ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರ ಸಂವಿಧಾನದಲ್ಲಿ ಅನಗತ್ಯ ಬದಲಾವಣೆಗಳನ್ನು ಮಾಡುತ್ತಿದೆ. ಸಂವಿಧಾನವನ್ನು ತಿರುಚಿದರೆ ಬಿಎಸ್‌ಪಿ ಸುಮ್ಮನಿರಲ್ಲ ಎಂದು ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಶನಿವಾರ ಹೇಳಿದ್ದಾರೆ.
‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಪೀಠಿಕೆಯಿಂದ ತೆಗೆದುಹಾಕಬೇಕೆಂಬ ಬಿಜೆಪಿ, ಆರ್‌ಎಸ್‌ಎಸ್ ಬೇಡಿಕೆಗಳ ಕುರಿತ ಮಾಧ್ಯಮಗಳ ಪ್ರಶ್ನೆಗೆ ಲಕ್ನೋದಲ್ಲಿ ಪ್ರತಿಕ್ರಿಯಿಸಿದ ಮಾಯಾವತಿ, “ಈಗ ಆರ್‌ಎಸ್‌ಎಸ್‌ನವರು, ಬಿಜೆಪಿಯವರು, ಕಾಂಗ್ರೆಸ್‌ನವರು ಏನು ಹೇಳುತ್ತಾರೆ ಎಂಬ ಬಗ್ಗೆ ಏನೂ ಹೇಳಲು ಬಯಸಲ್ಲ. ಆದರೆ ಸಂವಿಧಾನವನ್ನು ತಿರುಚಿದರೆ ನಮ್ಮ ಬಿಎಸ್‌ಪಿ ಪಕ್ಷ ಸುಮ್ಮನಿರಲ್ಲ. ಅದರ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯುತ್ತೇವೆ. ಎಲ್ಲವನ್ನೂ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ನಾಳಿನ ವಿಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಭಾಗವಹಿಸದಿರಲು ಮಾಯಾವತಿ ನಿರ್ಧಾರ
“ಡಾ. ಭೀಮರಾವ್ ಅಂಬೇಡ್ಕರ್ ಅವರು ತಮ್ಮ ಜೀವಮಾನದ ಅವಿಶ್ರಾಂತ ಹೋರಾಟಗಳ ಅನುಭವಗಳ ಆಧಾರದ ಮೇಲೆ, ದೇಶಕ್ಕೆ ಅತ್ಯಂತ ಮಾನವೀಯ ಸಂವಿಧಾನವನ್ನು ನೀಡಿದರು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, ಈಗ ಕೆಲವು ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಎಂದಿಗೂ ಜಾರಿಗೆ ತಂದಿಲ್ಲ” ಎಂದು ದೂರಿದ್ದಾರೆ.
“ಈ ಎರಡೂ ಪಕ್ಷಗಳು ಮತ್ತು ಅವರ ಬೆಂಬಲಿಗರು ತಮ್ಮ ಪಕ್ಷದ ಸಿದ್ಧಾಂತ ಮತ್ತು ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾಲಕಾಲಕ್ಕೆ ಸಂವಿಧಾನದಲ್ಲಿ ಅನೇಕ ಅನಗತ್ಯ ಬದಲಾವಣೆಗಳನ್ನು ಮಾಡಿದ್ದಾರೆ” ಎಂದು ಮಾಯಾವತಿ ಆರೋಪಿಸಿದ್ದಾರೆ.
“ಈ ಪಕ್ಷಗಳು ಶೀಘ್ರದಲ್ಲೇ ತಮ್ಮ ಸಂವಿಧಾನ ವಿರೋಧಿ ನಿಲುವನ್ನು ಬದಲಾಯಿಸದಿದ್ದರೆ, ದೇಶಾದ್ಯಂತ ಈ ಪಕ್ಷಗಳ ವಿರುದ್ಧ ನಾವು ಧ್ವನಿ ಎತ್ತಬೇಕಾಗುತ್ತದೆ” ಎಂದು ಎಚ್ಚರಿಕೆಯನ್ನೂ ನೀಡಿದರು.
