ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತಂದೆಗೆ ಮಗನ ಲಿವರ್‌ನ ಭಾಗವನ್ನು ಜೋಡಿಸುವ ಮೂಲಕ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞ ವೈದ್ಯರ ತಂಡ ಶ್ಲಾಘನೀಯ ಸಾಧನೆ ದಾಖಲಿಸಿದೆ.
ರಾಯಬಾಗ ತಾಲೂಕಿನ ರೈತನೊಬ್ಬ ಲಿವರ್ ವೈಫಲ್ಯದಿಂದ ತೀವ್ರವಾಗಿ ಬಳಲುತ್ತಿದ್ದ ಸಂದರ್ಭ, ಚಿಕಿತ್ಸೆಗಾಗಿ ಲಿವರ್ ಕಸಿ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಈ ಸಂದರ್ಭದಲ್ಲಿ ಅವರ 26 ವರ್ಷದ ಮಗ ತನ್ನ ಲಿವರ್‌ನ ಭಾಗವನ್ನು ತಂದೆಗೆ ದಾನಮಾಡಿ ಮಾನವೀಯತೆ ಮೆರೆದಿದ್ದಾನೆ. ಈ ದಾನದ ಬೆನ್ನಲ್ಲೇ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಲಿವರ್ ಕಸಿ ಕಾರ್ಯಾಚರಣೆ ನೆರವೇರಿಸಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಯಾಸ್ಟೋಎಂಟ್ರಾಲಾಜಿ ತಜ್ಞ ಡಾ. ಸಂತೋಷ ಹಜಾರೆ, “ಕೊನೆಯ ಹಂತದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಅವರ ಪುತ್ರ ಲಿವರ್ ದಾನ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ದಾನಿ ಹಾಗೂ ದಾನ ಸ್ವೀಕರಿಸಿದ ರೋಗಿ ಇಬ್ಬರೂ ಸುಸ್ಥಿತಿಯಲ್ಲಿದ್ದು, ದಾನಿದಾರರು 8ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಾರೆ,” ಎಂದು ತಿಳಿಸಿದರು.
ಅತ್ಯಂತ ಸಂಕೀರ್ಣ ಹಾಗೂ ತಾಂತ್ರಿಕ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಯ ಡಾ. ಸೋನಲ್ ಅಸ್ತಾನಾ, ಡಾ. ವಚನ ಹುಕ್ಕೇರಿ, ಡಾ. ರೋಮೆಲ್ ಎಸ್ ಮತ್ತು ಬೆಳಗಾವಿಯ ಡಾ. ಸುದರ್ಶನ ಚೌಗಲೆ, ಡಾ. ಕಿರಣ್ ಉರಬಿನಹಟ್ಟಿ ನೇತೃತ್ವದ ತಂಡ ಯಶಸ್ವಿಯಾಗಿ ನೆರವೇರಿಸಿದೆ.
ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಮಾತನಾಡಿ, “ಕೆಎಲ್‌ಇ ಆಸ್ಪತ್ರೆ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನ, ನುರಿತ ಸಿಬ್ಬಂದಿ ಮತ್ತು ಶ್ರೇಷ್ಟ ಚಿಕಿತ್ಸಾ ಸೌಲಭ್ಯಗಳೊಂದಿಗೆ ಈ ಭಾಗದ ಪ್ರಮುಖ ಅಂಗಾಂಗ ಕಸಿ ಕೇಂದ್ರವಾಗಿ ಹೊರಹೊಮ್ಮಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ರೋಗಿಗಳು ಇಲ್ಲಿ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ,” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಬೆಳಗಾವಿಯಲ್ಲಿ ವಿಮಾನ ಅಪಘಾತ ಅಣಕು ಪ್ರದರ್ಶನ
ಇನ್ನು ವರದಿಯ ಪ್ರಕಾರ, ಸಂಸ್ಥೆಯಲ್ಲಿ ಇದುವರೆಗೆ 101 ಕ್ಕೂ ಹೆಚ್ಚು ಮೂತ್ರಪಿಂಡ, 22 ಲಿವರ್ ಹಾಗೂ 14 ಹೃದಯ ಕಸಿ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನೆರವೇರಿವೆ. ಅಸ್ಥಿಮಜ್ಜೆ ಕಸಿಯೂ ನಿರಂತರ ನಡೆಯುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಡಾ. ಮಾಧವ್ ಪ್ರಭು, ಡಾ. ರಾಜೇಶ್ ಮಾನೆ, ಡಾ. ಬಸವರಾಜ್ ಬಿಜರಗಿ ಮತ್ತಿತರರು ಉಪಸ್ಥಿತರಿದ್ದರು.