ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದಲಿತರೆಂಬ ಕಾರಣಕ್ಕೆ ಅವರ ಕುರ್ಚಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದ ಬೆಂಗಳೂರು ಪಶ್ವಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ, ಬೇರೆ ಕುರ್ಚಿ ಹಾಕಿಕೊಂಡು ಕುಳಿತಿದ್ದರೆಂಬ ಆರೋಪ ಕೇಳಿಬಂದಿದೆ. ಜಾತಿ ದೌರ್ಜನ್ಯ ನಡೆಸಿದ ನಿಂಬರಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ದೂರು ನೀಡಿದೆ.
ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಖಾಸಗಿ ಸಂಸ್ಥೆಯೊಂದು ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಳ್ಳಲು ನಿಂಬರಗಿ ವಿಜಯನಗರ ಠಾಣೆಗೆ ಬಂದಿದ್ದರು. ಈ ವೇಳೆ, ಸಂತೋಷ್ ಅವರ ಜಾತಿ ತಿಳಿದುಕೊಂಡು, ಅವರ ಕುರ್ಚಿಯಲ್ಲಿ ಕೂರದೆ, ಬೇರೆ ಕುರ್ಚಿ ಹಾಸಿಕೊಂಡು ಕುಳಿತು ಅಸ್ಪೃಶ್ಯತಾ ಆಚರಣೆ ಮಾಡಿದ್ದಾರೆ ಎಂದು ಒಕ್ಕೂಟ ಆರೋಪಿಸಿದೆ.
ಯಾವುದೇ ಠಾಣೆಗೆ ಮೇಲಧಿಕಾರಿಗಳು ಭೇಟಿ ನೀಡಿದಾಗ, ಆ ಠಾಣೆಯ ಮುಖ್ಯ ಅಧಿಕಾರಿಯ ಕುರ್ಚಿಯಲ್ಲಿಯೇ ಕುಳಿತುಕೊಳ್ಳುತ್ತಾರೆ. ಅಂತೆಯೇ ಬೇರೆ ಠಾಣೆಗಳಿಗೆ ಭೇಟಿ ನೀಡುವ ಡಿಸಿಪಿಗಳು ಆ ಠಾಣೆಯ ಇನ್ಸ್‌ಪೆಕ್ಟರ್‌ಗಳ ಕುರ್ಚಿಯಲ್ಲಿ ಕೂರುತ್ತಾರೆ. ಆದರೆ, ಡಿಸಿಪಿ ನಿಂಬರಗಿ ಅವರು ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್ ದಲಿತರೆಂಬ ಕಾರಣಕ್ಕೆ ಅವರು ಕುರ್ಚಿಯಲ್ಲಿ ಕೂರಲು ನಿರಾಕರಿಸಿದ್ದು, ಆ ಕುರ್ಚಿ ತೆಗೆಸಿ, ಅದೇ ಜಾಗದಲ್ಲಿ ಬೇರೆ ಕುರ್ಚಿ ಹಾಕಿಸಿಕೊಂಡು ಕುಳಿತಿದ್ದಾರೆ. ಶೋಷಿತ ಸಮುದಾಯಕ್ಕೆ ರಕ್ಷಣೆ ನೀಡಬೇಕಾದವರೇ ಜಾತಿ ದೌರ್ಜನ್ಯ ಎಸಗಿದರೆ, ದಮನಿತರ ಗತಿ ಏನು ಎಂದು ಒಕ್ಕೂಟದ ಸದಸ್ಯರು ಪ್ರಶ್ನಿಸಿದ್ದಾರೆ.
ಅಲ್ಲದೆ, ಬ್ಯಾಂಕ್‌ಗೆ ವಂಚಿಸಿದ ಖಾಸಗಿ ಸಂಸ್ಥೆಯ ವಿರುದ್ಧ ತನಿಖೆ ನಡೆಸದಂತೆ, ದೋಷಾರೋಪ ಪಟ್ಟಿ ಸಲ್ಲಿಸದಂತೆ ಇನ್ಸ್‌ಪೆಕ್ಟರ್ ಮೇಲೆ ಡಿಸಿಪಿ ಒತ್ತಡ ಹಾಕಿದ್ದಾರೆ. ಆದರೂ, ಸಂತೋಷ್ ಕುಮಾರ್ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಆರೋಪಿಗಳನ್ನು ಬಂಧಿಸದಂತೆ ಮತ್ತೆ ಒತ್ತಡ ಹಾಕಿದ್ದು, ಬಂಧನ ವಾರೆಂಟ್‌ಅನ್ನು ಬೇರೆ ಠಾಣೆಗೆ ವರ್ಗಾಯಿಸಿ, ಸಂತೋಷ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಡಿಸಿಪಿ ನಿಂಬರಗಿ ಆರೋಪಿಗಳ ರಕ್ಷಣೆಗೆ ಯತ್ನಿಸಿದ್ದಾರೆ. ಅವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಂದು ಒಕ್ಕೂಟದ ಸದಸ್ಯರು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಸಲ್ಲಿಸಿದ ದೂರಿನ ಪ್ರತಿಗೆ ಒಕ್ಕೂಟದ ಅಧ್ಯಕ್ಷ ಬಿ.ಗೋಪಾಲ್, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಒಳಮೀಸಲಾತಿ ಹೋರಾಟ ಸಮಿತಿಯ ಬಸವರಾಜ ಕೌತಾಳ್, ಭೀಮ್ ಆರ್ಮಿ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಎಂ.ಪಿ.ಗಿರೀಶ್ ದೇವನಹಳ್ಳಿ, ಸುರೇಶ್ ಸಹಿ ಹಾಕಿದ್ದಾರೆ.