ಪೈಪ್‌ಲೈನ್ ಅಗೆಯುವ ಕೆಲಸದ ಸಮಯದಲ್ಲಿ ಮಣ್ಣು ಕುಸಿದು ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಇತರ ಐವರು ಮಣ್ಣಿನಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಂಗಿ ಕಾ ನಾಗ್ಲಾ ಗ್ರಾಮದ ಬಳಿ ಪೈಪ್‌ಲೈನ್ ಹಾಕಲು ಅಗೆದ 10 ಅಡಿ ಆಳದ ಕಂದಕವನ್ನು ಕಾರ್ಮಿಕರು ಮಣ್ಣಿನಿಂದ ತುಂಬುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಆರಂಭದಲ್ಲಿ ಹನ್ನೆರಡು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಆರಂಭದಲ್ಲಿ ಇತರ ಕಾರ್ಮಿಕರು ಮತ್ತು ಯೋಜನಾ ಸಿಬ್ಬಂದಿ ರಕ್ಷಣಾ ಪ್ರಯತ್ನಗಳನ್ನು ನಡೆಸಿದರು.
ಇದನ್ನು ಓದಿದ್ದೀರಾ? ಗುಜರಾತ್ | ವಿಷಕಾರಿ ಅನಿಲ ಸೇವನೆ; ನಾಲ್ವರು ಕಾರ್ಮಿಕರ ಸಾವು
ಆದರೆ ಮಣ್ಣಿನ ಆಳದಿಂದಾಗಿ ರಕ್ಷಣೆ ಕಷ್ಟವಾದಾಗ ಜಿಲ್ಲಾಡಳಿತ, ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ತಂಡಗಳು ಕೂಡಲೇ ಸ್ಥಳಕ್ಕೆ ಧಾವಿಸಿತು ಎಂದು ವರದಿಯಾಗಿದೆ. ರಕ್ಷಣಾ ತಂಡಗಳು ಮಣ್ಣು ತೆಗೆಯುವ ಯಂತ್ರಗಳನ್ನು ಬಳಸಿ ಮಣ್ಣನ್ನು ತೆಗೆದು ಸಿಲುಕಿದ್ದ ಕಾರ್ಮಿಕರನ್ನು ಹೊರತೆಗೆದಿದ್ದಾರೆ.
ಆರು ಕಾರ್ಮಿಕರನ್ನು ಮಣ್ಣಿನಿಂದ ಹೊರತೆಗೆಯಲಾಗಿದ್ದು ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಐವರು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
