್ಲಿ ಎದುರಾಗಬಾರದು ಎಂದರೆ ತುರ್ತು ಪರಿಸ್ಥಿತಿಯನ್ನು ನಾವು ಮರೆಯಲೂ ಬಾರದು. 1975ರ ಜೂನ್ 25ರಿಂದ 1977ರ ಮಾರ್ಚ್ 21ರವರೆಗೆ ಭಾರತದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಪತ್ರಿಕೆಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ವಿಚಾರಣೆ ಇಲ್ಲದೆ ಬಂಧಿಸಲಾಗುತ್ತಿತ್ತು. ಶಿಕ್ಷಣ, ನಾಗರಿಕ ಹಾಗೂ ಸಮಾಜದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿತ್ತು ಎಂದು ಬಿಸ್ವಾ ಹೇಳಿದ್ದಾರೆ.